ಪಿರಿಯಾಪಟ್ಟಣ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ನೀಡಲಾಗುತ್ತಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು. ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ಗ್ರಾಮ ಪರಿಮಿತಿ ರಸ್ತೆಗೆ ಭೂಮಿಪೂಪೂಜೆ ನೆರವೇರಿಸಿ ಅವರು ಮಾತನಾಡಿದರು.
ನರೇಂದ್ರ ಮೋದಿ ಪ್ರಧಾನಿಯಾದ ನಂತರ 14ನೇ ಹಣಕಾಸು ಆಯೋಗದ ಯೋಜನೆಯಡಿ ನೇರವಾಗಿ ಗ್ರಾಮ ಪಂಚಾಯಿತಿಗಳಿಗೆ ಅನುದಾನ ನೀಡುತ್ತಿದ್ದು, ತಾವು ಸಂಸದರಾದ ಬಳಿಕ ಪಿರಿಯಾಪಟ್ಟಣ ತಾಲೂಕಿನಲ್ಲಿ 16 ನೂತನ ಗ್ರಾಮ ಪಂಚಾಯತಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಹುಣಸೂರಿನಲ್ಲಿ 26 ಗ್ರಾಪಂ ಕಟ್ಟಡ ನಿರ್ಮಿಸಲಾಗಿದೆ ಎಂದರು.
ಪಿರಿಯಾಪಟ್ಟಣದಲ್ಲಿ ತಂಬಾಕು ಬೆಳೆಗಾರರಿಗೆ ಅಗತ್ಯಕ್ಕೆ ತಕ್ಕಂತೆ ಬಿತ್ತನೆಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಒದಗಿಸಲಾಗುತ್ತಿದೆ. ತಾಲೂಕಿನಲ್ಲಿರುವ ಅನಧಿಕೃತ ತಂಬಾಕು ಬೆಳೆಗಾರರಿಗೆ ಕೂಡಲೇ ಪರವಾನಗಿ ನೀಡಲು ಮಂಡಳಿಯೊಂದಿಗೆ ಮಾತನಾಡಲಾಗುವುದು ಎಂದರು. ಮೈಸೂರು-ಬೆಂಗಳೂರು ನಡುವೆ ಹತ್ತು ಪಥದ ಹೆದ್ದಾರಿ ಯೋಜನೆ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು ಶ್ರೀರಂಗಪಟ್ಟಣ-ಮಡಿಕೇರಿ ನಡುವೆ ನೂತನ ನಾಲ್ಕು ಪಥದ ಹೆದ್ದಾರಿ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಶಾಸಕ ಕೆ.ಮಹದೇವ್ ಮಾತನಾಡಿ, ಅಧಿಕಾರಿಗಳು ತಮ್ಮ ವೇಗಕ್ಕೆ ತಕ್ಕ ಕೆಲಸ ಮಾಡಲು ಸಿದ್ಧರಾಗಬೇಕು. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಅನುದಾನದಿಂದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪಿರಿಯಾಪಟ್ಟಣ-ಸಿದ್ದಾಪುರ ರಸ್ತೆ ಅಗಲೀಕರಣಕ್ಕಾಗಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು ಸಂಸದರೊಂದಿಗೆ ಶೀಘ್ರದಲ್ಲೇ ಮುಖ್ಯಮಂತ್ರಿಗಳನ್ನು ಭೇಟಿಮಾಡಿ ಯೋಜನೆಗೆ ಅನುಮೋದನೆ ಪಡೆದುಕೊಳ್ಳಲು ಯತ್ನಿಸುವುದಾಗಿ ತಿಳಿಸಿದರು.
ಈ ವೇಳೆ ತಹಶೀಲ್ದಾರ್ ಶ್ವೇತಾ, ತಾಪಂ ಇಒ ಡಿ.ಸಿ.ಶ್ರುತಿ, ಪಿಡಿಒ ಶಿವನಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎನ್.ರವಿ, ಮುಖಂಡರಾದ ರಘುನಾಥ್, ಮೋಹನ್ ಇತರರಿದ್ದರು.