ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ರೋಟಾ ವೈರಸ್ ಲಸಿಕಾ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು. ಮಗುವೊಂದಕ್ಕೆ ರೋಟಾ ವೈರಸ್ ಲಸಿಕೆ ನೀಡುವ ಮೂಲಕ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಭೇದಿ ಮತ್ತು ಅತಿಸಾರ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿದೆ. ಸ್ವತ್ಛತೆಯ ಬಗ್ಗೆ ಹೆಚ್ಚು ಆಸ್ಥೆ ವಹಿಸಿದಲ್ಲಿ ಈ ಸಮಸ್ಯೆಯನ್ನು ತಡೆಗಟ್ಟಬಹುದಾಗಿದೆ. ಆದ್ದರಿಂದ ತಾಯಂದಿರು ತಮ್ಮ ಮತ್ತು ಮಗುವಿನ ಸ್ವತ್ಛತೆಯ ಬಗೆಗೆ ಹೆಚ್ಚು ಗಮನಕೊಡಬೇಕು. ಮಗು ಇರುವ ಪರಿಸರ ನೈರ್ಮಲ್ಯದಿಂದ ಇರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾಧಿಕಾರಿ ಬಿ. ಬಿ. ಕಾವೇರಿ ಮಾತನಾಡಿ, ಭೇದಿ ಅತಿಸಾರ ಬೇರೆ ಬೇರೆ ಕಾರಣಗಳಿಗೆ ಉಂಟಾಗುತ್ತದೆ. ರೋಟಾ ವೈರಸ್ ಕೂಡ ಅವುಗಳಲ್ಲಿ ಒಂದಾಗಿದೆ. ಹಾಗಾಗಿ ಭೇದಿಯಾದಾಗ ಮಕ್ಕಳಲ್ಲಿ ನಿರ್ಜಲೀಕರಣ ಉಂಟಾಗಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಂಭವವಿದೆ. ಆದ್ದರಿಂದ ರೋಟಾ ವೈರಸ್ ಲಸಿಕೆಯನ್ನು ಪರಿಚಯಿಸಲಾಗಿದೆ. ತಾಯಂದಿರು ತಪ್ಪದೇ ಮಗುವಿಗೆ ನಿಗದಿತ ಸಮಯದಲ್ಲಿ ರೋಟಾ ವೈರಸ್ ಲಸಿಕೆ ಕೊಡಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್.ಲತಾಕುಮಾರಿ ಮಾತನಾಡಿ, ರೋಟಾ ವೈರಸ್ ಲಸಿಕೆ ಕಾರ್ಯಕ್ರಮವನ್ನು ಮಕ್ಕಳ ಆರೋಗ್ಯ ಕಾಳಜಿಗಾಗಿ ಜಾರಿಗೆ ತರಲಾಗಿದೆ. ಆರೋಗ್ಯ ದೃಷ್ಟಿಯಿಂದ ನೈರ್ಮಲ್ಯಕ್ಕೆ ಒತ್ತು ನೀಡಬೇಕು ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ. ಸಿ. ರವಿ ಮಾತನಾಡಿ, ರೋಟಾ ವೈರಸ್ ಲಸಿಕೆಯನ್ನು ಮಗು ಹುಟ್ಟಿದ 6ನೇ ವಾರ, 10 ಮತ್ತು 14ನೇ ವಾರಗಳಲ್ಲಿ ಕೊಡಿಸಬೇಕು. ಇದರಿಂದ ರೋಟಾ ವೈರಸ್‌ನಿಂದಾಗುವ ಸಮಸ್ಯೆಗಳನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ಎಂದು ಹೇಳಿದರು.
ಸರ್ಕಾರಿ ವೈದ್ಯಕೀಯ ಕಾಲೇಜಿನ ಡೀನ್ ಡಾ. ರಾಜೇಂದ್ರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ರಘುರಾಮ್, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಕೆ. ಎಂ. ವಿಶ್ವೇಶ್ವರಯ್ಯ, ಜಿಲ್ಲಾಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ. ಕೃಷ್ಣಪ್ರಸಾದ್, ಶಿಶುತಜ್ಞ ಡಾ. ವಿದ್ಯಾಸಾಗರ್, ಜಿಲ್ಲಾ ನರ್ಸ್ ಸೂಪರ್‌ವೈಸರ್ ಶಾಂತಮ್ಮ, ಎಚ್‌ಎಸ್ ಸುರೇಶಾಚಾರ್, ಜಿಲ್ಲಾ ಆರೋಗ್ಯ ಶಿಕ್ಷಣ ಸಂಯೋಜಕ ನಾರಾಯಣಸ್ವಾಮಿ ಇದ್ದರು.