Advertisement

ರಾಜ್ಯದಲ್ಲಿ ಜೀವವೈವಿಧ್ಯಗಳ ಉತ್ಸವ: ಸಂಜಯ್‌ ಮೋಹನ್‌

12:28 AM Nov 18, 2021 | Team Udayavani |

ಉಡುಪಿ: ಅರಣ್ಯ ಮತ್ತು ವನ್ಯಜೀವಿಗಳು ಮನುಷ್ಯನ ಉಳಿವಿಗಾಗಿ ಪರಿಸರದ ಪ್ರಮುಖ ಭಾಗವಾಗಿವೆ. ಈ ನಿಟ್ಟಿನಲ್ಲಿ ರಾಜ್ಯದ ಸೂಕ್ಷ್ಮಜೀವವೈವಿಧ್ಯತೆಯನ್ನು ಉಳಿಸುವ ಆಶಯದೊಂದಿಗೆ ರಾಜ್ಯದಲ್ಲಿ ಇಲಾಖೆ ಮತ್ತು ಜನರ ಸಹಭಾಗಿತ್ವದಲ್ಲಿ ಜೀವ ವೈವಿಧ್ಯಗಳ ಉತ್ಸವ ಹಮ್ಮಿಕೊಳ್ಳಲಾಗುವುದು ಎಂದು ಅರಣ್ಯ ಇಲಾಖೆ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥ ಸಂಜಯ್‌ ಮೋಹನ್‌ ಹೇಳಿದರು. ಅವರು ಬುಧವಾರ ಕುದುರೆ ಮುಖದಲ್ಲಿ ಕಾರ್ಕಳ ವನ್ಯಜೀವಿ ವಿಭಾಗದ ವತಿಯಿಂದ ನಡೆದ ಶೋಲಾ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಕರ್ನಾಟಕ ರಾಜ್ಯ ಅತ್ಯಮೂಲ್ಯ ಅರಣ್ಯ ಸಂಪತ್ತು ಹೊಂದಿದ್ದು, ಕೆಲವೆ ರಾಜ್ಯಗಳಲ್ಲಿ ಶೋಲಾ ಅರಣ್ಯ ವ್ಯಾಪ್ತಿ ಇದೆ. ಸಾಕಷ್ಟು ಪ್ರಮಾಣದ ಜೀವ ಸಂಕುಲಗಳು ಶೋಲಾ ಅರಣ್ಯದಲ್ಲಿದ್ದು, ಪಶ್ಚಿಮ ಘಟ್ಟದ ಶೋಲಾ ಕಾಡುಗಳಲ್ಲಿ ರಾಜ್ಯದಲ್ಲಿ ಬೇರೆಲ್ಲಿಯೂ ಇಲ್ಲದ 1,500ಕ್ಕೂ ಹೆಚ್ಚು ಪ್ರಬೇಧದ ಮರ, ನೂರಾರು ಬಗೆಯ ಚಿಟ್ಟೆ, ಹಕ್ಕಿ, ಪ್ರಾಣಿಗಳಿವೆ. ಮುಂದಿನ ದಿನಗಳಲ್ಲಿ ಶೋಲಾ ಅರಣ್ಯವನ್ನು ಕಾಡ್ಗಿಚ್ಚಿನಿಂದ ಸಂರಕ್ಷಿಸಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಈ ನಿಟ್ಟಿನಲ್ಲಿ ಜರಗುತ್ತಿರುವ ಶೋಲಾ ಉತ್ಸವ ಜನಜಾಗೃತಿ ಮೂಡಿಸುವ ಅತ್ಯುತ್ತಮ ಕಾರ್ಯಕ್ರಮ ಎಂದು ಬಣ್ಣಿಸಿದರು.
ಮಂಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್‌ ಎಸ್‌. ನೆಟಾಲ್ಕರ್‌ ಮಾತನಾಡಿ, ಕುದುರೆಮುಖ ಶೋಲಾ ಕಾಡು ಎಲ್ಲಿಯೂ ಇಲ್ಲದ ಮಾದರಿ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಈ ಅಮೂಲ್ಯ ಪರಿಸರಕ್ಕೆ ಹಾನಿಯಾಗದಂತೆ ಕಾಪಾಡಿಕೊಳ್ಳುವ ಹೊಣೆಗಾರಿಕೆ ನಮ್ಮದು ಎಂದರು.

