ಬೆಂಗಳೂರು: ಕೆಳಗೆ ಮಲಗಿದ್ದ ವ್ಯಕ್ತಿಯನ್ನು ಗಮನಿಸದೆ, ಆತನ ಮೇಲೆ ಬಸ್ ಹತ್ತಿಸಿ ಸಾವಿಗೆ ಕಾರಣನಾದ ಚಾಲಕನನ್ನು ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಳವಳ್ಳಿ ನಿವಾಸಿ ವಿವೇಕ್(32) ಬಂಧಿತ ಚಾಲಕ.
ಶ್ರೀನಿವಾಸಯ್ಯ ಮೃತ ವ್ಯಕ್ತಿ. ಮಳವಳ್ಳಿ ಮೂಲದ ವಿವೇಕ್ ದೊಡ್ಡಬಳ್ಳಾಪುರದಲ್ಲಿರುವ ಶ್ರೀ ಟ್ರಾವೆಲ್ಸ್ ನಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕಂಪನಿ ಉದ್ಯೋಗಿಗಳನ್ನು ಡ್ರಾಪ್ ಆ್ಯಂಡ್ ಪಿಕಪ್ ಮಾಡುತ್ತಿದ್ದ. ಸೆ.5ರಂದು ತಡರಾತ್ರಿ ಕಾಮಾಕ್ಷಿಪಾಳ್ಯ ಬಸ್ ನಿಲ್ದಾಣ ಬಳಿ ಬಸ್ ನಿಲ್ಲಿಸಿದ್ದ. ಅದೇ ಬಸ್‌ನಲ್ಲಿ ರಾತ್ರಿ ಮಲಗಿದ್ದ. ಸೆ.6ರಂದು ಮುಂಜಾನೆ 6 ಗಂಟೆ ಸುಮಾರಿಗೆ ಎದ್ದು, ನೇರವಾಗಿ ಬಸ್ ಚಾಲನೆ ಮಾಡಿದ್ದ. ನಿಲ್ಲಿಸಿದ್ದ ಬಸ್ ಪಕ್ಕದಲ್ಲಿ ಮಲಗಿದ್ದ ಶ್ರೀನಿವಾಸಯ್ಯ ನಿದ್ರೆ ಮಂಪರಿನಲ್ಲಿ ಚಕ್ರದ ಕೆಳಗೆ ಹೊರಳಡಿದ್ದನ್ನು ಗಮನಿಸದೆ, ವಿವೇಕ್ ಬಸ್ ಚಲಾಯಿಸಿದ ಪರಿಣಾಮ ತಲೆ ಮೇಲೆ ಚಕ್ರ ಹರಿದು ಶ್ರೀನಿವಾಸಯ್ಯ ಸ್ಥಳದಲ್ಲೇ ಮೃತಪಟ್ಟಿದ್ದು, ಅಪಘಾತವೆಸಗಿರುವ ಬಗ್ಗೆ ಚಾಲಕನ ಗಮನಕ್ಕೆ ಬಂದಿಲ್ಲ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.
ಚಾಲಕನ ಬಂಧನಕ್ಕೆ 25 ಸಿಸಿ ಕ್ಯಾಮೆರಾ ಪರಿಶೀಲನೆ: ಘಟನೆ ಬಳಿಕ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸಂಚಾರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಸುತ್ತಮುತ್ತಲಿನ 25ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ವಿವೇಕ್ ಬಸ್ ಚಾಲನೆ ಮಾಡಿರುವುದು ಕಂಡುಬಂದಿತ್ತು. ಬಸ್ ನೋಂದಣಿ ಸಂಖ್ಯೆ ಆಧರಿಸಿ ಚಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.