Advertisement

ನಿಲ್ಲದ ನೇಪಾಲದ ತಗಾದೆ : ಸಂಬಂಧ ಹಾಳಾಗದಿರಲಿ

09:13 AM Jul 14, 2020 | mahesh |

ಕೆಲವು ಸಮಯದಿಂದ ನೆರೆ ರಾಷ್ಟ್ರ ನೇಪಾಲವು ಭಾರತ ವಿರೋಧಿ ಹೆಜ್ಜೆಗಳನ್ನು ಇಡುತ್ತಲೇ ಇದೆ. ಲಿಪುಲೇಖ್‌, ಲಿಂಪಿಯಾಧುರಾ ಮತ್ತು ಕಾಲಾಪಾನಿ ಪ್ರದೇಶಗಳ ವಿಚಾರವಾಗಿ ಎರಡೂ ರಾಷ್ಟ್ರಗಳ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿರುವುದು ಸತ್ಯವಾದರೂ ಈ ವಿಚಾರವನ್ನು ಮಾತುಕತೆಯ ಮೂಲಕ ಬಗೆಹರಿಸಲು ಭಾರತ ಪ್ರಯತ್ನಿಸುತ್ತಿದೆ. ಒಟ್ಟಲ್ಲಿ ಯಾವುದೇ ಕಾರಣಕ್ಕೂ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಹಾಳಾಗದಂತೆ ಎಚ್ಚರವಹಿಸಲು ಭಾರತ ಎಚ್ಚರಿಕೆಯಿಂದ ಮುನ್ನಡೆಯುತ್ತಿದ್ದರೆ, ಅತ್ತ ನೇಪಾಲದ ಕೆ.ಪಿ.ಓಲಿ ನೇತೃತ್ವದ ಕಮ್ಯುನಿಸ್ಟ್‌ ಸರಕಾರ ಮಾತ್ರ ಭಾರತ ವಿರೋಧಿ ನಡೆಯನ್ನು ನಿಲ್ಲಿಸುವ ಲಕ್ಷಣ ಕಾಣಿಸುತ್ತಿಲ್ಲ.

Advertisement

ಕೆಲ ದಿನಗಳ ಹಿಂದೆ ನೇಪಾಲವು ತನ್ನ ರಾಷ್ಟ್ರದಲ್ಲಿ ಭಾರತದ ಖಾಸಗಿ ಸುದ್ದಿ ವಾಹಿನಿಗಳ ಪ್ರಸಾರವನ್ನು ನಿಲ್ಲಿಸಿದೆ. ದೂರದರ್ಶನವೊಂದನ್ನು ಹೊರತುಪಡಿಸಿ, ಈಗ ಭಾರತದ ಯಾವ ಸುದ್ದಿವಾಹಿನಿಗಳೂ ಅಲ್ಲಿ ಪ್ರಸಾರವಾಗುತ್ತಿಲ್ಲ. ಭಾರತೀಯ ಚಾನೆಲ್‌ಗಳು ಆಧಾರ ರಹಿತ, ಸುಳ್ಳುಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದು, ಇದು ನೇಪಾಲದ ಜನರಿಗೆ ಹಾಗೂ ನೇಪಾಲಿ ರಾಷ್ಟ್ರೀಯ ಭಾವನೆಗೆ ಘಾಸಿ ಮಾಡಿದೆ ಎನ್ನುವುದು ಈಗಿನ ವಾದ. ಗಮನಿಸಬೇಕಾದ ಸಂಗತಿಯೆಂದರೆ, ಇತ್ತೀಚೆಗೆ ಚೀನ ಸಹ ಭಾರತದ ಕೆಲವು ಸುದ್ದಿ ಮಾಧ್ಯಮಗಳನ್ನು ನಿಷೇಧಿಸಿತ್ತು ಎನ್ನುವುದು. ಆದರೆ ಸರ್ವಾಧಿಕಾರಿ ಆಡಳಿತದ ಚೀನಕ್ಕೂ, ನೇಪಾಲದ ಆಡಳಿತ ವ್ಯವಸ್ಥೆಗೂ ಬಹಳ ಅಂತರ ವಿರಬೇಕಲ್ಲವೇ? ಈ ಕಾರಣಕ್ಕಾಗಿಯೇ ಭಾರತದ ಸುದ್ದಿ ಮಾಧ್ಯಮಗಳ ಬಗ್ಗೆ ಅಸಮಾಧಾನವಿದ್ದರೆ, ದೂರುಗಳಿದ್ದರೆ ಮೊದಲು ಈ ವಿಷಯದ ಬಗ್ಗೆ ಸರಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ, ತೀರ್ಮಾನಕ್ಕೆ ಬರಬೇಕಿತ್ತು. ಸತ್ಯವೇನೆಂದರೆ, ಓಲಿಯವರು ತಮ್ಮ ಸರ್ವಾಧಿಕಾರಿ ಗುಣದಿಂದ, ಚೀನ ಪರ ಒಲವಿನಿಂದ ಪಕ್ಷದಲ್ಲೇ ತೀವ್ರ ಪ್ರತಿರೋಧ ಎದುರಿಸುತ್ತಿದ್ದಾರೆ. ಕೋವಿಡ್‌ ನಿರ್ವಹಣೆಯಲ್ಲಿ ಅವರ ಸರಕಾರ ಎಡವಿದೆ ಎಂಬ ಆರೋಪವೂ ಎದುರಾಗುತ್ತಿದೆ. ಇದೆಲ್ಲದರ ಪರಿಣಾಮವಾಗಿ, ಅವರ ಕುರ್ಚಿ ಇಂದೋ ನಾಳೆಯೋ ಉರುಳಿಬೀಳುವಂಥ ಸ್ಥಿತಿ ಎದುರಾಗಿದ್ದು, ಇದಕ್ಕೆಲ್ಲ ಖುದ್ದು ಓಲಿಯವರೇ ಸಂಪೂರ್ಣ ಜವಾಬ್ದಾರ. ಆದರೆ, ತಾವಾಗಿಯೇ ತಂದುಕೊಂಡಿರುವ ಈ ಸಂಕಷ್ಟಕ್ಕೆ ಅವರು ಭಾರತದತ್ತ ಬೆರಳು ತೋರಿಸುತ್ತಿರುವುದು ಹಾಸ್ಯಾಸ್ಪದ. ಭಾರತೀಯ ಸುದ್ದಿವಾಹಿನಿಗಳನ್ನು ನಿಷೇಧಿಸಿ ಜನರಿಂದ ಸತ್ಯವನ್ನು ಮುಚ್ಚಿಡುವ ಓಲಿ ಪ್ರಯತ್ನದ ಹಿಂದೆ ಚೀನದ ಸಲಹೆ ಕೆಲಸ ಮಾಡಿರಲಿಕ್ಕೂ ಸಾಕು!

