ಚಿಂತಾಮಣಿ: ತಾಲೂಕಿನ ಮಡಬಳ್ಳಿ ಮತ್ತು ನೆರ್ನ್ನಕಲ್ಲು ಗ್ರಾಮಗಳ ಬಳಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ತೊಂದರೆಯಾಗುತ್ತಿದೆ ಎಂದು ಮಡಬಳ್ಳಿ, ನೆರ್ನ್ನಕಲ್ಲು ಗ್ರಾಮಸ್ಥರು ಕಲ್ಲು ಗಣಿಗಾರಿಕೆ ಮಾಡುತ್ತಿದ್ದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಗಣಿಗಾರಿಕೆಗೆ ಅಡ್ಡಿಪಡಿಸಿದ ಪರಿಣಾಮ ಕೆಲ ಕಾಲ ಉದ್ವಿಗ್ನ ವಾತಾವರಣ ಏರ್ಪಟ್ಟಿತ್ತು.
ಕಟ್ಟಡಗಳಿಗೆ ಹಾನಿ: ತಾಲೂಕಿನ ನೆರ್ನ್ನಕಲ್ಲು, ಮಡಬಹಳ್ಳಿ, ನಾಯಿಂದ್ರಹಳ್ಳಿ ಗ್ರಾಮಗಳ ಮಧ್ಯೆ ಭಾಗದಲ್ಲಿರುವ ಗುಡ್ಡದಲ್ಲಿ ಹಲವು ವರ್ಷಗಳಿಂದ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಶಬ್ಧ ಮಾಲಿನ್ಯದ ಜೊತೆಗೆ ಗ್ರಾಮಗಳ ಸುತ್ತಮುತ್ತಲು ಇರುವ ದೇವಾಲಯ, ನೀರಿನ ಟ್ಯಾಂಕ್ ಮತ್ತು ಗ್ರಾಮದ ಹೊರ ವಲಯದಲ್ಲಿರುವ ಶಾಲೆಗಳ ಕಟ್ಟಡಗಳಿಗೆ ಹಾನಿಯಾಗುತ್ತಿದೆ. ಕೂಡಲೇ ಕಲ್ಲು ಗಣಿಗಾರಿಕೆ ನಿಲ್ಲಿಸುವಂತೆ ಕಳೆದ ವರ್ಷ ಗ್ರಾಮಸ್ಥರು ಒತ್ತಾಯಿಸಿದ್ದರು.
ಗ್ರಾಮಸ್ಥರ ಒತ್ತಾಯದ ಮೇರೆಗೆ ಒಂದು ವರ್ಷ ಗಣಿಗಾರಿಕೆ ನಿಲ್ಲಿಸಿದ್ದ ಗಣಿಗಾರಿಕೆದಾರರು ಇದೀಗ ಮತ್ತೆ ಪ್ರಾರಂಭಿಸಿದ ಪರಿಣಾಮ ರೊಚ್ಚಿಗೆದ್ದ ಗ್ರಾಮಸ್ಥರು ಗಣಿಗಾರಿಕೆ ನಿಲ್ಲಿಸುವಂತೆ ಒತ್ತಾಯಿಸಿ ನೂರಾರು ಜನರು ಗುಡ್ಡದ ಬಳಿ ಜಮಾಯಿಸಿ ವಾಗ್ವಾದಕ್ಕೆ ಇಳಿದರು. ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ಮಿತಿ ಕೈಮೀರುವ ಹಂತಕ್ಕೆ ಬರುತ್ತಿದ್ದಂತೆ ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀನಿವಾಸ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಉಪವಿಭಾಗಾಧಿಕಾರಿ ಭೇಟಿ: ವಿಷಯ ತಿಳಿದ ಉಪ ವಿಭಾಗಾಧಿಕಾರಿ ರಘುನಂದನ್ ಸ್ಥಳಕ್ಕೆ ಭೇಟಿ ನೀಡಿ ಗಣಿಗಾರಿಕೆಗೆ ಸರ್ಕಾರ ನೀಡಿರುವ ಪರವಾನಗಿ ಮತ್ತು ಗ್ರಾಮಸ್ಥರ ಮನವಿ ಆಲಿಸಿ ಪರಿಶೀಲನೆಗೆ ದಾಖಲೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಧಿಕಾರಿಗಳ ವಿರುದ್ಧ ಆಕ್ರೋಶ: ಸುತ್ತಲೂ ಜನರು ವಾಸವಿರುವ ಪ್ರದೇಶಕ್ಕೆ ಯಾವ ರೀತಿಯಲ್ಲಿ ಪರವಾನಗಿ ನೀಡಿದರು ಎಂದು ಪ್ರಶ್ನಿಸಿದ ಗ್ರಾಮಸ್ಥರು, ಅಧಿಕಾರಿಗಳು ಗಣಿಗಾರಿಕೆ ಮಾಲೀಕರ ಜೊತೆ ಕಮಿಷನ್‌ಗೆ ಆಸೆ ಪಟ್ಟು ಸಾರ್ವಜನಿಕರ ಹಿತ ಕಡೆಗಣಿಸಿ ಗಣಿ ಮಾಲೀಕರು ನೀಡುವ ಹಣಕ್ಕೆ ಪರವಾನಗಿ ನೀಡಿದ್ದಾರೆ ಎಂದು ಗ್ರಾಮಸ್ಥರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ವಿರುದ್ಧ ಆರೋಪಿಸಿದರು.
ಗ್ರಾಮಸ್ಥರ ಪಟ್ಟು: ಕಳೆದ ವರ್ಷ ಕ್ಷೇತ್ರದ ಶಾಸಕರ ಸ್ಥಳಕ್ಕೆ ಭೇಟಿ ನೀಡಿ ಕಲ್ಲು ಗಣಿಗಾರಿಕೆ ನಿಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಇದೀಗ ಮತ್ತೆ ಕಲ್ಲು ಗಣಿಗಾರಿಕೆ ಮತ್ತೆ ಪ್ರಾರಂಭವಾಗಿದ್ದು, ಕಲ್ಲು ಗಣಿಗಾರಿಕೆ ನಿಲ್ಲಿಸುವಂತೆ ಒತ್ತಾಯಿಸಿದರು.