Advertisement
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಂದಿನ ವರ್ಷ ಶ್ರವಣಬೆಳಗೊಳದಲ್ಲಿ ನಡೆಯಲಿರುವ ಗೊಮ್ಮಟೇಶ್ವರನ ಮಹಾಮಸ್ತಕಾಭಿಷೇಕಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕೆ ದೇಶದ ಎಲ್ಲ ಕಡೆಗಳಿಂದಲೂ ಹಾಸನ – ಶ್ರವಣಬೆಳಗೊಳಕ್ಕೆ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಬೇಕು ಎಂದು ರೈಲ್ವೇ ಸಚಿವರಲ್ಲಿ ಮನವಿ ಮಾಡಿದರು.
Related Articles
Advertisement
ಮೇಯಲ್ಲಿ ಸಬ್ ಅರ್ಬನ್ ರೈಲಿಗೆ ಚಾಲನೆಬೆಂಗಳೂರಿನಲ್ಲಿ ಆರಂಭಿಸಲು ಉದ್ದೇಶಿಸಿರುವ ಸಬ್ ಅರ್ಬನ್ ರೈಲು ಯೋಜನೆ (ಉಪನಗರ ರೈಲು ಯೋಜನೆ) ಕಾಮಗಾರಿಗೆ ಮೇ ತಿಂಗಳಲ್ಲಿ ಶಂಕು ಸ್ಥಾಪನೆ ನೆರವೇರಿಸಲಾಗುವುದು ಎಂದು ರೈಲೇ ಸಚಿವ ಪ್ರಭು ಹೇಳಿದರು. ಮುಂದಿನ 3 ವರ್ಷಗಳೊಳಗೆ ಬೆಂಗಳೂರು – ಮುಂಬಯಿ ಜೋಡಿ ರೈಲುಮಾರ್ಗದ ಕಾಮಗಾರಿ ಪೂರ್ಣಗೊಳಿಸಲಾಗುವುದು. ಹೂಡಿ, ಯಲಹಂಕದ ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಕರ್ನಾಟಕದಲ್ಲಿ ನನೆಗುದಿಗೆ ಬಿದ್ದಿರುವ ರೈಲು ಯೋಜನೆಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಗೊಂಡು ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲಾಗುವುದು. ರಾಜ್ಯದಲ್ಲಿ ಸುಮಾರು 220 ಕಿ.ಮೀ. ರೈಲು ಮಾರ್ಗವನ್ನೂ ಜೋಡಿ ಮಾರ್ಗವಾಗಿ ಪರಿವರ್ತಿಸಲಾಗುತ್ತಿದೆ ಎಂದರು. ಮೊದಲೇ ಹೆಸರು ಘೋಷಣೆ !
ರೈಲ್ವೇ ಮಂಡಳಿಯು ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಮಂಗಳೂರಿಗೆ ಇನ್ನೂ ಹೊಸ ರೈಲು ಸಂಚಾರ ಪ್ರಾರಂಭಿಸಿಲ್ಲ. ಆದರೆ ಹೊಸ ರೈಲು ಪ್ರಾರಂಭಿಸುವುದಕ್ಕೂ ಮೊದಲೇ ಬೆಂಗಳೂರು – ಹಾಸನ-ಮಂಗಳೂರು ಇಂಟರ್ ಸಿಟಿ ರೈಲಿಗೆ ರೈಲ್ವೇ ಸಚಿವರು ‘ಗೊಮ್ಮಟೇಶ್ವರ ಎಕ್ಸ್‌ಪ್ರೆಸ್’ ಎಂದು ಹೆಸರು ಘೋಷಣೆ ಮಾಡಿ ಗೊಂದಲಕ್ಕೆ ಎಡೆ ಮಾಡಿದ್ದಾರೆ. ಸಚಿವರ ಈ ಘೋಷಣೆಯು ರೈಲ್ವೇ ಅಧಿಕಾರಿಗಳಲ್ಲಿ ಗೊಂದಲ ಮೂಡಿಸಿದೆ. ಅದಕ್ಕೆ ಸಮಜಾಯಿಷಿ ನೀಡಿರುವ ರೈಲ್ವೇ ಅಧಿಕಾರಿಗಳು, ಆದಷ್ಟು ಬೇಗ ಬೆಂಗಳೂರು-ಹಾಸನ-ಮಂಗಳೂರು ರೈಲು