Advertisement

ಅಕಾಡೆಮಿ ಅಧ್ಯಕ್ಷರ ಪದಗ್ರಹಣಕ್ಕೆ ಜೂ. 13ರ ಮುಹೂರ್ತ ನಿಗದಿ?

11:42 PM Jun 07, 2024 | Team Udayavani |

ಬೆಂಗಳೂರು: ಬರೋಬ್ಬರಿ ಒಂದೂವರೆ ವರ್ಷದ ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ 13 ಅಕಾಡೆಮಿ ಮತ್ತು 2 ಪ್ರಾಧಿಕಾರಗಳಲ್ಲಿ ಈಗ ಕಲರವ ಶುರುವಾಗಿದೆ. ಎರಡು ತಿಂಗಳ ಹಿಂದೆ ನೇಮಕಗೊಂಡಿದ್ದ ಹೊಸ ಅಧ್ಯಕ್ಷರ ಅಧಿಕಾರ ಸ್ವೀಕಾರಕ್ಕೆ ಸಿದ್ಧತೆ ನಡೆದಿದೆ.

Advertisement

ವಿಧಾನ ಪರಿಷತ್ತು ಚುನಾವಣೆ ನೀತಿ ಸಂಹಿತೆ ಪೂರ್ಣಗೊಂಡ ಬಳಿಕ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರ ಪದಗ್ರಹಣ ನಡೆಯಲಿದೆ. ಆ ನಿಟ್ಟಿನಲ್ಲಿ ಚಟುವಟಿಕೆಗಳು ಕನ್ನಡ ಭವನದಲ್ಲಿ ಸಾಗಿದ್ದು, ಜೂ. 13ರಂದು ಅಧಿಕಾರ ಸ್ವೀಕರಿಸುವ ನಿರೀಕ್ಷೆಯಿದೆ.

ಇದರೊಂದಿಗೆ ಅಧ್ಯಕ್ಷರಿಲ್ಲದೆ ಒಂದೂವರೆ ವರ್ಷದ ವನವಾಸ ಅಂತ್ಯವಾಗಲಿದೆ. ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಅಧಿಕಾರ ಪೂರ್ಣಗೊಳಿಸಿದ ಅಧ್ಯಕ್ಷರು ಮತ್ತು ಸದಸ್ಯರು ರಾಜೀನಾಮೆ ನೀಡಿದ್ದರು. ಆದರೆ ಆ ಬಳಿಕ ಹೊಸ ಅಧ್ಯಕ್ಷರ ನೇಮಕ ಮಾಡುವ ಗೋಜಿಗೆ ಸರಕಾರ ಹೋಗಿರಲಿಲ್ಲ. ಆ ಹಿನ್ನೆಲೆಯಲ್ಲಿ ಸಾಧಕರಿಗೆ ಪ್ರಶಸ್ತಿ ಘೋಷಣೆ ಆಗದೆ ಕಾರ್ಯ ಚಟುವಟಿಕೆಗಳು ಸ್ಥಗಿತವಾಗಿತ್ತು. ಘೋಷಣೆ ಆಗಿದ್ದ ಪ್ರಶಸ್ತಿಯನ್ನು ಸಾಧಕರಿಗೆ ಪ್ರದಾನಿಸದೆ ಇರುವ ಸರಕಾರದ ಕ್ರಮ ಸಾಹಿತ್ಯ ವಲಯದಲ್ಲಿ ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಕೆಲವು ತಿಂಗಳ ಬಳಿಕ ವಿವಿಧ ಪ್ರಾಧಿಕಾರ ಮತ್ತು ಅಕಾಡೆಮಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು.

ಈಗ ಲೋಕಸಭಾ ಚುನಾವಣೆಯ ನೀತಿ ಸಂಹಿತೆಯನ್ನು ಹಿಂಪಡೆಯಲಾಗಿದೆ. ಆದರೆ ಪದವೀಧರ/ಶಿಕ್ಷಕ ಕ್ಷೇತ್ರಗಳ ಚುನಾವಣ ನೀತಿ ಸಂಹಿತೆ ಇರುವ ಹಿನ್ನೆಲೆಯಲ್ಲಿ ಜೂನ್‌ 12ರ ವರೆಗೂ ಅಧಿಕಾರ ಸ್ವೀಕಾರಕ್ಕೆ ಕಾಯಬೇಕಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಚಿವರ ಆಗಮನದ ನಿರೀಕ್ಷೆ
ಜೂ.13ರಂದು ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರದ ಅಧ್ಯಕ್ಷರ ಮತ್ತು ಸದಸ್ಯರು ಅಧಿಕಾರ ಸ್ವೀಕರಿಸಲಿದ್ದಾರೆ. ಆ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಆಹ್ವಾನ ನೀಡಿ ಅವರ ಸಮ್ಮುಖದಲ್ಲಿ ವಿಶೇಷ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳುವ ಇರಾದೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊಂದಿದೆ ಎಂದು ಕನ್ನಡ ಭವನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್‌ ತಂಗಡಗಿ ಅವರನ್ನು ಸಂಪರ್ಕಿಸುವ ಕೆಲಸ ನಡೆದಿದೆ. ಆದರೆ ಸಚಿವರು ಕಾರ್ಯಕ್ರಮಕ್ಕೆ ಬರುವ ಬಗ್ಗೆ ಇನ್ನೂ ಅಂತಿಮವಾಗಿಲ್ಲ. ಸಚಿವರನ್ನು ಆಹ್ವಾನಿಸುವ ನಿಟ್ಟಿನಲ್ಲೆ ಕನ್ನಡ ಭವನದ ಕಾರ್ಯ ಚಟುವಟಿಕೆಗಳು ನಡೆದಿವೆ ಎಂದು ತಿಳಿಸಿದ್ದಾರೆ.

Advertisement

ಜೂ. 13ರಂದು ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರು ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ. ಅಂದು ನಾನು ಕೂಡ ಅಧಿಕಾರ ಸ್ವೀಕರಿಸುತ್ತೇನೆ. ಲೋಕಸಭೆ ಮತ್ತು ಪರಿಷತ್‌ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಧಿಕಾರ ಸ್ವೀಕಾರಕ್ಕೆ ಅಡ್ಡಿಉಂಟಾಗಿತ್ತು.
-ಡಾ| ಎಲ್‌.ಎನ್‌.ಮುಕುಂದರಾಜ್‌, ಸಾಹಿತ್ಯ ಅಕಾಡೆಮಿ ನಿಯೋಜಿತ ಅಧ್ಯಕ್ಷ

– ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next