Advertisement

ವೈದ್ಯಕೀಯ ಸಿಬ್ಬಂದಿಗೆ ಪ್ರೋತ್ಸಾಹ ಧನ

01:04 AM Mar 21, 2020 | Lakshmi GovindaRaj |

ಬೆಂಗಳೂರು: ಕೊರೊನಾ ವೈರಸ್‌ ನಿಯಂತ್ರಿಸುವಲ್ಲಿ ಹಗಲು, ರಾತ್ರಿ ದುಡಿಯುತ್ತಿರುವ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ ಹಾಗೂ ವಿಮಾ ಸೌಲಭ್ಯ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

Advertisement

ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಮಾತನಾಡಿ, ಆರೋಗ್ಯ ಇಲಾಖೆಯ ಸಿಬ್ಬಂದಿ, ವೈದ್ಯರು, ಆಶಾ ಕಾರ್ಯಕರ್ತರ ಸೇವೆಯನ್ನು ಗುರುತಿಸುವ ನಿಟ್ಟಿನಲ್ಲಿ ಹ್ಯಾಷ್‌ ಟ್ಯಾಗ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ನಮ್ಮ ಯೋಧರೆಂದು ಬಿಂಬಿಸಲಾಗುವುದು ಎಂದರು.

ಬುಧವಾರ ಸೋಂಕು ದೃಢಪಟ್ಟವರ ಪ್ರಾಥಮಿಕ ಸಂಪರ್ಕದಲ್ಲಿರುವ ವ್ಯಕ್ತಿಗಳಿಗೂ ಸೂಕ್ತ ಸಲಹೆ, ಸೂಚನೆ ನೀಡಿ ಮನೆಯಲ್ಲಿಯೇ ನಿಗಾ ವಹಿಸಲಾಗಿದ್ದು, ಯಾರಲ್ಲೂ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಕೊರೊನಾ ಸೋಂಕಿತರು ಸ್ವಂತ ಖರ್ಚಿನಲ್ಲಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಾರೆ ಎಂದರೆ ಅವಕಾಶವಿದೆ.

ಆದರೆ, ಪ್ರಾಥಮಿಕ ಚಿಕಿತ್ಸೆ, ಸೋಂಕು ಪರೀಕ್ಷೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿಯೇ ನಡೆಯಬೇಕು. ಈಗಾಗಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಯಾವುದೇ ಕಾರಣಕ್ಕೂ ಖಾಸಗಿ ಆಸ್ಪತ್ರೆಗೆ ತೆರಳಲು ಅವಕಾಶ ಕೊಡುವುದಿಲ್ಲ. ಸೋಂಕಿತರ ಹಾಗೂ ಆಸ್ಪತ್ರೆಯಲ್ಲಿ ಶಂಕಿತರಾಗಿ ನಿಗಾದಲ್ಲಿರುವವರ ಪೈಕಿ ಯಾರೂ ಆಸ್ಪತ್ರೆಯಿಂದ ತಪ್ಪಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

ಹೆಚ್ಚು ಉದ್ಯೋಗಿಗಳಿರುವ ಗಾರ್ಮೆಂಟ್ಸ್‌ ಕಾರ್ಖಾನೆಗಳು ಹಾಗೂ ಸಣ್ಣ ಕೈಗಾರಿಕೆಗಳು ಮುಂಜಾಗ್ರತಾ ಕ್ರಮ ಕೈಗೊಳ್ಳದ ಹಾಗೂ ರಜೆ ನೀಡದಿರುವ ಕುರಿತು ಕೈಗಾರಿಕೋದ್ಯಮಿಗಳ ಸಭೆ ಕರೆದು, ಕ್ರಮ ಕೈಗೊಳ್ಳುವಂತೆ ಕೈಗಾರಿಕಾ ಸಚಿವರ ಜತೆ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.

Advertisement

ಆರೋಗ್ಯ ಇಲಾಖೆಯ ಅಂಕಿ-ಅಂಶ
1,17,306 ಈವರೆಗೆ ತಪಾಸಣೆ ಮಾಡಲಾದ ಪ್ರಯಾಣಿಕರು.
82,276 ಬೆಂಗಳೂರಲ್ಲಿ ತಪಾಸಣೆಗೊಳಗಾದವರು.
29,477 ಮಂಗಳೂರು ಅಂ.ರಾ.ವಿಮಾನ ನಿಲ್ದಾಣದಲ್ಲಿ ತಪಾಸಣೆಗೊಳಗದವರು.
5,533 ಮಂಗಳೂರು, ಕಾರವಾರ ಬಂದರಿನಲ್ಲಿ ತಪಾಸಣೆಗೊಳಗದವರು.
54 ಭಾರತದಲ್ಲಿರುವ ಲ್ಯಾಬ್‌ಗಳು.
5 ರಾಜ್ಯದಲ್ಲಿರುವ ಲ್ಯಾಬ್‌ಗಳ ಸಂಖ್ಯೆ.
37 ಬುಧವಾರ ಆಸ್ಪತ್ರೆಗೆ ಒಳರೋಗಿಗಳಾಗಿ ದಾಖಲಾದವರು.
18 ನೆಗೆಟಿವ್‌ ವರದಿ ಹಿನ್ನೆಲೆಯಲ್ಲಿ ಡಿಸ್ಚಾರ್ಜ್‌ ಆದವರು.
80 ಆಸ್ಪತ್ರೆಗಳಲ್ಲಿ ನಿಗಾದಲ್ಲಿರುವವರು.
103 ಈ ಹಿಂದೆ ಮಾದರಿ ಸಂಗ್ರಹಿಸಿದ್ದವರ ಪೈಕಿ ನೆಗೆಟಿವ್‌ ವರದಿ ಬಂದವರು.
125 ಬುಧವಾರ ಹೊಸದಾಗಿ ಗಂಟಲು ದ್ರಾವಣ, ರಕ್ತ ಮಾದರಿ ಪರೀಕ್ಷೆಗೆ ಕಳಿಸಿದವರು.

ಹುಬ್ಬಳ್ಳಿ, ಮಂಗಳೂರು ಸೇರಿದಂತೆ ಇನ್ನೂ ಮೂರ್‍ನಾಲ್ಕು ಕಡೆ ಲ್ಯಾಬ್‌ಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಎಲ್ಲಾ ಜಿಲ್ಲೆಗಳ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಲ್ಯಾಬ್‌ ಮಾಡಲು ಚಿಂತನೆ ಇದೆ. ಕೊರೊನಾ ಹರಡುವ ಪ್ರಮಾಣ ವ್ಯಾಪಕವಾಗಿದೆ. ಹೀಗಾಗಿ, ನಾವು ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಸೋಂಕು ತಗುಲಿದವರ ರಾಜ್ಯಗಳಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ.
-ಸುಧಾಕರ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next