ಕೊಪ್ಪಳ: ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಪಾಲಿ ಕ್ಲಿನಿಕ್ ಕಟ್ಟಡಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರು ಚಾಲನೆ ನೀಡಿದರು.
ಕಟ್ಟಡ ಉದ್ಘಾಟನೆ ಪೂರ್ವದಲ್ಲಿ ಸಂಸದರು ಹಾಗೂ ಶಾಸಕರೊಂದಿಗೆ ಸೇರಿ ಸಚಿವರು, ಗೋವುಗಳಿಗೆ ಪೂಜೆ ಸಲ್ಲಿಸಿ, ಅವುಗಳಿಗೆ ತಮ್ಮ ಕೈಗಳಿಂದ ಆಹಾರ ತಿನಿಸಿದರು. ಪಾಲಿ ಕ್ಲಿನಿಕ್‌ನ ನೂತನ ಕಟ್ಟಡ ಹಾಗೂ ನಿರ್ಮಾಣ ಹಂತದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಲ್ಯಾಬ್ ಕಟ್ಟಡವನ್ನು ಸಚಿವರು ವೀಕ್ಷಣೆ ಮಾಡಿದರು.
ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ| ಎಚ್. ನಾಗರಾಜ ಮಾತನಾಡಿ, ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಲ್ಯಾಬ್ ಜಿಲ್ಲೆಯಲ್ಲಿ ಇರಲಿಲ್ಲ. ರೋಗದ ಬಗ್ಗೆ ಅಥವಾ ಪಶುಗಳ ಮರಣೋತ್ತರ ಪರೀಕ್ಷೆಗೆ ಸ್ಯಾಂಪಲ್ಸ್‌ನ್ನು ಬಳ್ಳಾರಿ, ರಾಯಚೂರು ಜಿಲ್ಲೆಗಳಿಗೆ ಕಳಹಿಸಬೇಕಾಗುತ್ತಿತ್ತು. ಇದರಿಂದ ಸರ್ಕಾರಕ್ಕೆ ಸಕಾಲಕ್ಕೆ ವರದಿ ಸಲ್ಲಿಸಲು ಹಾಗೂ ರೈತರಿಗೆ ಪರಿಹಾರ ಒದಗಿಸಲು ವಿಳಂಬವಾಗುತ್ತಿತ್ತು.
ಈ ಲ್ಯಾಬ್ ನಿರ್ಮಾಣದಿಂದ ಜಿಲ್ಲೆಯಲ್ಲಿ ಸಹಾಯಧನ ಪ್ರಕ್ರಿಯೆ ಹಾಗೂ ಅಗತ್ಯ ಕ್ರಮಕ್ಕೆ ತುಂಬಾ ಅನುಕೂಲವಾಗಲಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು. ಕುರಿ ಸಾಕಾಣಿಕೆ ಪರಿಕರಗಳ ವಿತರಣೆ: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಪ್ರಸಕ್ತ ಸಾಲಿನ ಸಂಚಾರಿ, ಅರೆ ಸಂಚಾರಿ ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಟೆಂಟ್ ಹಾಗೂ ಇನ್ನಿತರೆ ಪರಿಕಿರಗಳ ಕಿಟ್ ವಿತರಣೆ ಯೋಜನೆಯಡಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಇದೇ ವೇಳೆ ಅರ್ಹ ಐದು ಜನ ಫಲಾನುಭವಿಗಳಿಗೆ ಟೆಂಟ್ ಹಾಗೂ ಇತರೆ ಪರಿಕರಗಳ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಪಂ ಸಿಇಒ ಬಿ. ಫೌಜಿಯಾ ತರನ್ನುಮ್, ಎಸ್ಪಿ ಟಿ. ಶ್ರೀಧರ್, ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ| ಅಶೋಕ್ ಘೋಣಸಗಿ, ಕೊಪ್ಪಳ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ| ಯಮನಪ್ಪ ಬಿ.ಕೆ. ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.