ಎನ್‌ಐಟಿಕೆ ಸೆಂಟರ್‌ ಫಾರ್‌ ಸಿಸ್ಟಮ್‌ ಡಿಸೈನ್‌ ಮುಖ್ಯಸ್ಥ ಪ್ರೊ|ಗಂಗಾಧರ್‌ ಮಾತನಾಡಿ, ವನ್ಯಜೀವಿಗಳ ಸಂರಕ್ಷಣೆಗೆ ಇಲಾಖೆ ಸ್ಥಳೀಯ ಎಂಜಿನಿಯರಿಂಗ್‌ ಕಾಲೇಜುಗಳ ತಾಂತ್ರಿಕ ಸಹಕಾರವನ್ನು ಬಳಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಶೋಲಾ ಅರಣ್ಯಕ್ಕೆ 5 ಕೋ.ರೂ. ಅನುದಾನ
ಕಾರ್ಕಳ ವನ್ಯಜೀವಿ ವೀಭಾಗದ ಉಪ ಸಂರಕ್ಷಣಾಧಿಕಾರಿ ಪಿ.ರುತ್ರನ್ ಮಾತನಾಡಿ, ಸರಕಾರ ಅರಣ್ಯ, ವನ್ಯಜೀವಿ ಸಂಪತ್ತು ಸಂರಕ್ಷಣೆಗೆ ಕಾಳಜಿ ವಹಿಸುತ್ತಿದೆ. ಮುಖ್ಯಮಂತ್ರಿಗಳು ಈ ಸಾಲಿನ ಬಜೆಟ್‌ನಲ್ಲಿ ಶೋಲಾ ಅರಣ್ಯ ಸಮೀಕ್ಷೆ ಮತ್ತು ಸಂರಕ್ಷಣೆಗೆ 5 ಕೋಟಿ ರೂ. ಮೀಸಲಿಟ್ಟಿದ್ದಾರೆ ಎಂದು ತಿಳಿಸಿದರು.

ಕಪ್ಪೆ , ತೋಳಗಳ ಉತ್ಸವ
ಇಲಾಖೆಗೆ ಶೋಲಾ ಉತ್ಸವ ಪ್ರೇರಣೆಯಾಗಿದ್ದು ರಾಜ್ಯದಲ್ಲಿ ಜೀವವೈವಿಧ್ಯ ಸಂರಕ್ಷಣೆಗೆ ಕಪ್ಪೆ, ತೋಳ, ಕಡಲಾಮೆ, ಮಹಾಶಿರ್‌ ಮೀನು ಸೇರಿದಂತೆ ಇತರೆ ಅಮೂಲ್ಯ ಜೀವ ಸಂಪತ್ತಿನ ಉತ್ಸವಗಳನ್ನು ಪ್ರತೀ ವರ್ಷ ಆಯೋಜಿಸಲಾಗುವುದು. ಈ ಜೀವಿಗಳು ವಿಶೇಷವಾಗಿ ಕಂಡುಬರುವ ಜಿಲ್ಲೆಗಳಲ್ಲಿ ಈ ಉತ್ಸವಗಳನ್ನು ಅಯೋಜಿಸುವ ಹೊಸ ಪರಿಕಲ್ಪನೆಯನ್ನು ಅರಣ್ಯ ಇಲಾಖೆ ಹೊಂದಿದೆ ಎಂದು ಸಂಜಯ್‌ ಮೋಹನ್‌ ಅವರು ತಿಳಿಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next