ಸಂಚಾರ ಪ್ರಾರಂಭಿಸುವುದಾಗಿ ಹೇಳಿದ್ದಾರೆ. ವಾಸ್ತವದಲ್ಲಿ ಬೆಂಗಳೂರು – ಹಾಸನ ರೈಲಿನ ಜತೆಗೆ, ಬೆಂಗಳೂರು – ಹಾಸನ – ಮಂಗಳೂರು ಹೊಸ ರೈಲು ಸಂಚಾರಕ್ಕೂ ಚಾಲನೆ ದೊರೆಯಬೇಕಿತ್ತು. ಆದರೆ, ಕೇರಳದ ವ್ಯಾಪ್ತಿಯಲ್ಲಿರುವ ದಕ್ಷಿಣ ರೈಲ್ವೇ ವಲಯದ ಮಲತಾಯಿ ಧೋರಣೆಯಿಂದಾಗಿ ಹಾಸನ ಮಾರ್ಗವಾಗಿ ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸಬೇಕಾಗಿದ್ದ ಈ ಹೊಸ ರೈಲು ಅಂತಿಮ ಕ್ಷಣದಲ್ಲಿ ರದ್ದುಗೊಂಡಿದೆ. ದಕ್ಷಿಣ ರೈಲ್ವೇ ವಲಯವು ಮಂಗಳೂರಿನಲ್ಲಿ ಈ ರೈಲು ನಿಲುಗಡೆಗೆ ಜಾಗದ ಕೊರತೆ ಕಾರಣ ನೀಡಿರುವುದರಿಂದ ಸದ್ಯಕ್ಕೆ ಅದು ರದ್ದುಗೊಂಡಿದೆ. ಅದಕ್ಕೆ ಕರಾವಳಿ ಭಾಗದ ರೈಲು ಪ್ರಯಾಣಿಕರು ಈಗಾಗಲೇ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಸನ ಮಾರ್ಗದ ಮುಖ್ಯ ಉದ್ದೇಶವೇ ಬೆಂಗಳೂರಿನಿಂದ ಮಂಗಳೂರಿಗೆ ನೇರ ರೈಲು ಸಂಪರ್ಕ ಕಲ್ಪಿಸುವುದು ಆಗಿದೆ. ಆದರೆ ಈಗ ರೈಲ್ವೇ ಮಂಡಳಿಯು ಕೇವಲ ಹಾಸನದವರೆಗೆ ಮಾತ್ರ ರೈಲು ಓಡಿಸುತ್ತಿರುವುದಕ್ಕೆ ಅನುಮತಿ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಹೀಗಿರುವಾಗ ರೈಲ್ವೇ ಸಚಿವರು, ಮಂಗಳೂರಿಗೆ ಹೊಸ ರೈಲು ಮಂಜೂರು ಮಾಡದೆ ಅದಕ್ಕೆ ಏಕಾಏಕಿ ‘ಗೊಮ್ಮಟೇಶ್ವರ ಎಕ್ಸ್‌ಪ್ರೆಸ್’ ಎಂದು ಹೆಸರು ಘೋಷಿಸಿರುವುದು ಗಮನಾರ್ಹ. ಕಾಮಗಾರಿಗೆ 21 ವರ್ಷ
ಹಾಸನ – ಬೆಂಗಳೂರು ರೈಲು ಮಾರ್ಗ ಮಂಜೂರಾಗಿದ್ದು ಎಚ್.ಡಿ. ದೇವೇಗೌಡ ಅವರು ಪ್ರಧಾನಿಯಾಗಿದ್ದ 1996-97ನೇ ಸಾಲಿನಲ್ಲಿ. ಭೂಸ್ವಾಧೀನ ವಿವಾದದಿಂದಾಗಿ ಕಾಮಗಾರಿ ಕಷ್ಟು ವಿಳಂಬವಾಗಿ 21 ವರ್ಷದ ಬಳಿಕ ಪೂರ್ಣಗೊಂಡಿದೆ. ಇದರಿಂದಾಗಿ ಸುಮಾರು 300ರಿಂದ 400 ಕೋಟಿ ರೂ. ವೆಚ್ಚದ ಈ ಯೋಜನೆಗೆ ಕಾಮಗಾರಿ ಪೂರ್ಣಗೊಳ್ಳುವ ವೇಳೆ ಸುಮಾರು 1,290 ಕೋಟಿ ರೂ. ವೆಚ್ಚವಾಗಿದೆ. ಈ ಪೈಕಿ ರೈಲ್ವೇ ಇಲಾಖೆ 823 ಕೋಟಿ ರೂ. ನೀಡಿದರೆ, ರಾಜ್ಯ ಸರಕಾರ 467 ಕೋಟಿ ರೂ. ವೆಚ್ಚ ಮಾಡಿದೆ. ರೈಲು ಸಂಚಾರ ಆರಂಭವಾಗಿರುವುದರಿಂದ ಇನ್ನು ಮುಂದೆ ಮಂಗಳೂರಿನಿಂದ ಬೆಂಗಳೂರಿಗೆ ಬರುವ ರೈಲುಗಳು ಮೈಸೂರು ಸುತ್ತಿ ಬರಬೇಕಾದ ಅನಿವಾರ್ಯತೆ ಇಲ್ಲದಂತಾಗಿದೆ.