ಬೆಂಗಳೂರು: ಪ್ರೇಯಸಿಯನ್ನು ಪ್ರಿಯಕರನೇ ಉಸಿರುಗಟ್ಟಿಸಿ ಕೊಲೆಗೈದಿರುವ ಘಟನೆ ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಒಡಿಶಾ ಮೂಲದ ದೀಪ ಪದಮ್(32) ಕೊಲೆ ಯಾದ ಮಹಿಳೆ. ಕೃತ್ಯ ಎಸಗಿದ ಆರೋಪಿ ಅನ್ಮಲ್ ರತನ್ ಕಂದರ್‌ಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಆರೋಪಿ ಅನ್ಮಲ್ ರತನ್ ಕಂದರ್ ಕೆಲ ವರ್ಷಗಳ ಹಿಂದೆ ದೀಪಾಲಿ ಎಂಬಾಕೆಯನ್ನು ಒಡಿಶಾದಲ್ಲಿ ಪ್ರೀತಿಸಿ ಮದುವೆಯಾಗಿದ್ದು, ಆರೋಪಿ ಬಾಟಾ ಶೋರೂಮ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. ದಂಪತಿ ಬೆಂಗಳೂರಿನ ಎಚ್‌ಎಎಲ್ ಸಮೀ ಪದಲ್ಲಿ ವಾಸವಾಗಿದ್ದರು. ಇದೇ ವೇಳೆ ಪತ್ನಿಯ ಸಹಪಾಠಿಯಾಗಿದ್ದ ದೀಪ ಪದಮ್‌ಳ ಸ್ನೇಹ ಬೆಳೆಸಿದ್ದ ಆರೋಪಿ, ಆಕೆ ಜತೆ ಅಕ್ರಮ ಸಂಬಂಧ ಹೊಂದಿದ್ದ. ಆಕೆಗೂ ತಾನೂ ಕೆಲಸ ಮಾಡುವ ಸಂಸ್ಥೆಯಲ್ಲಿ ಕೆಲಸ ಕೊಡಿಸಿದ್ದ. ಪತ್ನಿ ದೀಪಾಲಿಗೆ ತಿಳಿಯದೆ ಆರೋಪಿ ದೀಪ ಪದಮ್ ಮನೆಯಲ್ಲಿ ಭೇಟಿಯಾಗುತ್ತಿದ್ದ. ಈ ಮಧ್ಯೆ ದೀಪ ಪದಮ್ ಬೇರೊಬ್ಬ ಯುವಕನ ಜತೆ ಆತ್ಮೀಯವಾಗಿದ್ದರು.
ಈ ವಿಚಾರ ತಿಳಿದ ಆರೋಪಿ, ಜೂನ್ 9ರಂದು ಯಶವಂತಪುರ ರೈಲ್ವೆ ನಿಲ್ದಾಣ ಸಮೀಪದ ಲಾಡ್ಜ್ ವೊಂದಕ್ಕೆ ಕರೆದೊಯ್ದು ಆಕೆ ಜತೆ ದೈಹಿಕ ಸಂಪರ್ಕ ಬೆಳೆಸಿ, ಬೇರೊಬ್ಬನ ಜತೆ ಓಡಾಡುತ್ತಿಯಾ ಎಂದು ಜಗಳ ತೆಗೆದಿದ್ದಾನೆ. ಅದು ವಿಕೋಪಕ್ಕೆ ಹೋದಾಗ ತಲೆ ದಿಂಬು ಬಳಸಿ ಉಸಿರುಗಟ್ಟಿಸಿ ಕೊಲೆಗೈದು ಕೊಠಡಿಯ ಬೀಗ ಹಾಕಿಕೊಂಡು ಪರಾರಿಯಾಗಿದ್ದಾನೆ.
ಮರುದಿನ ಅನುಮಾನಗೊಂಡ ಲಾಡ್ಜ್ ನ ಸಿಬ್ಬಂದಿ ಬೀಗ ಮುರಿದು ಕೊಠಡಿ ನೋಡಿದಾಗ ಕೊಲೆ ವಿಚಾರ ಬೆಳಕಿಗೆ ಬಂದಿದೆ. ಘಟನಾ ಸ್ಥಳದ ಸಿಸಿ ಕ್ಯಾಮೆರಾ ಪರಿಶೀಲಿಸಿದ್ದು, ಆರೋಪಿಯ ಚಹರೆ ಪತ್ತೆಯಾಗಿದೆ.