ಬೆಂಗಳೂರು: ಕಾರಿನಲ್ಲಿ ಹಾಕಿದ್ದ ಮ್ಯೂಸಿಕ್ ಅನ್ನು ನಿಲ್ಲಿಸುವಂತೆ ಪ್ರಶ್ನಿಸಿದ್ದಕ್ಕೆ ಒಡಿಶಾ ಮೂಲದ ಟೆಕಿಗಳಿಂದ ಥಳಿತಕ್ಕೊಳಗಾಗಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ.
ಲಾಯೆಡ್ ನೇಹಮಿಯ (54) ಮೃತರು. ಪ್ರಕರಣದ ಸಂಬಂಧ ಒಡಿಶಾ ಮೂಲದ ರಾಮ ಸಮಂತ್, ಬಾಸುದೇವ್ ಸಮಂತ್ ರಾಯ್‌ನನ್ನು ಬಂಧಿಸಲಾಗಿದೆ.
ಏ.2ರಂದು ಮುಂಜಾನೆ 4.30ರ ಸುಮಾರಿಗೆ ವಿಜ್ಞಾನನಗರದ ಖಾಸಗಿ ಅಪಾರ್ಟ್‌ಮೆಂಟ್ ಮುಂದೆ ಘಟನೆ ನಡೆದಿತ್ತು. ಈ ಸಂಬಂಧ ಮೊದಲು ಹಲ್ಲೆ ಪ್ರಕರಣ ದಾಖಲಾಗಿತ್ತು. ಇದೀಗ ಹಲ್ಲೆಗೊಳಗಾಗಿದ್ದ ಲಾಯೆಡ್ ನೇಹಮಿಯ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿ, ಇತರೆ ಆರೋಪಿಗಳಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಏ.2ರಂದು ಮುಂಜಾನೆ 4.30ರ ಸುಮಾರಿಗೆ ವಿಜ್ಞಾನ ನಗರದ ಖಾಸಗಿ ಅಪಾರ್ಟ್‌ಮೆಂಟ್ ಮುಂದಿನ ರಸ್ತೆಯಲ್ಲಿ ಅಭಿಷೇಕ್, ರಾಮ ಸಮಂತ್, ಬಾಸುದೇವ್ ಮತ್ತು ಸಮಂತ್ ರಾಯ್ ಕಾರನ್ನು ನಿಲ್ಲಿಸಿಕೊಂಡು ಜೋರಾಗಿ ಹಾಡುಗಳನ್ನು ಹಾಕಿಕೊಂಡಿದ್ದರು. ಈ ವೇಳೆ ಲಾಯೆಡ್ ನೇಹಮಿಯ ಬಂದು, ಸೌಂಡ್ ಕಡಿಮೆ ಮಾಡಿಕೊಳ್ಳಿ. ಮನೆಯಲ್ಲಿ ವಯಸ್ಸಾದವರು ಇದ್ದಾರೆ ಎಂದಿದ್ದರು. ಈ ವೇಳೆ ಲಾಯೆಡ್ ಜತೆ ಗಲಾಟೆ ಮಾಡಿದ್ದ ಆರೋಪಿಗಳು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ, ಕಲ್ಲು, ಚಪ್ಪಲಿಗಳಿಂದ ಹಲ್ಲ ಮಾಡಿದ್ದರು. ಇದೇ ವೇಳೆ ಮಹಿಳೆಯೊಬ್ಬರ ಮೇಲೆಯೂ ಆರೋಪಿಗಳು ಹಲ್ಲೆ ಮಾಡಿದ್ದರು. ಬಳಿಕ ಹಲ್ಲೆಗೊಳಗಾದ ಲಾಯೆಡ್ ಮತ್ತು ಆರೋಪಿಗಳು ಎಚ್‌ಎಎಲ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಿಸಿದ್ದರು. ಗಲಾಟೆ ಬಳಿಕ ಅಸ್ಪತ್ರೆಯಲ್ಲಿ ದಾಖಲಾಗಿದ್ದ ಲಾಯೆಡ್ ನೇಹಮಿಯ ಮಂಗಳವಾರ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಎಚ್‌ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.