ಬೆಂಗಳೂರು: ಸಾರಿ.. ಸಾರಿ… ಸಾರಿ…ಎಲ್ಲೆಲ್ಲೂ ಸಾರಿ.. ಹೀಗೆ ಯುವಕನೊಬ್ಬ ಸುಂಕದಕಟ್ಟೆ ಶಾಂತಿ ಧಾಮ ಶಾಲೆಯ ಕಾಂಪೌಂಡ್, ಗೇಟ್ ಮುಂಭಾಗದ ಮೆಟ್ಟಿಲುಗಳು, ರಸ್ತೆ, ಮನೆ ಗೋಡೆಗಳ ಮೇಲೆಲ್ಲ ಸಾರಿ.. ಸಾರಿ.. ಎಂದೆಲ್ಲ ಬರೆದು ಕ್ಷಮೆಯಾಚಿಸಿದ್ದಾನೆ.
ಈ ರೀತಿ ಬರೆದಿರುವ ಯುವಕ ಯಾರು? :
ಯಾರಿಗೆ ಕ್ಷಮೆ ಕೇಳಿದ್ದಾನೆ ಎಂಬ ಮಾಹಿತಿ ಸಿಕ್ಕಿಲ್ಲ. ಜತೆಗೆ ಯಾರೂ ಈ ಕುರಿತು ದೂರು ನೀಡಿಲ್ಲ. ಈ ಮಧ್ಯೆ ಈ ರಸ್ತೆಯಲ್ಲಿ ರಾತ್ರಿ 11 ಗಂಟೆಯಿಂದ 12 ಗಂಟೆ ಅವಧಿಯಲ್ಲಿ ಇಬ್ಬರು ಯುವಕರು ಡ್ನೂಕ್ ಬೈಕ್‌ನಲ್ಲಿ ಓಡಾಡುತ್ತಿರುವುದು ಸೆರೆಯಾಗಿದ್ದು, ಅನುಮಾನಕ್ಕೆ ಕಾರಣವಾಗಿದೆ.
ಫುಡ್ ಡೆಲಿವರಿ ಬ್ಯಾಗ್ ಜತೆ ಬಂದಿರುವ ಯುವಕರು ಬ್ಯಾಗ್‌ನಲ್ಲೇ ಕೆಂಪು ಬಣ್ಣದ ಸ್ಪ್ರೇನಿಂದ ಸಾರಿ ಎಂದು ಎಲ್ಲೆಡೆ ಬರೆದಿರುವ ಸಾಧ್ಯತೆಯಿದೆ. ಹೀಗಾಗಿ ಅವರ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಾಗಲ್ ಪ್ರೇಮಿಯ ಕೃತ್ಯ?!: ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಅಥವಾ ಶಿಕ್ಷಕಿಯನ್ನು ಪ್ರೀತಿ ಸುತ್ತಿರುವ ಯುವಕನೇ ಈ ರೀತಿಯ ಕೃತ್ಯ ಎಸಗಿರಬಹುದು. ತನ್ನ ಪ್ರಿಯತಮೆ ಜತೆ ಜಗಳ ಮಾಡಿಕೊಂಡು, ಆಕೆ ಮುನಿಸಿಕೊಂಡಿರಬಹುದು. ಹೀಗಾಗಿ ಆತ ಈ ರೀತಿ ಪ್ರೇಯಸಿಗೆ ತಪ್ಪಾಗಿದೆ ಕ್ಷಮಿಸು ಎಂದು ಕೇಳಲು, ಶಾಲೆ ಗೇಟ್ ಮುಂಭಾಗದ ಮೆಟ್ಟಿಲುಗಳು, ಕಾಂಪೌಂಡ್ ಗೋಡೆ, ರಸ್ತೆ, ಮನೆಯ ಗೋಡೆ ಮೇಲೆ ಸಾರಿ ಎಂದೆಲ್ಲ ಬರೆದಿದ್ದಾನೆ. ಜತೆಗೆ ಮನೆಯೊಂದರ ಮೇಲೆ ಸಾರಿ ಅಮ್ಮ, ಸಾರಿ ಅಪ್ಪಾ ಎಂದು ಬರೆಯಲಾಗಿದೆ. ಮತ್ತೂಂದು ಕಡೆ ಹಾರ್ಟ್ ಸಿಂಬಲ್ ಬರೆದಿದ್ದಾನೆ.
ಶಾಲೆಗೆ ಕೆಟ್ಟ ಹೆಸರು ತರಲು ಸಂಚು: ಈ ಮಧ್ಯೆ ಶಾಲೆಗೆ ಕೆಟ್ಟ ಹೆಸರು ತರಲು ಈ ರೀತಿ ಹುಚ್ಚಾಟ ನಡೆಸಿರುವ ಸಾಧ್ಯತೆಯೂ ಇದೆ. ಆ ದುಷ್ಕರ್ಮಿಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಸದ್ಯ ಇದುವರೆಗೂ ಯಾರೂ ದೂರು ನೀಡಿಲ್ಲ. ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಭೇಟಿ ನೀಡಿದ್ದರು. ಸ್ಥಳದಲ್ಲೇ ದೊರೆತ ಸಿಸಿ ಕ್ಯಾಮೆರಾದಲ್ಲಿ ಇಬ್ಬರು ಯುವಕರು ಫುಡ್ ಡೆಲಿವರಿ ಬ್ಯಾಗ್ ಮೂಲಕ ಓಡಾಡಿದ್ದಾರೆ.
ಆದರೆ, ಅವರೇ ಕೃತ್ಯ ಎಸಗಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಸದ್ಯ ಅವರ ಮಾಹಿತಿ ಕಲೆಹಾಕಿ ವಿಚಾರಣೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದರು.