ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಸಂಪ್‌ನಲ್ಲಿದ್ದ ಮೋಟರ್ ಕಳವು ಮಾಡಿದ್ದಾನೆ ಎಂದು ಕಾರ್ಮಿಕನ ಕೈ-ಕಾಲು ಕಟ್ಟಿ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ಕಟ್ಟಡ ಮಾಲಿಕ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಟಿ.ಸಿ.ಪಾಳ್ಯದ ಮುನೇಶ್ವರನಗರ ನಿವಾಸಿ ಅಶ್ವತ್ಥ್ (48) ಕೊಲೆಯಾದ ಕಾರ್ಮಿಕ. ಈ ಸಂಬಂಧ ಕೃತ್ಯ ಎಸಗಿದ ಹೊಯ್ಸಳನಗರ ನಿವಾಸಿ, ಕಟ್ಟಡ ಮಾಲೀಕ ಶ್ರೀನಿವಾಸ ರೆಡ್ಡಿ (68) ಮತ್ತು ಕೆಲಸಗಾರ ಸುಬ್ಬಯ್ಯ ನಾಯ್ಡು(69) ಎಂಬವರನ್ನು ಬಂಧಿಸಲಾಗಿದೆ.
ಮೇ 28ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಹೊಯ್ಸಳನಗರದ 18ನೇ ಕ್ರಾಸ್ ರಸ್ತೆಯಲ್ಲಿ ಅಪರಿಚಿತ ಶವ ಬಿದ್ದಿದ್ದಾಗಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು, ಪರಿಶೀಲಿಸಿದಾಗ ಕಾರ್ಮಿಕ ಅಶ್ವತ್ಥ್ ಎಂಬುದು ಗೊತ್ತಾಗಿದೆ. ಗಾರೆ ಕೆಲಸ ಮಾಡುವ ಅಶ್ವತ್ಥ್, ಆರೋಪಿ ಶ್ರೀನಿವಾಸ ರೆಡ್ಡಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ.
ಮೇ 27ರಂದು ಕಟ್ಟಡ ಕಾಮಗಾರಿ ವೀಕ್ಷಣೆಗೆ ಬಂದಿದ್ದ ಶ್ರೀನಿವಾಸ ರೆಡ್ಡಿ, ಸುಬ್ಬಯ್ಯ ನಾಯ್ಡು, ಸಂಪ್‌ನಲ್ಲಿ ಮೋಟರ್ ಕಳವು ಮಾಡಿದ್ದ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ಅಶ್ವತ್ಥ ನಾನು ಕದ್ದಿಲ್ಲ. ಅದರ ಬಗ್ಗೆಯೂ ಗೊತ್ತಿಲ್ಲ ಎಂದಿದ್ದಾನೆ. ಅದರಿಂದ ಕೋಪಗೊಂಡ ಆರೋಪಿಗಳು, ಅಲ್ಲೆ ಇದ್ದ ಹಗ್ಗ ಮತ್ತು ತಂತಿಯಿಂದ ಅಶ್ವತ್ಥ್ ನ ಕೈ-ಕಾಲು ಕಟ್ಟಿ ಕಬ್ಬಿಣದ ರಾಡ್ ಮತ್ತು ಮರದ ತುಂಡಿನಿಂದ ಹಲ್ಲೆ ನಡೆಸಿದ್ದು, ತೀವ್ರ ರಕ್ತ ಸ್ರಾವದಿಂದ ಅಶ್ವತ್ಥ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.
ಪಾದಚಾರಿ ಮಾರ್ಗದಲ್ಲಿ ಶವ ಎಸೆದರು! :
ಕೃತ್ಯ ಎಸಗಿದ ಬಳಿಕ ಆರೋಪಿಗಳು ಶುಕ್ರವಾರ ತಡರಾತ್ರಿ ಮೃತದೇಹವನ್ನು ಕಟ್ಟಡದಿಂದ ಸುಮಾರು 100 ಮೀಟರ್ ದೂರ ಎಳೆದೊಯ್ದು ಪಾದಚಾರಿ ಮಾರ್ಗದಲ್ಲಿ ಹಾಕಿ ಪರಾರಿಯಾಗಿದ್ದರು. ಮತ್ತೂಂದೆಡೆ ಅಶ್ವತ್ಥ್ ಪತ್ನಿ ಮಂಜುಳಾ ಮೇ 27ರಂದು ಸಂಜೆ ಪತಿ ನಾಪತ್ತೆ ಬಗ್ಗೆ ದೂರು ನೀಡಿದ್ದರು. ಶನಿವಾರ ಅಶ್ವತ್ಥ್ ಮೃತದೇಹ ಪತ್ತೆಯಾಗಿದೆ. ಈ ವಿಚಾರ ತಿಳಿದ ಆಕೆ, ಕಟ್ಟಡ ಮಾಲೀಕರೇ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಕೊಲೆ ಮತ್ತು ಸಾಕ್ಷ್ಯ ನಾಶ ಪಡಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು. ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.