Advertisement

ಯುವತಿ ವಿಚಾರಕ್ಕೆ ಯುವಕನ ಕೊಲೆ

11:21 PM Jun 23, 2021 | Team Udayavani |

ಬೆಂಗಳೂರು: ಮದ್ಯದ ಅಮಲಿನಲ್ಲಿ ಯುವತಿ ಹಾಗೂ ಏರಿಯಾದಲ್ಲಿ ಹಿಡಿತದ ವಿಚಾರವಾಗಿ ಎರಡು ಗುಂಪುಗಳ ನಡುವಿನ ಜಗಳದಲ್ಲಿ ಒಬ್ಬ ಯುವಕ ಕೊಲೆಯಾಗಿರುವ ಘಟನೆ ಪುಲಕೇಶಿನಗರ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

Advertisement

ಪುಲಕೇಶಿನಗರದ ಐಟಿಸಿ ಕಾಲೋನಿ ನಿವಾಸಿ ಥಾಮಸ್‌ ಅಲಿಯಾಸ್‌ ಗುಂಡ(23) ಕೊಲೆಯಾದ ಯುವಕ. ಕೃತ್ಯ ಎಸಗಿದ ದಿನೇಶ್‌ ಮತ್ತು ರಂಜಿತ್‌ ಎಂಬವರನ್ನು ಬಂಧಿಸಲಾಗಿದ್ದು, ಸುಹೈಲ್‌ ಸೇರಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಥಾಮಸ್‌ ಮತ್ತು ದಿನೇಶ್‌, ರಂಜಿತ್‌ ಸ್ನೇಹಿತರಾಗಿದ್ದು, ಥಾಮಸ್‌ ಕಲ್ಲಪಲ್ಲಿಯ ಸ್ಮಶಾನದಲ್ಲಿ ಕೆಲಸ ಮಾಡುತ್ತಿದ್ದ. ಜತೆಗೆ ಕುಡಿತ ಚಟ ಅಂಟಿಸಿಕೊಂಡಿದ್ದ. ಏರಿಯಾದಲ್ಲಿ ಹಿಡಿತ ಸಾಧಿಸಲು ಸ್ಥಳೀಯ ಯುವಕರ ಗುಂಪು ಕಟ್ಟಿಕೊಂಡು ಗಲಾಟೆ ಮಾಡುತ್ತಿದ್ದ. ಅಲ್ಲದೆ, ಯುವತಿಯರ ಜತೆಯೂ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದ ಎಂದು ಪೊಲೀಸರು ಹೇಳಿದರು.

ಇನ್ನು ಆರೋಪಿಗಳಾದ ದಿನೇಶ್‌, ರಂಜಿತ್‌ ತಂಡ ಕೂಡ ಏರಿಯಾದಲ್ಲಿ ಅದೇ ರೀತಿ ವರ್ತಿಸುತ್ತಿದ್ದರು. ಇಬ್ಬರ ನಡುವೆ ಏರಿಯಾದಲ್ಲಿ ಹಿಡಿತ ಸಾಧಿಸುವ ವಿಚಾರಕ್ಕೆ ಪದೇ ಪದೇ ಜಗಳ ನಡೆಯುತ್ತಿತ್ತು. ನಂತರ ಒಂದೆರಡು ದಿನಗಳ ಬಳಿಕ ಇಬ್ಬರು ಆತ್ಮೀಯವಾಗಿ ಇರುತ್ತಿದ್ದರು.

ಆದರೆ, ಇತ್ತೀಚೆಗೆ ಥಾಮಸ್‌ನ ವರ್ತನೆಗೆ ಆಕ್ರೋಶಗೊಂಡಿದ್ದ ಆರೋಪಿಗಳು ಆತನ ಕೊಲೆಗೆ ಸಂಚು ರೂಪಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ನೇಹಿತನೊಬ್ಬನ ಹುಟ್ಟುಹಬ್ಬದ ಆಚರಣೆಗೆ ಮಂಗಳವಾರ ಮಧ್ಯಾಹ್ನ ಕರೆ ಮಾಡಿ ಆತ ಕೆಲಸ ಮಾಡುವ ಜೀವನಹಳ್ಳಿಯ ಸ್ಮಶಾನದ ಬಳಿ ಕರೆಸಿಕೊಂಡಿದ್ದಾರೆ. ಈ ವೇಳೆ ಥಾಮಸ್‌ ಮತ್ತು ಆತನ ಸ್ನೇಹಿತ ರಾಕೇಶ್‌ ಇಬ್ಬರು ಹೋಗಿದ್ದರು.

Advertisement

ಯುವತಿ ವಿಚಾರಕ್ಕೆ ಕೊಲೆ :

ಎರಡು ತಂಡದವರು ಕಂಠಪೂರ್ತಿ ಮದ್ಯ ಸೇವಿಸಿದ್ದು, ಆಗ ಥಾಮಸ್‌ಗೆ ಸ್ಥಳೀಯ ಯುವತಿ ವಿಚಾರವಾಗಿ ದಿನೇಶ್‌,ರಂಜಿತ್‌ ಗಲಾಟೆ ಆರಂಭಿಸಿದ್ದು, ಏರಿಯಾದಲ್ಲಿ ಹಿಡಿತ ಸಾಧಿಸುವ ವಿಚಾರಕ್ಕೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.ಅದನ್ನು ಕಂಡ ಸ್ಥಳೀಯರೊಬ್ಬರು ಪೊಲೀಸರಿಗೆ ಹೇಳುವುದಾಗಿ ಹೆದರಿಸಿ ಎಲ್ಲರನ್ನು ಸ್ಥಳದಿಂದ ಕಳುಹಿಸಿದ್ದರು. ಬಳಿಕ ರಾತ್ರಿ 10.30ರ ಸುಮಾರಿಗೆ ಪುಲಕೇಶಿನಗರದ ತನ್ನ ಮನೆ ಬಳಿ ರಾಕೇಶ್‌, ಥಾಮಸ್‌ ಕುಳಿತಿದ್ದರು. ಈ ವೇಳೆ ಮಧ್ಯಾಹ್ನದ ಗಲಾಟೆಗೆ ಪ್ರತಿಕಾರ ತೀರಿಸಿಕೊಳ್ಳಲು ಬಂದ ದುಷ್ಕರ್ಮಿಗಳು ಇಬ್ಬರ ಮೇಲೂ ಮಾರಕಾಸ್ತ್ರಗಳನ್ನು ಬೀಸಿದ್ದಾರೆ.

ರಾಕೇಶ್‌ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಆದರೆ, ಥಾಮಸ್‌ ಸಿಕ್ಕಿದ್ದರಿಂದ ಆತನನ್ನು ಅಟ್ಟಾಡಿಸಿದ ಬಳಿಕ ಆತನ ತಲೆ ಮತ್ತು ಎದೆ ಭಾಗಕ್ಕೆ ಮನಸೋಇಚ್ಛೆ ಹೊಡೆದು ಕೊಲೆಗೈದು ಪರಾರಿಯಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

ಘಟನೆ ಸಂಬಂಧ ರಾಕೇಶ್‌ನನ್ನು ವಿಚಾರಣೆ ನಡೆಸಿ ಪ್ರಾಥಮಿಕವಾಗಿ ದಿನೇಶ್‌, ರಂಜಿತ್‌ ಎಂಬವರನ್ನು ಬಂಧಿಸಿ, ಇತರೆ ಸುಹೈಲ್‌ ಸೇರಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next