ಧಾರವಾಡ: ಕಳೆದ 35 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಪ್ರಶಾಂತ ಆಸ್ಪತ್ರೆಯು ಇದೀಗ ನವೀಕರಣದೊಂದಿಗೆ ಉತ್ತಮ ಸೇವೆ ನೀಡಲು ಸಜ್ಜಾಗಿದ್ದು, ಸುಸಜ್ಜಿತ ಸಂತಾನೋತ್ಪತ್ತಿ ಕೇಂದ್ರದೊಂದಿಗೆ (ಐವಿಎಫ್) ಮೇ 8 ರಂದು ಉದ್ಘಾಟನೆಗೊಳ್ಳಲಿದೆ ಎಂದು ಡಾ| ಸೌಭಾಗ್ಯ ಕುಲಕರ್ಣಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9 ಗಂಟೆಗೆ ಬೆಳಗಾವಿಯ ಅಶೋಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಎಂ.ಜಿ. ದೇಸಾಯಿ ಉದ್ಘಾಟಿಸುವರು. ಕೆಎಲ್‌ಇ ಜೆಜಿಎಂಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ| ಎಂ.ಜಿ. ಹಿರೇಮಠ, ಜಿಲ್ಲಾಸ್ಪತ್ರೆಯ ಒಬಿಜಿ ವಿಭಾಗದ ಮುಖ್ಯಸ್ಥ ಡಾ| ಯು.ಎಸ್. ಹಂಗರಗಾ, ಹುಬ್ಬಳ್ಳಿಯ ಕಿಮ್ಸ್‌ನ ವೈದ್ಯಕೀಯ ನಿರ್ದೇಶಕ ಡಾ| ರಾಮಲಿಂಗಪ್ಪ ಸಿ. ಅಂಟರಟಾನಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಬಸವನಗೌಡ ಕರಿಗೌಡರ ಪಾಲ್ಗೊಳ್ಳಲಿದ್ದಾರೆ ಎಂದರು. ಮಾಳಮಡ್ಡಿಯ ಸ್ಟೇಷನ್ ರಸ್ತೆಯ ಪ್ರಶಾಂತ ಆಸ್ಪತ್ರೆಯ ನವೀಕರಣ ಸಂಪೂರ್ಣಗೊಂಡಿದ್ದು, ಇದರ ಜತೆಗೆ ಹೊಸ ಐವಿಎಫ್ ಕೇಂದ್ರವೂ ಕಾರ್ಯಾರಂಭ ಮಾಡಲಿದೆ. ಈ ಕೇಂದ್ರವು ಆಧುನಿಕ ಉಪಕರಣ ಹೊಂದಿದ್ದು, ಬಂಜೆತನಕ್ಕೆ ಹೊಸ ಆಶಾಕಿರಣವಾಗಿದೆ. ಇದಲ್ಲದೇ 35 ಹಾಸಿಗೆಯುಳ್ಳ ಈ ಆಸ್ಫತ್ರೆಯಲ್ಲಿ ಜನರಲ್ ವಾರ್ಡ್, ಸ್ಪೇಶಲ್ ವಾರ್ಡ್, ಡಿಲೆಲ್ಸ್ ವಾರ್ಡ್‌ಗಳು ಲಭ್ಯವಿದೆ ಎಂದು ಹೇಳಿದರು.
