ಆಳಂದ: ತಾಲೂಕಿನ ಯಳಸಂಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಜ್ಞಾನ ಹಾಗೂ ಭಾಷಾ ಪ್ರಯೋಗಾಲಯಗಳ ಕೇಂದ್ರ, ಕೊಠಡಿಗಳ ಹೊಸ ಬಾಗಿಲುಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬಸಂತಬಾಯಿ ಅಕ್ಕಿ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿದ್ದ ಇಸಿಒ ಪ್ರಕಾಶ ಕೊಟ್ರೆ, ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಪ್ರಯೋಗಾಲಯಗಳು ಬೆರಳಣಿಕೆಯಷ್ಟಿವೆ. ಗ್ರಾಮೀಣ ಮಟ್ಟದಲ್ಲೂ ವಿದ್ಯಾರ್ಥಿಗಳ ಕೌಶಲ್ಯತೆ ಹೆಚ್ಚಳಕ್ಕೆ ಪ್ರಯೋಗಾಲಯ ಅಗತ್ಯತೆ ಹೆಚ್ಚಾಗಬೇಕಿದೆ. ಈ ಕಾರ್ಯ ಯಳಸಂಗಿ ಶಾಲೆಯಲ್ಲಿ ಆಗಿರುವುದು ಮಾದರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾ ಪಾಟೀಲ ಮಾತನಾಡಿ, ಹೊಸದಾಗಿ ನಿರ್ಮಿಸಿರುವ ವಿಜ್ಞಾನ, ಭಾಷಾ ಪ್ರಯೋಗಾಲಯ ಸೇರಿದಂತೆ ಶಾಲೆಗೆ ಹೊಸ ಬಾಗಿಲುಗಳ ಅಳವಡಿಕೆಯು ಹಳೆ ವಿದ್ಯಾರ್ಥಿಗಳ ಸಂಘದ ವಿದ್ಯಾರ್ಥಿಗಳ ಕಾಣಿಕೆಯಿಂದ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಸ್ ಡಿಎಂಸಿ ಅಧ್ಯಕ್ಷ ಮೋತಿರಾಮ ಚವ್ಹಾಣ, ಹಳೆ ವಿದ್ಯಾರ್ಥಿ ಆಗಿರುವ ಪಿಎಸ್‌ಐ ಬಸವರಾಜ ಜಂದೆ ಮತ್ತಿತರರು ಮಾತನಾಡಿದರು. ಕಾರ್ಯಕ್ರಮದ ನಂತರ ಒಂಭತ್ತನೇ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ವಿಜ್ಞಾನದ ಕುರಿತಾದ ರಾಸಾಯನಿಕ ಕ್ರಿಯೆ, ಆಮ್ಲ, ಪ್ರತ್ಯಾಮ್ಲಿಯ ಕ್ರಿಯೆಗಳ ಪ್ರಾತ್ಯಕ್ಷಿಕೆ ನೀಡಿದರು.
ವಿಜ್ಞಾನಕ್ಕೆ ಹಾಗೂ ಮತ್ತಿತರರ ಯೋಜನೆಗಳ ಪ್ರದರ್ಶನವನ್ನು ಬಿಇಒ ಬಸಂತಬಾಯಿ ಅಕ್ಕಿ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು. ದೈಹಿಕ ಶಿಕ್ಷಕ ಸಿದ್ಧರಾಮ ಪಾಳೆದ್, ಸಿದ್ಧಾರೂಢ ಐರೋಡಗಿ, ಜಗನ್ನಾಥ್ ಬಿರಾದಾರ, ಸಿದ್ಧಲಿಂಗ ಅತನೂರೆ, ಅಶೋಕ ಚವ್ಹಾಣ, ಶೈಲಜಾ, ಶ್ವೇತಾ ಹಾಗೂ ವಿದ್ಯಾರ್ಥಿಗಳು ಇದ್ದರು. ಶಿಕ್ಷಕಿ ಭಾರತಿ ಧೋತ್ರೆ ನಿರೂಪಿಸಿದರು, ಸಾಗರ ಸ್ವಾಗತಿಸಿದರು, ಶಿಕ್ಷಕ ದಾಮೋದರ ವಂದಿಸಿದರು.