ಬೆಂಗಳೂರು: ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನೈಜ ಕಾಳಜಿ ಹೊಂದಿದ್ದಾರೆ ಎಂದು ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ಅಧ್ಯಕ್ಷ ಶಿವಕುಮಾರ ಮೇಟಿ ಹೇಳಿದ್ದಾರೆ.
ನಗರದ ಹುಣಸಮಾರನಹಳ್ಳಿಯಲ್ಲಿ ಉತ್ತರ ಕರ್ನಾಟಕ ಯುವ ಬ್ರಿಗೇಡ್ ಉದ್ಘಾಟನೆ ಹಾಗೂ ಲೊಗೊ ಬಿಡುಗಡೆ ಮಾಡಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಜನರ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತಂದಾಗ ತಾವೇ ಸ್ವತ ಮುತುವರ್ಜಿ ವಹಿಸಿ ಸಮಸ್ಯೆ ಪರಿಸುವ ಕೆಲಸ ಮಾಡುತ್ತಾರೆ. ಉತ್ತರ ಕರ್ನಾಟಕದ ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ಬಜೆಟ್ ನಲ್ಲಿ ಮನವಿ ಮಾಡಿದಾಗ ಹುಬ್ಬಳ್ಳಿ ಮತ್ತು ಬೆಳಗಾವಿಗೆ ಜಯದೇವ ಹೃದ್ರೋಗ ಸಂಸ್ಥೆ ಮತ್ತು ಕಿದ್ವಾಯಿ ಆಸ್ಪತ್ರೆಯನ್ನು ಮಂಜೂರು ಮಾಡಿ ಸಾಮಾನ್ಯ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಈ ಮೂಲಕ ಅವರು ಕಾಮನ್ ಮ್ಯಾನ್ ಸಿಎಂ ಅನ್ನುವುದನ್ನು ಸಾಬೀತು ಪಡಿಸಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಭಾಗದ ಜನರಿಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆ ಭಾಗದ ಜನರು ಬೆಂಗಳೂರಿಗೆ ಬಂದಾಗ ಉಳಿದುಕೊಳ್ಳಲು ವಸತಿ ಗೃಹ ನಿರ್ಮಿಸಲು 3.24 ಗುಂಟೆ ಜಮೀನು ಮಂಜೂರು ಮಾಡಿದ್ದಾರೆ. ಶೀಘ್ರವೇ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡುವ ಭರವಸೆ ಇದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕ ಭಾಗದ ಸುಮಾರು 25. ಕ್ಕೂ ಹೆಚ್ಚು ಸಂಘಟನೆಗಳಿವೆ. ನಾವು ನಮ್ಮ ಸ್ವಾರ್ಥಕ್ಕಾಗಿ ಸಂಘಟನೆ ಮಾಡಿಕೊಳ್ಳದೇ ನಮ್ಮ ಭಾಗದ ಜನರು ಮತ್ತು ಅಲ್ಲಿನ ಸಮಸ್ಯೆಗಳ ಕುರಿತು ಸರ್ಕಾರದ ಗಮನಕ್ಕೆ ತಂದು ಆ ಭಾಗದ ಅಭೃವೃದ್ದಿಗೆ ಎಲ್ಲರೂ ಸೇರಿ ಶ್ರಮಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ಮಹಾಂತೇಶ ಪಾಟೀಲ್, ಉತ್ತರ ಕರ್ನಾಟಕ ಯುವ ಬ್ರಿಗೇಡ್ ಅಧ್ಯಕ್ಷ ತಾನಾಜಿ ಮಾನೆ, ಮೋದಿ ಬ್ರಿಗೇಡ್ ಅಧ್ಯಕ್ಷ ಸಂತೋಷ್ ಬಸೆಟ್ಟಿ, ನ್ಯಾಯವಾದಿ ವಸಂತಕುಮಾರ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಅಶೋಕ, ಉತ್ತರ ಕರ್ನಾಟಕ ನಾಗರಿಕ ಅಭಿವೃದ್ಧಿ ಸಂಘದ ಖಜಾಂಚಿ ಶಿವಕುಮಾರ್ ಸರಶೆಟ್ಟಿ, ಯುವ ಮುಖಂಡ ದೀಕ್ಷಿತ್ ಗೌಡ, ಬಿ.ಆರ್. ಪಾಟೀಲ್ ಹಾಜರಿದ್ದರು.