Advertisement

ಎಡೆಬಿಡದೆ ಸುರಿದ ಮಳೆ; ರಸ್ತೆಯಲ್ಲಿ ನೀರು, ಸಂಚಾರಕ್ಕೆ ಅಡ್ಡಿ 

10:17 AM Jun 20, 2018 | Team Udayavani |

ಮಹಾನಗರ: ಮಂಗಳವಾರ ಬೆಳಗ್ಗಿನಿಂದಲೇ ಧಾರಾಕಾರವಾಗಿ ಸುರಿದ ಮಳೆಗೆ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಮತ್ತು ಸಾರ್ವಜನಿಕರಿಗೆ ತೊಂದರೆಯುಂಟಾಯಿತು. ನಗರದ ಕೊಟ್ಟಾರದ ಸಂಕೇಶ ಪ್ರದೇಶದ ಬಳಿ ನಂತೂರಿಗೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಒಂದೂವರೆ ಅಡಿ ನೀರು ನಿಂತಿದ್ದು, ವಾಹನ ಸವಾರರಿಗೆ ಅಡ್ಡಿಯಾಯಿತು. ಈ ಭಾಗದಲ್ಲಿ ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೆ ರಸ್ತೆಗೆ ನುಗ್ಗಿದೆ. ರಾಜಕಾಲುವೆ ಹೂಳೆತ್ತದೆ ಇರುವುದು ಕೂಡ ಇದಕ್ಕೆ ಮುಖ್ಯ ಕಾರಣವಾಗಿದ್ದು, ಮಳೆ ನೀರು ರಸ್ತೆಯಲ್ಲೇ ಹರಿಯಿತು.

Advertisement

ಮರಳು ರಾಶಿ
ಸ್ಥಳೀಯರ ಪ್ರಕಾರ, ಸಣ್ಣ ಮಳೆ ಬಂದರೆ ಸಾಕು, ರಾಜಕಾಲುವೆಯಲ್ಲಿ ನೀರು ತುಂಬಿ ಪಕ್ಕದ ರಾಷ್ಟ್ರೀಯ ಹೆದ್ದಾರಿಗೆ ಬರುತ್ತದೆ. ಸ್ಥಳೀಯ ಕಾರ್ಪೊರೇಟರ್‌ಗೆ ಈ ಬಗ್ಗೆ ತಿಳಿಸಿದರೂ ಸಮಸ್ಯೆ ಬಗೆಹರಿಯಲಿಲ್ಲ. ಅಲ್ಲದೆ, ಈ ರಾಜಕಾಲುವೆ ಪಕ್ಕ ಮರಳು ರಾಶಿ ಹಾಕಿದ್ದು, ಮಳೆ ನೀರು ಸಮರ್ಪಕವಾಗಿ ತೆರಳಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ . ಈ ಸಮಸ್ಯೆ ಗಂಭೀರ ಸ್ವರೂಪ ಪಡೆಯುವ ಮುನ್ಸೂಚನೆಯೊಂದಿಗೆ ಪಾಲಿಕೆಯವರು ಕೂಡಲೇ ಪಂಪ್‌
ಮೂಲಕ ರಸ್ತೆಯಲ್ಲಿ ತುಂಬಿಕೊಂಡಿದ್ದ ನೀರು ತೆರವುಗೊಳಿಸಿದರು.

ನಗರದ ಅನೇಕ ಪ್ರದೇಶಗಳಲ್ಲಿ ಮಳೆ ನೀರು ಹರಿಯಲು ಚರಂಡಿ ವ್ಯವಸ್ಥೆ ಇಲ್ಲ. ಒಳಚರಂಡಿ ಪೈಪ್‌ಗೆ ಮಳೆ ನೀರು ಹರಿಯುತ್ತಿದ್ದು ಅನೇಕ ಕಡೆಗಳಲ್ಲಿ ಮ್ಯಾನ್‌ ಹೋಲ್‌ನಿಂದ ನೀರು ರಸ್ತೆಗೆ ಬರುತ್ತಿತ್ತು. ನಗರದ ಅನೇಕ ಕಡೆಗಳಲ್ಲಿ ಒಳಚರಂಡಿ, ಮೋರಿ, ಮ್ಯಾನ್‌ಹೋಲ್‌ ಕಾಮಗಾರಿಗಳು ನಡೆಯುತ್ತಿದೆ. ಇದರಿಂದಾಗಿ ಕೆಲವೆಡೆ ಮಳೆ ನೀರಿಗೆ ಸಿಮೆಂಟ್‌ ರಸ್ತೆಗೆ ಬಿದ್ದಿದ್ದು, ವಾಹನ ಓಡಾಟ ನಡೆಸಲು ಕಷ್ಟವಾಗಿದೆ.

