Advertisement

ನಿಲ್ಲದ ಡ್ರ್ಯಾಗನ್‌ ಹುಚ್ಚಾಟ ಎಚ್ಚರಿಕೆ ಅಗತ್ಯ

08:36 AM Jul 30, 2020 | mahesh |

ಚೀನ ತಾನು ಗಡಿ ಹಂಚಿಕೊಂಡಿರುವ ದೇಶಗಳೊಂದಿಗೆ ಬಿಕ್ಕಟ್ಟು ಮುಂದುವರಿಯುವುದನ್ನೇ ಬಯಸುತ್ತದೆ ಎಂದೆನಿಸುತ್ತಿದೆ. ಇತ್ತೀಚೆಗೆ ಲೇಹ್‌-ಲಡಾಖ್‌ ಕ್ಷೇತ್ರದ ಬಳಿ ಅದು ಸೃಷ್ಟಿಸಿದ ಬಿಕ್ಕಟ್ಟನ್ನು ಇಡೀ ಜಗತ್ತೇ ನೋಡಿದೆ. ತೀವ್ರವಾಗಿ ಖಂಡಿಸಿದೆ. ಒಂದು ವೇಳೆ ಭಾರತವೇನಾದರೂ ಸಮಯಕ್ಕೆ ಸರಿಯಾಗಿ ಪ್ರತಿರೋಧ ತೋರಿರಲಿಲ್ಲ ಎಂದಿದ್ದರೆ ನಿಸ್ಸಂಶಯವಾಗಿಯೂ ಚೀನ ತನ್ನ ದುರುದ್ದೇಶ ಈಡೇರಿಕೆಯನ್ನು ಮುಂದುವರಿಸುತ್ತಿತ್ತು. ಆದಾಗ್ಯೂ ಗಾಲ್ವಾನ್‌ ಕಣಿವೆಯಿಂದ ಪಿಎಲ್‌ಎ ಹಿಂದೆ ಸರಿದಿದೆಯಾದರೂ ಇನ್ನೂ ಕೆಲವು ಭಾಗಗಳಲ್ಲಿ ಮಾತುಕತೆಯನ್ವಯ ಅದು ಪೂರ್ಣವಾಗಿ ಹಿಂದೆ ಸರಿದಿಲ್ಲ ಎಂದು ಇತ್ತೀಚೆಗಷ್ಟೇ ಭಾರತೀಯ ಸೇನೆಯು ಹೇಳಿತ್ತು.

Advertisement

ಹೀಗಿರುವ ವೇಳೆಯಲ್ಲಿ ಪಿಎಲ್‌ಎ ಇನ್ನೂ ಕೆಲವು ಗಡಿ ಭಾಗಗಳಲ್ಲಿ ಸೇನಾ ಜಮಾವಣೆ ಮಾಡುತ್ತಿರುವ ಸುದ್ದಿ ಹೊರಬಿದ್ದಿದೆ. ಶನಿವಾರ ಭಾರತದ ಉಪಗ್ರಹ ಎಮಿಸ್ಯಾಟ್‌ ಚೀನ ಆಕ್ರಮಿತ ಟಿಬೆಟ್‌ನಲ್ಲಿ, ಅಂದರೆ ಅರುಣಾಚಲ ಪ್ರದೇಶದ ಸನಿಹದಲ್ಲಿ ಚೀನಿ ಸೇನೆಯು ತನ್ನ ಉಪಸ್ಥಿತಿಯನ್ನು ಹೆಚ್ಚಿಸಿರುವುದು, ಚಟುವಟಿಕೆಗಳನ್ನು ಹೆಚ್ಚಿಸಿಕೊಂಡಿರುವುದು ಪತ್ತೆ ಪಚ್ಚಿದೆ. ಎಮಿಸ್ಯಾಟ್‌ ಉಪಗ್ರಹವು ಕೌಟಿಲ್ಯ ಎನ್ನುವ ಎಲೆಕ್ಟ್ರಾನಿಕ್‌ ಗುಪ್ತಚರ ಮಾಹಿತಿ ಸಂಗ್ರಾಹಕ ತಂತ್ರಜ್ಞಾನವನ್ನು ಒಳಗೊಂಡಿದೆ. ಮೂಲಗಳ ಪ್ರಕಾರ ಟಿಬೆಟ್‌ ಹಾಗೂ ದೇಪ್‌ಸಾಂಗ್‌ ಸೆಕ್ಟರ್‌ನ ಸನಿಹವೂ ಚೀನ ಸೈನಿಕರನ್ನು ನಿಯೋಜಿಸುತ್ತಿದೆ ಎನ್ನುವುದು ಪತ್ತೆಯಾಗಿದೆ. ಹಾಗೆಂದು, ಚೀನ ಈ ರೀತಿ ಮಾಡುತ್ತಿರುವುದು ಮೊದಲ ಬಾರಿಯೇನೂ ಅಲ್ಲ. ಭಾರತದೊಂದಿಗೆ ಗಡಿ ಭಾಗದಲ್ಲಿ ಬಿಕ್ಕಟ್ಟು ಸೃಷ್ಟಿಯಾದಾಗಲೆಲ್ಲ ಈ ರೀತಿ ಅದು ಮಾಡುತ್ತಾ ಬಂದಿದೆ.