ಓಲಿ ಆಡಳಿತ ಯಾವ ಮಟ್ಟಕ್ಕೆ ಈಗ ಚೀನದ ತಾಳಕ್ಕೆ ಕುಣಿಯುತ್ತಿದೆ ಎಂದರೆ, ಕೆಲ ಸಮಯದಿಂದ ನೇಪಾಲದ ರೇಡಿಯೋಗಳಲ್ಲಿ ಭಾರತ ವಿರೋಧಿ ಹಾಡುಗಳನ್ನೂ ಅದು ಬಿತ್ತರಿಸುತ್ತಿದೆ. ಒಟ್ಟಲ್ಲಿ ನೇಪಾಲವನ್ನು ಭಾರತದಿಂದ ದೂರವಾಗಿಸಿ, ಚೀನದ ಜೋಳಿಗೆಗೆ ಹಾಕಬೇಕೆಂಬ ಕೆ.ಪಿ. ಓಲಿ ಪ್ರಯತ್ನ, ನಿಸ್ಸಂಶಯವಾಗಿಯೂ ನೇಪಾಲಕ್ಕೆ ದೊಡ್ಡ ಹಾನಿ ಮಾಡಲಿದೆ. ಚೀನದ ಬೆಂಬಲದಿಂದ ಓಲಿ ತಮ್ಮ ಕುರ್ಚಿಯನ್ನು ಭದ್ರಗೊಳಿಸಿಕೊಳ್ಳಬಹುದು. ಆದರೆ, ಡ್ರ್ಯಾಗನ್‌ ರಾಷ್ಟ್ರ ಒಮ್ಮೆ ನೇಪಾಲದ ಮೇಲೆ ತನ್ನ ಹಿಡಿತ ಹೆಚ್ಚುಮಾಡಿಕೊಂಡಿತು ಎಂದರೆ, ಅಲ್ಲಿನ ಸಂಸ್ಕೃತಿ ವ್ಯವಸ್ಥೆಯನ್ನೇ ಅದು ನುಚ್ಚುನೂರು ಮಾಡಲಿದೆ. ಭಾರತ ಹಾಗೂ ನೇಪಾಲದ ನಡುವಿನ ಸಂಸ್ಕೃತಿ ಸಂಬಂಧಕ್ಕೂ ಹಾನಿ ಮಾಡಲು ಪ್ರಯತ್ನಿಸುತ್ತಿರುವ ಓಲಿ ಪ್ರಯತ್ನ ವಿಫ‌ಲವಾಗಲೇಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next