ನೌಕರಸ್ಥರು, ರೈತರು ಹಾಗೂ ಬಡ ರೋಗಿಗಳಿಗೆ ಚಿಕಿತ್ಸಾ ಸೌಲಭ್ಯಗಳ ಅನುಕೂಲ ಕಲ್ಪಿಸಲು ವಿವಿಧ ಆರೋಗ್ಯ ವಿಮಾ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಬಂಜೆತನ ನಿವಾರಣೆ, ಲ್ಯಾಪ್ರೋಸ್ಕೋಪಿ, ತಾಯಿ ಹಾಗೂ ಮಗುವಿಗೆ ಸಂಬಂಧಿಸಿದ ಔಷಧಗಳು ಒಂದೇ ಸೂರಿನಡಿ ಲಭ್ಯವಾಗಲಿದೆ. ಹೆರಿಗೆ ಹಾಗೂ ಗರ್ಭಕೋಶದ ಶಸ್ತ್ರಚಿಕಿತ್ಸೆ ಸೌಲಭ್ಯವೂ ಇದ್ದು, ಅಂತರದರ್ಶಕ ಶಸ್ತ್ರಚಿಕಿತ್ಸೆಗಳ ಅನುಕೂಲವಿದೆ. ಭ್ರೂಣದ ಆರೋಗ್ಯ ತಪಾಸಣೆ, ಐವಿಎಫ್ ಹೆರಿಗೆಗೆ ಸಂಬಂಧಪಟ್ಟ ರೋಗಗಳು, ಗರ್ಭಕೋಶಕ್ಕೆ ಸಂಬಂಧಪಟ್ಟ ರೋಗಿಗಳಿಗೆ ಒಂದೇ ಸ್ಥಳದಲ್ಲಿ ಚಿಕಿತ್ಸೆ ದೊರೆಯಲಿದೆ ಎಂದರು.
ಐವಿಎಫ್ ತಜ್ಞರಾದ ಡಾ| ಕೋಮಲ ಕುಲಕರ್ಣಿ ಮಾತನಾಡಿ, ಆಧುನಿಕ ಶಸ್ತ್ರಚಿಕಿತ್ಸಾ ಕೊಠಡಿ, ಐವಿಎಫ್ ಲ್ಯಾಬ್, ಇಂಟ್ರಾ ಸೈಟೋಪ್ಲಾಸ್ಮ ಸ್ಪರ್ಮ ಇಂಜೆಕ್ಷನ್ (ಐಸಿಎಸ್‌ಐ), ಇನ್‌ಕ್ಯುಬೇಟರ್‌ಗಳು, ಫ್ರೀಜಿಂಗ್, ಅಂಡಾಣು, ವೀರ್ಯಾಣು, ಭ್ರೂಣ ಮತ್ತು ಗರ್ಭಕೋಶಗಳಿಗೆ ಗರ್ಭಧಾರಣೆ ಸೇರಿದಂತೆ ಸಂಸ್ಕರಣ ವಿಧಾನವನ್ನು ಒಳಗೊಂಡಿದೆ. ಕೈಗೆಟಕುವ ದರದಲ್ಲಿ ಗರಿಷ್ಠ ಫಲೀಕರಣ ಪ್ರಮಾಣ ಒದಗಿಸಲು ಉದ್ದೇಶಿಸಲಾಗಿದ್ದು, ದಾನಿಗಳ ಅಂಡಾಣು ಮತ್ತು ವೀರ್ಯಾಣುಗಳ ಸೌಲಭ್ಯವೂ ಇದೆ ಎಂದು ತಿಳಿಸಿದರು.
ಭ್ರೂಣ ತಜ್ಞರಾದ ಡಾ| ಸಮೀರ್ ಕುಲಕರ್ಣಿ ಮಾತನಾಡಿ, ಹಿಸ್ಟರೆಕ್ಟಮಿ, ವಯೋಮೆಕ್ಟಮಿ ಮತ್ತು ಹಿಸ್ಟರಿಸ್ಕೋಪಿಗಳನ್ನು ಕೈಗೊಳ್ಳಲು ಸುಧಾರಿತ ಲ್ಯಾಪ್ರೋಸ್ಕೋಪಿ ಘಟಕವಿದೆ. ಹೆರಿಗೆ ಕೋಣೆ, ಪ್ರಸೂತಿ ವಿಭಾಗ, ನವಜಾತ ಶಿಶುಗಳ ಆರೈಕೆ ಸೌಲಭ್ಯಗಳಿವೆ. ನೋವು ರಹಿತ ಹೆರಿಗೆಯ ಜತೆಗೆ ತಾಯಿ ಮತ್ತು ಮಗುವಿಗೆ ದಿನದ 24 ಗಂಟೆಯೂ ಉನ್ನತ ಗುಣಮಟ್ಟದ ಆರೈಕೆ ಲಭ್ಯವಿದೆ ಎಂದರು.