ಮುಂಬಯಿ: ನಗರದ ಕನ್ನಡಿಗರ ಪ್ರತಿಷ್ಠಿತ ಸಹಕಾರಿ ಬ್ಯಾಂಕ್‌ಗಳಲ್ಲಿ ಒಂದಾದ ಮೊಗವೀರ ಕೋ. ಆಪರೇಟಿವ್ ಬ್ಯಾಂಕಿನ ಬೊರಿವಲಿ ಪಶ್ಚಿಮದ ಸ್ಥಳಾಂತರಿತ ಶಾಖೆಯ ಉದ್ಘಾಟನಾ ಸಮಾರಂಭವು ಜ. 29 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ನಗರದ ಪ್ರಖ್ಯಾತ ವೈದ್ಯರಾದ ಡಾ| ಹರ್ಷದ್ ಜರಿವಾಲಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷರಾದ ಕೆ. ಎಲ್. ಬಂಗೇರರವರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದರು. ಅತಿಥಿಗಳು ರಿಬ್ಬನ್ ಕತ್ತರಿಸಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬ್ಯಾಂಕಿನ ಕಾರ್ಯಾಧ್ಯಕ್ಷರಾದ ಸದಾನಂದ ಎ. ಕೋಟ್ಯಾನ್ ಈ ಸಂದರ್ಭದಲ್ಲಿ ಮಾತನಾಡಿ, ಬ್ಯಾಂಕಿನ ಇತಿಹಾಸ ಹಾಗೂ ನಡೆದು ಬಂದ ದಾರಿಯಲ್ಲಿ ಸಾಧಿಸಿದ ಸಾಧನೆಗಳನ್ನು ಪ್ರಸ್ತಾಪಿಸಿ ಮುಂದಿನ ಯೋಜನೆಗಳಿಗೆ ಸರ್ವರ ಸಹಕಾರ ಇರಲಿ ಎಂದರು.
ಮುಖ್ಯ ಅತಿಥಿ ಡಾ| ಹರ್ಷದ್ ಜರಿವಾಲಾ ಮತ್ತು ಗೌರವ ಅತಿಥಿಗಳಾದ ಕೆ. ಎಲ್. ಬಂಗೇರ ಅವರು ಮಾತನಾಡಿ, ತಾವು ಇಂತಹ ಉತ್ತಮ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹರ್ಷವಾಗುತ್ತದೆ ಹಾಗೂ ಪ್ರಸ್ತುತ ಆಡಳಿತ ಮಂಡಳಿ ಬ್ಯಾಂಕಿನ ಪ್ರಗತಿಗೆ ಶಕ್ತಿಮೀರಿ ದುಡಿಯುತ್ತಿರುವುದು ಹಾಗೂ ಉತ್ತಮ ಯೋಜನೆಗಳನ್ನು ರೂಪಿಸಿ ಧನಾತ್ಮಕ ಚಿಂತನೆಗಳನ್ನು ಹೊಂದಿರುವುದು ಶ್ಲಾಘನೀಯ ಎಂದರು.
ಉಪಾಧ್ಯಕ್ಷರಾದ ಧರ್ಮಪಾಲ ಅವರು ಮಾತನಾಡಿ, ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಬ್ಯಾಂಕ್ ಸರ್ವ ರೀತಿಯಿಂದಲೂ ಉನ್ನತಿಗಾಗಿ ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲಿ ಬ್ಯಾಂಕ್ ಮತ್ತಷ್ಟು ಪ್ರಗತಿ ಪಥದಲ್ಲಿ ಸಾಗುವ ಭರವಸೆ ಇದೆ ಎಂದರು. ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ. ಡಿ. ಶಿರಾಲಿ ಅವರು ಬ್ಯಾಂಕ್ ಈಗ ಹೊಸತಾದ ಹಾಗೂ ಉನ್ನತ ಮಟ್ಟದ ಸಾಫ್ಟ್‌ವೇರ್ ಅಳವಡಿಸಿದೆ. ಇದರಿಂದ ಗ್ರಾಹಕರಿಗೆ ಶೀಘ್ರ ಮತ್ತು ಮೌಲ್ಯಯುತ ಸೇವೆ ಲಭ್ಯವಾಗಲಿದೆ ಎಂದರು.
ಬೊರಿವಲಿಯ ಸಂಸದರಾದ ಗೋಪಾಲ ಶೆಟ್ಟಿ ಅವರು ಆಗಮಿಸಿ ಶುಭ ಹಾರೈಸಿದರು. ಅವರನ್ನು ಉಪ ಕಾರ್ಯಾಧ್ಯಕ್ಷ ಧರ್ಮಪಾಲ ಅವರು ಗೌರವಿಸಿದರು. ಬ್ಯಾಂಕಿನ ನಿರ್ದೇಶಕರಾದ ಜನಾರ್ದನ ಮುಲ್ಕಿ ಮಾಜಿ ಕಾರ್ಯ ನಿರ್ವಹಣಾಧಿಕಾರಿ ಎಂ. ಸಿ. ಶೆಟ್ಟಿ, ಉದ್ಯಮಿಗಳಾದ ಏಕನಾಥ ಅಮೀನ್, ಜಿಜುಭಾಯಿ ಪಟೇಲ್ ಬ್ಯಾಂಕಿನ ಪ್ರಗತಿ ಕುರಿತು ಪ್ರಶಂಶಿಸಿದರು.
ಅತಿಥಿಗಳನ್ನು ಸದಾನಂದ ಕೋಟ್ಯಾನ್ ಅವರು, ಶಾಲು ಹೊದೆಸಿ ಫಲಪುಷ್ಪ ನೀಡಿ ಗೌರವಿಸಿದರು. ಸಹಾಯಕ ಜನರಲ್ ಮ್ಯಾನೇಜರ್ ರೋಹಿತ್ ದೇಸಾಯಿ ಸರ್ವರನ್ನು ಸ್ವಾಗತಿಸಿದರು. ನಿರ್ದೇಶಕರಾದ ಜಯಶೀಲ ತಿಂಗಳಾಯ ವಂದಿಸಿದರು. ಮುಂಜಾನೆ ಪೂಜಾ ವಿಧಿಯಿಂದ ಆರಂಭವಾದ ಕಾರ್ಯಕ್ರಮದಲ್ಲಿ ಗ್ರಾಹಕರು, ಹಿತೈಷಿಗಳು, ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.