ಮಹಾನಗರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡಗುಂಡಿಗಳಿಂದ ತುಂಬಿ ಪಡೀಲು ರೈಲ್ವೇ ಕೆಳಸೇತುವೆ ಬಳಿಯ ಟ್ರಾಫಿಕ್ ಜಾಮ್‌ಗೆ ಮುಕ್ತಿ ಸಿಗುವ ಕಾಲ ಸನ್ನಿಹಿತವಾಗಿದ್ದು, ಇಲ್ಲಿ ನಿರ್ಮಾಣವಾಗಿರುವ ಹೊಸ ಕೆಳಸೇತುವೆಯು ನ. 15ರಂದು ಬೆಳಗ್ಗೆ 9ಕ್ಕೆ ಸಂಸದ ನಳಿನ್‌ಕುಮಾರ್ ಕಟೀಲು ಅವರಿಂದ ಉದ್ಘಾಟನೆಗೊಳ್ಳಲಿದೆ. ಉದ್ಘಾಟನೆಗೆ ಈ ಹಿಂದೆ ಹಲವು ದಿನಾಂಕ ನಿಗದಿಪಡಿಸಲಾಗಿತ್ತಾದರೂ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ವಿಳಂಬವಾಗಿತ್ತು.
ಕಳೆದ ಮಳೆಗಾಲದಲ್ಲಿ ಇಲ್ಲಿಯ ಹೆದ್ದಾರಿಯಲ್ಲಿ ಹೊಂಡಗಳು ತುಂಬಿದ ಹಿನ್ನೆಲೆಯಲ್ಲಿ ವಾಹನಗಳು ನಿಧಾನವಾಗಿ ಸಂಚರಿಸಿದ ಪರಿಣಾಮ ತಾಸುಗಟ್ಟಲೆ ಟ್ರಾಫಿಕ್ ಜಾಮ್ ಕಂಡುಬಂದಿತ್ತು. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿ ಪ್ರತಿಭಟನೆ ನಡೆಸುವ ಹಂತಕ್ಕೆ ತಲುಪಿತ್ತು.
ಬಳಿಕ ಸಂಸದ ನಳಿನ್‌ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಹಲವು ಸಭೆಗಳಲ್ಲೂ ಅಧಿಕಾರಿಗಳ ನಡೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಸ್ತುತ ಹೊಸ ಸೇತುವೆಯ ಇಕ್ಕೆಲಗಳಲ್ಲಿ ರಸ್ತೆ ಸುಸ್ಥಿತಿಯಲ್ಲಿರುವ ಕಾರಣ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ.
ಹಳೆ ಸೇತುವೆ ಕಾಮಗಾರಿ
ಪಡೀಲಿನ ಹಳೆ ಕೆಳಸೇತುವೆಯು ತೆರೆದ ಸೇತುವೆಯಾಗಿರುವುದರಿಂದ ಅದರ ಕಾಮಗಾರಿ ನಡೆಯಲಿದೆ. ಜತೆಗೆ ಇದು ತಗ್ಗು ಪ್ರದೇಶವಾದ ಹಿನ್ನೆಲೆಯಲ್ಲಿ ಮಳೆನೀರು ನಿಂತು ರಸ್ತೆಯೂ ಪದೇ ಪದೇ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಈಗ ಹೆದ್ದಾರಿಯನ್ನು ಎತ್ತರಗೊಳಿಸುವ ಕಾಮಗಾರಿಯೂ ನಡೆಯಲಿದೆ. ಹಳೆಯ ಸೇತುವೆಯ ಕಾಮಗಾರಿ ಆರಂಭಗೊಂಡರೆ ವಾಹನ ಸಂಚಾರ ಮೊಟಕು ಸಾಧ್ಯತೆಯೂ ಇದೆ.