ಬೆಂಗಳೂರು: ಮೂರು ವರ್ಷದ ಮಗುವಿಗೆ ಮದ್ಯ ಕುಡಿಸಿದ್ದನ್ನು ಪ್ರಶ್ನಿಸಿದ ಮಹಿಳೆಯ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಆರೋಪದಡಿ ಪತಿ ಸೇರಿ ಐವರ ವಿರುದ್ಧ ಬಸವೇಶ್ವರನಗರ ಪೊಲೀಸರು ದೂರು ದಾಖಲಿಸಿದ್ದಾರೆ.
ಕುರುಬರಹಳ್ಳಿಯ 26 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆಕೆಯ ಪತಿ ಕಮಲಾನಗರದ ಸುನೀಲ್ ಕುಮಾರ್, ಅತ್ತೆ ಮಲ್ಲಿಗಾ, ಮಾವ ಪಳನಿ, ಬಾವ ಶಾಂತ್ ಕುಮಾರ್ ಹಾಗೂ ಈತನ ಪತ್ನಿ ಸರಿತಾ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಸಂತ್ರಸ್ತೆಯು 2018ರಲ್ಲಿ ಸುನೀಲ್ ಕುಮಾರ್‌ನನ್ನು ವಿವಾಹವಾಗಿದ್ದು, ದಂಪತಿಗೆ ಮೂರು ವರ್ಷದ ಒಂದು ಗಂಡು ಮಗುವಿದೆ. ಪತಿ ಸುನೀಲ್‌ಗೆ ಅತ್ತಿಗೆ ಸರಿತಾ ಜತೆ ಅನೈತಿಕ ಸಂಬಂಧವಿದ್ದು, ಈ ವಿಚಾರವನ್ನು ಬಾವ ಶಾಂತ್‌ಕುಮಾರ್ ಹಾಗೂ ಅತ್ತೆ-ಮಾವನಿಗೆ ತಿಳಿಸಿದ್ದಾರೆ. ಆದರೂ ಹೊಂದಾಣಿಕೆ ಮಾಡಿಕೊಂಡು ಹೋಗು ಎಂದು ಹೇಳಿದ್ದರು. ಸಂತ್ರಸ್ತೆ ಈ ವಿಚಾರವನ್ನು ತನ್ನ ಪೋಷಕರ ಗಮನಕ್ಕೆ ತಂದಿದಾಗ, ಸುನೀಲ್‌ಗೆ ಬುದ್ಧಿವಾದ ಹೇಳಿ ಕೆ.ಆರ್.ಪುರಂನಲ್ಲಿ ಪ್ರತ್ಯೇಕ ಮನೆ ಮಾಡಿಸಿ ಇರಿಸಿದ್ದರು. ಈ ನಡುವೆ ಸುನೀಲ್ ಮನೆಗೆ ಸ್ನೇಹಿತರನ್ನು ಕರೆತಂದು ಪಾರ್ಟಿ ಮಾಡುತ್ತಿದ್ದ.
ಇತ್ತೀಚೆಗೆ ಮೂರು ವರ್ಷದ ಸಂತ್ರಸ್ತೆಯ ಮಗುವಿಗೂ ಕುಟುಂಬದವರ ಜತೆ ಸೇರಿ ಪತಿ ಮದ್ಯ ಕುಡಿಸಿದ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಸಂತ್ರಸ್ತೆಯನ್ನು ವಿವಸ್ತ್ರಗೊಳಿಸಿ ಪತಿ ಹಾಗೂ ಕುಟುಂಬದ ಸದಸ್ಯರು ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಮಾವ ಪಳನಿ, ಬಾವ ಶಾಂತ್‌ಕುಮಾರ್ ಸಂತ್ರಸ್ತೆಯ ಗುಪ್ತಾಂಗ ಮುಟ್ಟಿಅಸಭ್ಯವಾಗಿ ವರ್ತಿಸಿದ್ದಾರೆ. ಅಂತೆಯೇ ಜತೆಯಲ್ಲಿ ಮಂಚ ಏರುವಂತೆ ಬಲವಂತ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.