ರಸ್ತೆಯೇ ತೋಡು!
ಬಂಗ್ರಕೂಳೂರುವಿನಲ್ಲಿ ವಾಹನ ಸಂಚರಿಸುವ ರಸ್ತೆಯೇ ತೋಡಿನ ಸ್ವರೂಪ ಪಡೆದುಕೊಳ್ಳುತ್ತಿದೆ. ಕೂಳೂರು 4ನೇ ಮೈಲ್‌ನ ಸಣ್ಣ ಸೇತುವೆ ಸಮೀಪದ ಎಡಭಾಗದಲ್ಲಿ ಫರ್ನಿಚರ್‌ ಹಾಗೂ ಶೋರೂಂ ಪಕ್ಕದಲ್ಲಿ ಕೂಳೂರು ಹೊಳೆ ಬದಿಗೆ ಸಂಪರ್ಕಿಸುವ ಒಳ ರಸ್ತೆಯು ಸಂಪೂರ್ಣ ನೀರಿನಿಂದ ತುಂಬಿದ್ದು, ಪ್ರಯಾಣ ಸಂಕಷ್ಟ ತರಿಸುತ್ತಿದೆ.

ಮಕ್ಕಳು ಈ ರಸ್ತೆಯಲ್ಲಿ ನಡೆದುಕೊಂಡು ಹೋಗಲು ಕೂಡ ಆಗದಂತಹ ಪರಿಸ್ಥಿತಿ ಇದೆ. ಜೋರು ಮಳೆ ಬಂದರೆ ರಸ್ತೆಯೇ ಇಲ್ಲಿ ಹೊಳೆಯಾಗುವ ಕಾರಣದಿಂದ ಸಂಚಾರವೇ ಸಂಕಷ್ಟವೆನಿಸುತ್ತಿದೆ. ಚರಂಡಿಯಲ್ಲಿ ಹೂಳು ತುಂಬಿ ಮಳೆ ನೀರು ಹರಿಸಯಲು ಸಾಧ್ಯವಾಗದೆ, ರಸ್ತೆಯಲ್ಲಿಯೇ ಮಳೆ ನೀರು ಹರಿದು ಸಮಸ್ಯೆಯಾಗುತ್ತಿದೆ. ಪರಿಸ್ಥಿತಿ ಅರಿತು ಈಗಾಗಲೇ ಶಾಸಕ ಭರತ್‌ ಶೆಟ್ಟಿ, ಸ್ಥಳೀಯ ಕಾರ್ಪೊರೇಟರ್‌ ಅವರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಸಮಸ್ಯೆ ಪರಿಹಾರದ ಭರವಸೆ ನೀಡಿದ್ದಾರೆ.

Advertisement

ಗ್ರಾಮಾಂತರದಲ್ಲಿ ಉತ್ತಮ ಮಳೆ
ಮೂಡಬಿದಿರೆ, ಕಿನ್ನಿಗೋಳಿ, ಬಜಪೆ, ಉಳ್ಳಾಲ ಸಹಿತ ಗ್ರಾಮಾ ತರ ಪ್ರದೇಶಗಳ್ಲಲೂ ಉತ್ತಮ ಮಳೆಯಾಗಿದೆ.

ಮಳೆ ವಿವರ 
ಹವಾಮಾನ ಇಲಾಖೆ ಅಂಕಿ ಅಂಶದ ಪ್ರಕಾರ ಮಂಗಳವಾರ ಬೆಳಗ್ಗೆ 8 ರಿಂದ ಸಂಜೆ 6 ಗಂಟವರೆಗೆ ನೀರುಮಾರ್ಗದಲ್ಲಿ 61 ಮಿ.ಮೀ., ಮಣ್ಣಗುಡ್ಡೆ 49 ಮಿ.ಮೀ., ಗುರುಪುರ 54 ಮಿ.ಮೀ., ಮಚ್ಚಾರು 49 ಮಿ.ಮೀ., ಪುತ್ತಿಗೆ 69 ಮಿ.ಮೀ., ಮೂಡಬಿದಿರೆ 54 ಮಿ.ಮೀ., ಪಡುಮಾರ್ನಾಡು 52 ಮಿ.ಮೀ., ದರೆಗುಡ್ಡೆ 52 ಮಿ.ಮೀ., ಎಕ್ಕಾರು 57 ಮಿ.ಮೀ., ಸೂರಿಂಜೆ 75 ಮಿ.ಮೀ., ಹಳೆಯಂಗಡಿ 50 ಮಿ.ಮೀ., ಬಾಳ 47 ಮಿ.ಮೀ., ಚಾಕಟ್ಟೆ 51 ಮಿ.ಮೀ., ಮರವೂರು 56 ಮಿ.ಮೀ., ಬಜ್ಪೆ 49 ಮಿ.ಮೀ., ಕೋಳ್ಯೂರು 54 ಮಿ.ಮೀ.ಮಳೆಯಾದ ವರದಿಯಾಗಿದೆ.

ಎರಡು ದಿನ ಭಾರೀ ಮಳೆ 
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಅರಬಿ ಸಮುದ್ರದಲ್ಲಿ ಉಂಟಾದ ಟ್ರಫ್‌ (ಒತ್ತಡ) ಕಾರಣದಿಂದಾಗಿ
ಮುಂದಿನ ಎರಡು ದಿನಗಳ ಕಾಲ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ. 

Advertisement

Udayavani is now on Telegram. Click here to join our channel and stay updated with the latest news.

Next