ಸತ್ಯವೇನೆಂದರೆ ಗಾಲ್ವಾನ್‌ ಕಣಿವೆಯಲ್ಲಿ ಚೀನದ ತಂತ್ರಗಳೆಲ್ಲ ನೆಲ ಕಚ್ಚಿವೆ. ಇದರಿಂದಾಗಿ ಅದಕ್ಕೆ ಹುಚ್ಚುಹಿಡಿದಂತಾಗಿದೆ. ಭಾರತವು ಈ ಬಾರಿ ಕೇವಲ ಸೈನ್ಯ ಬಲದಿಂದ ಒತ್ತಡ ತಂದದ್ದಷ್ಟೇ ಅಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಚೀನದ ಮೇಲೆ ಒತ್ತಡ ತರುವಲ್ಲಿ ಸಫ‌ಲವಾಗಿದೆ. ಇದಷ್ಟೇ ಅಲ್ಲದೇ ಭಾರತವು ಆರ್ಥಿಕ ಆಯಾಮದಿಂದಲೂ ಚೀನಕ್ಕೆ ಹೊಡೆತ ಕೊಟ್ಟಿರುವುದೂ ಡ್ರ್ಯಾಗನ್‌ ರಾಷ್ಟ್ರದ ಕಣ್ಣು ಕೆಂಪಾಗಿಸಿದೆ. ಈ ಕಾರಣದಿಂದಲೇ ನಮ್ಮ ಉಪಗ್ರಹಗಳು ಕೊಟ್ಟಿ ರುವ ಮಾಹಿತಿಯನ್ನು ಗಂಭೀರವಾಗಿಯೇ ಪರಿಗಣಿಸಬೇಕಾಗಿದೆ. ಇತ್ತೀಚೆಗಷ್ಟೇ ಚೀನ ಡೋಕ್ಲಾಂ ಪ್ರದೇಶವನ್ನು ತನಗೆ ಬಿಟ್ಟುಕೊಡಬೇಕು ಎಂಬ ಧಾಟಿಯಲ್ಲಿ ಭೂತಾನ್‌ನ ಮೇಲೆ ಒತ್ತಡ ಹಾಕಿದ್ದನ್ನು ನಾವು ನೋಡಿದ್ದೇವೆ. ಇನ್ನು ನೇಪಾಲದ ಪ್ರಧಾನಮಂತ್ರಿಯನ್ನು ಅದು ಭಾರತ ವಿರೋಧಿ ನಡೆಗಳಿಗೂ ಬಳಸಿಕೊಳ್ಳಲಾರಂಭಿಸಿದೆ.

ಈ ಕಾರಣಕ್ಕಾಗಿಯೇ ಭಾರತದ ವಿರುದ್ಧ ಯುದ್ಧ ಸಾರಲು ಅದು ಸಿದ್ಧತೆ ನಡೆಸಿಬಿಟ್ಟಿದೆಯೇ ಎಂಬ ಪ್ರಶ್ನೆ ಎದುರಾಗುತ್ತಿದೆ. ಆದರೆ ಇದು 1962 ಅಲ್ಲ, ಭಾರತವೀಗ ತನ್ನಂತೆಯೇ ಜಗತ್ತಿನ ಅತಿಬಲಿಷ್ಠ ಮಿಲಿಟರಿ ಶಕ್ತಿಗಳಲ್ಲಿ ಒಂದು ಎನ್ನುವ ಅರಿವು ಚೀನಕ್ಕೆ ಸ್ಪಷ್ಟವಿದೆ. ಹಾಗಿದ್ದರೆ ಚೀನ ಏಕೆ ಹೀಗೆ ಮಾಡುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರ ಸರಳ. ಭಾರತವು ಗಡಿ ಭಾಗದಲ್ಲಿ ನಿರ್ಮಿಸುತ್ತಿರುವ ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆ ಉಂಟುಮಾಡುವ ಉದ್ದೇಶ ಅದಕ್ಕಿದೆ. ಒಮ್ಮೆ ಈ ರಸ್ತೆಗಳೆಲ್ಲ ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿಯಾಗಿಬಿಟ್ಟರೆ, ಅದರ ಕಳ್ಳಾಟಗಳಿಗೆಲ್ಲ ಬ್ರೇಕ್‌ ಬೀಳಲಿದೆ. ಈ ಕಾರಣಕ್ಕಾಗಿಯೇ, ಗಡಿಭಾಗದಲ್ಲಿ ಬಿಕ್ಕಟ್ಟು ಸೃಷ್ಟಿಸಲು ಚೀನ ಪ್ರಯತ್ನಿಸುತ್ತಲೇ ಇದೆ. ಆದರೆ, ಭಾರತವು ಚೀನದ ಪ್ರತಿಯೊಂದು ತಂತ್ರಕ್ಕೂ ಪ್ರತಿತಂತ್ರ ರಚಿಸಿ, ಎಚ್ಚರಿಕೆ ವಹಿಸುತ್ತಿರುವುದು ಶ್ಲಾಘನೀಯ ಸಂಗತಿ.

Advertisement

Udayavani is now on Telegram. Click here to join our channel and stay updated with the latest news.

Next