ಮೂಡಿಗೆರೆ: ಪಟ್ಟಣದಲ್ಲಿ ತಾಲೂಕು ಆಡಳಿತ ಮತ್ತು ಮೂಡಿಗೆರೆ ಉತ್ಸವ ಸಮಿತಿ ವತಿಯಿಂದ ಫೆ.11ರಿಂದ 14ರವರೆಗೆ ನಡೆಯುತ್ತಿರುವ ಮೂಡಿಗೆರೆ ಉತ್ಸವ ಕಾರ್ಯಕ್ರಮಕ್ಕೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಶನಿವಾರ ಸಂಜೆ ಮರವಣಿಗೆ ಮೂಲಕ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಶಾಸಕ ಎಂ.ಪಿ. ಕುಮಾರಸ್ವಾಮಿ ಸೇರಿದಂತೆ ವಿವಿಧ ಪಕ್ಷದ ಮುಖಂಡರು ಚಾಲನೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪಸಭಾಪತಿ ಪ್ರಾಣೇಶ್ ಅವರು, ಮೂಡಿಗೆರೆ ಉತ್ಸವಕ್ಕೆ ಪಕ್ಷಬೇಧ ಮರೆತು ಎಲ್ಲರೂ ಒಗ್ಗೂಡಿ ಬೆಂಬಲ ನೀಡಿರುವುದು ಮತ್ತಷ್ಟು ಹುರುಪು ನೀಡಿದೆ. ಎಲ್ಲರೂ ಶ್ರಮ ವಹಿಸುತ್ತಿರುವುದು ಕಾರ್ಯಕ್ರಮ ಕಳೆಗಟ್ಟಲು ಸಹಕಾರಿಯಾಗಿದೆ. ತಳಮಟ್ಟದ ಕೆಲಸಗಾರರಿಂದ ಹಿಡಿದು ಉನ್ನತ ಸ್ಥಾನಮಾನದ ಪ್ರತಿಯೊಬ್ಬರೂ ಮೂಡಿಗೆರೆ ಉತ್ಸವದ ಯಶಸ್ಸಿನ ಹಿಂದಿದ್ದಾರೆ. ತಾಲೂಕಿನ ಪ್ರತಿಯೊಬ್ಬ ವ್ಯಕ್ತಿಯೂ ಉತ್ಸವದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದರು.
ನಂತರ ಮಾತನಾಡಿದ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು, ಮೂಡಿಗೆರೆ ಉತ್ಸವ ತಾಲೂಕಿನ ಪ್ರತೀ ಪ್ರಜೆಯ ಹೆಮ್ಮೆಯ ಸಂಕೇತವಾಗಿದೆ. ತಾಲೂಕಿನಲ್ಲಿ ಉತ್ಸವ ಆಚರಣೆ ಹೊಸ ಸಂಸ್ಕೃತಿಯನ್ನು ಹುಟ್ಟುಹಾಕುತ್ತಿದೆ. ನಮ್ಮ ಸಂಸ್ಕೃತಿ, ಭಾಷೆ ಸ್ಥಳೀಯತೆಯನ್ನು ಎಲ್ಲರಿಗೂ ಸಾರುವ ಜೊತೆಗೆ ಪ್ರತಿಯೊಬ್ಬರೂ ಸಂಭ್ರಮಿಸುವ ಉತ್ಸಾಹಭರಿತ ಕಾರ್ಯಕ್ರಮಕ್ಕೆ ಸಾಕ್ಷಿಯಾಗುತ್ತಿರುವುದು ನಮ್ಮೆಲ್ಲರ ಪೂರ್ವಜನ್ಮದ ಪುಣ್ಯ ಎಂದರು.
ಮೂಡಿಗೆರೆ ಉತ್ಸವಕ್ಕೂ ಆರಂಭದ ಮೊದಲ ಕಾರ್ಯಕ್ರಮವಾದ ಹೆಲಿ ಟೂರಿಸಂಗೆ ಬೆಳಗ್ಗೆ 10ಗಂಟೆಗೆ ತೆರಳುವ ಪ್ರಯಾಣಿಕರು ಹೆಲಿಕ್ಯಾಪ್ಟರ್‌ನಲ್ಲಿ ಕುಳಿತು ತಾಲೂಕಿನ ವಿವಿಧ ಪ್ರವಾಸಿ ತಾಣಗಳನ್ನು ವೀಕ್ಷಿಸುವ ಮೂಲಕ ಸಂಭ್ರಮಿಸಿದರು. ಸಂಜೆ ಮರವಣಿಗೆಯಲ್ಲಿ ವಿವಿಧ ತಂಡಗಳಿಂದ ಕೃತಕ ಕೋಳಿ, ಸಿಂಹ, ಕರಡಿ ಸೇರಿದಂತೆ ವಿವಿಧ ಬಗೆಯ ಕಲಾಕೃತಿಗಳು ಹಾಗೂ ಡೊಳ್ಳು, ವೀರಗಾಸೆ, ಕಹಳೆ ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು.