ಹೆಬ್ರಿ:ಪೆರ್ಡೂರಿನಲ್ಲಿ ಅತ್ಯಾಕರ್ಷಕ ವಿನ್ಯಾಸದ ಅತ್ಯಾಧುನಿಕ ಸೌಲಭ್ಯದ ಶ್ರೀಮತಿ ಸರ್ವಾಣಿ ಪಳ್ಳಿ ಶ್ರೀನಿವಾಸ ಹೆಗ್ಡೆ ಸಮುದಾಯ ಭವನ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಲೋಕಾರ್ಪಣೆಗೊಂಡಿತು.
ಬೆಳಗ್ಗೆ ಗಣಹೋಮ, ಸರ್ಪತ್ರಯ ಮಂತ್ರ, ಹೋಮ, ಆಶ್ಲೇಷಾ ಬಲಿ, ವಟು ಆರಾಧನೆ, ದ್ವಾರ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಪೆರ್ಡೂರು ಬಂಟರ ಸಂಘದ ಅಧ್ಯಕ್ಷ ಶಾಂತಾರಾಮ ಸೂಡ ಕೆ. ಮಾತನಾಡಿ ಪೆರ್ಡೂರು ಸಮಾಜ ಬಾಂಧವರ, ಪಳ್ಳಿ ಶ್ರೀನಿವಾಸ ಹೆಗ್ಡೆ ಅವರ ಕುಟುಂಬದ ಹಾಗೂ ದಾನಿಗಳ ನೆರವಿನಿಂದ ಇಂದು ಇಲ್ಲಿ ಸುಸಜ್ಜಿತ ಸಮುದಾಯ ಭವನ ತಲೆ ಎತ್ತಿ ನಿಂತಿದೆ. ಕೇವಲ ಧಾರ್ಮಿಕ ಕಾರ್ಯಕ್ರಮಗಳನ್ನು ಮಾತ್ರ ಮಾಡಲಾಗಿದ್ದು ಫೆ.11 ರಂದು ಎಲ್ಲರನ್ನು ಕೂಡಿಕೊಂಡು ಉದ್ಘಾಟನ ಸಮಾರಂಭದ ಮೂಲಕ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದರು.
ಪ್ರಚಾರದ ಪೋಸ್ಟರ್, ವೀಡಿಯೋ ಬಿಡುಗಡೆ
ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉತ್ತಮ ಪ್ರಾಕೃತಿಕ ಪರಿಸರದೊಂದಿಗೆ ನಗರ ಪ್ರದೇಶದ ಸೌಲಭ್ಯ ಹೊಂದಿದ ಸಮುದಾಯ ಭವನವನ್ನು ನಿರ್ಮಾಣ ಮಾಡಲಾಗಿದ್ದು ಈ ವಿಚಾರ ಜನಮಾನಸಕ್ಕೆ ತಲುಪುವ ಉದ್ದೇಶದಿಂದ ವಾಹನಗಳಿಗೆ ಅಳವಡಿಸುವ ಪ್ರಚಾರ ಭಿತ್ತಿಪತ್ರ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರ ಪಡಿಸುವ ಸಭಾಂಗಣದ ಸಂಪೂರ್ಣ ಮಾಹಿತಿ ಹೊತ್ತ ವೀಡಿಯೋವನ್ನು ಬಿಡುಗಡೆ ಗೊಳಿಸಲಾಯಿತು.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್‌ಸೊರಕೆ, ಮಾಹೆ ಸಹಕುಲಾಧಿಪತಿ ಎಚ್. ಎಸ್. ಬಲ್ಲಾಳ್, ಡಾ| ಭಾಸ್ಕರ್ ಶೆಟ್ಟಿ ಕಲ್ಕೆರೆ, ಅದಾನಿ ಗ್ರೂಪ್ ಅಧ್ಯಕ್ಷ ಕಿಶೋರ್ ಆಳ್ವ, ಡಾ| ರಮಾನಂದ ಸೂಡ, ಉದ್ಯಮಿಗಳಾದ ದಿನೇಶ್ ಹೆಗ್ಡೆ ಬೆಂಗಳೂರು, ನಟರಾಜ್ ಹೆಗ್ಡೆ, ರಾಜರಾಮ್ ಹೆಗ್ಡೆ, ಪ್ರವೀಣ್ ಬಲ್ಲಾಳ್, ಕೋಶಾಧಿಕಾರಿ ಪ್ರಮೋದ್ ರೈ ಪಳಜೆ ಮೊದಲಾದವರು ಉಪಸ್ಥಿತರಿದ್ದರು.ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಶೆಟ್ಟಿ ಕುತ್ಯಾರು ಬೀಡು ಕಾರ್ಯಕ್ರಮ ನಿರೂಪಿಸಿದರು.