ಹೆಬ್ರಿ: ಗ್ರಾಮೀಣ ಭಾಗದ ಸುದ್ದಿಗಳನ್ನು ಬಿತ್ತರಿಸುವುದರ ಜತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ವರದಿ ನೀಡಿ ಜನರ ವಿಶ್ವಾಸಕ್ಕೆ ಉದಯವಾಣಿ ಪಾತ್ರವಾಗಿದೆ ಎಂದು ಹೆಬ್ರಿ ತಾಲೂಕು ತಹಸೀಲ್ದಾರ್ ಕೆ.ಮಹೇಶ್ಚಂದ್ರ ಹೇಳಿದರು.
ಅವರು ಜೂ.18ರಂದು ಕಳೆದ 5 ವರ್ಷಗಳಿಂದ ಹೆಬ್ರಿ ಮುಖ್ಯ ರಸ್ತೆ ಶ್ರೀರಾಮ್ ಟವರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉದಯವಾಣಿಯ ಸುದ್ದಿ ಹಾಗೂ ಅಧಿಕೃತ ಜಾಹೀರಾತು ಕಚೇರಿ ಇದೀಗ ಹೆಬ್ರಿ ಎಸ್.ಆರ್.ಸ್ಕೂಲ್ ಸಮೀಪದ ಗುರುಕೃಪಾ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹೆಬ್ರಿ ಗ್ರಾ.ಪಂ. ಅಧ್ಯಕ್ಷ ಎಚ್.ಕೆ.ಸುಧಾಕರ್ ಮಾತನಾಡಿ, ಪಂಚಾಯತ್‌ನ ಪ್ರತಿಯೊಂದು ಕಾರ್ಯಕ್ರಮವನ್ನು ವಿವರವಾಗಿ ಬಿತ್ತರಿ ಸುತ್ತಿರುವ ಉದಯವಾಣಿ ಜನರ ಜೀವನಾಡಿಯಾಗಿದೆ.ಪತ್ರಕರ್ತರ ನಿರಂತರ ಪರಿಶ್ರಮದಿಂದ ಇದೀಗ ವಿಸ್ತೃತ ಕಚೇರಿ ಲೋಕಾರ್ಪಣೆಗೊಂಡಿದ್ದು ಜನರ ಸಹಕಾರ ಅಗತ್ಯ ಎಂದರು.
ಹೆಬ್ರಿ ಪೊಲೀಸ್ ಠಾಣೆಯ ನಿವೃತ್ತ ಠಾಣಾಧಿಕಾರಿ ಮಹಾಬಲ ಶೆಟ್ಟಿ ಮಾತನಾಡಿ, ಸಂಸ್ಥೆಗೆ ಶುಭಕೋರಿದರು. ಈ ಸಂದರ್ಭದಲ್ಲಿ ಹೆಬ್ರಿ ಸರಕಾರಿ ಪ್ರ.ದರ್ಜೆ ಕಾಲೇಜಿನ ಪ್ರಾಂಶುಪಾಲ ಎಮ್.ಆರ್.ಮಂಜುನಾಥ್,ಸೀತಾನದಿ ಸೌಖ್ಯಯೋಗ ಟ್ರಸ್ಟ್‌ನ ಅಧ್ಯಕ್ಷ ಸೀತಾನದಿ ವಿಠಲ ಶೆಟ್ಟಿ, ಲಯನ್ಸ್‌ನ ಸ್ಥಾಪಕಾಧ್ಯಕ್ಷ ದಿನಕರ್ ಪ್ರಭು, ಸಂಜೀವ ತೀರ್ಥಹಳ್ಳಿ, ಕೃಷ್ಣ ಶೆಟ್ಟಿ ಕಿನ್ನಿಗುಡ್ಡೆ, ಪ್ರೇಮಾ ಕೆ. ಶೆಟ್ಟಿ ಮೊದಲಾದವರಿದ್ದರು.
ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು. ಶೆಟ್ಟಿ ಸ್ವಾಗತಿಸಿ, ಮಾನ್ಯ ಯು.ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಭಾಸ್ಕರ್ ಶೆಟ್ಟಿ ಮಲ್ಲಡ್ಕ ವಂದಿಸಿದರು.