ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿರುವ “ಅಕ್ಕ ಕೆಫೆ’ ಕಾರ್ಯಗತಕ್ಕೆ ಸರಕಾರ ಸಿದ್ಧತೆ ಮಾಡಿಕೊಂಡಿದೆ.
ರಾಜ್ಯದಲ್ಲಿ 2,500 ಕಾಫಿ ಕಿಯೋಸ್ಕ್ ಗಳನ್ನು ಸ್ಥಾಪಿಸಿ ಸುಮಾರು 1 ಲಕ್ಷ ಮಹಿಳೆಯರನ್ನು ಕಾಫಿ ಉದ್ಯಮದಲ್ಲಿ ತೊಡಗಿಸಿಕೊಳ್ಳುವ ಸಂಕಲ್ಪ ಇದರಲ್ಲಿದೆ. “ಅಕ್ಕ ಕೆಫೆ’ ಕಾರ್ಯಕ್ರಮದಡಿ ಆರೋಗ್ಯಪೂರ್ಣ ಮತ್ತು ಸ್ವಾದಿಷ್ಟವಾದ ಆಹಾರವನ್ನು ತಯಾರಿಸಿ ಪೂರೈಸಲು ಅನುಭವಿರುವ ತಾಂತ್ರಿಕ ಬೆಂಬಲ ಸಂಸ್ಥೆಗಳ ಮೂಲಕ ಮಹಿಳೆಯರಿಗೆ ಸೂಕ್ತ ತರಬೇತಿ ನೀಡಿ ಉತ್ತಮ ಮಾದರಿ ಸೇವೆ ನೀಡುವುದು ಇದರ ಮೂಲ ಉದ್ದೇಶವಾಗಿದೆ. “ಅಕ್ಕ ಕೆಫೆ’ ಸಂಪೂರ್ಣವಾಗಿ ಮಹಿಳೆಯರ ಮೂಲಕವೇ ಕಾರ್ಯಾಚರಿಸಲಿದೆ.
ಶೀಘ್ರದಲ್ಲೇ ಈ ಕೆಫೆಗಳು ಪ್ರವಾಸಿ ತಾಣ, ಸರಕಾರಿ ಕಚೇರಿ, ಆಸ್ಪತ್ರೆ ಆವರಣ ಸಹಿತ ಜನನಿಬಿಡತೆ ಇರುವ ಪ್ರದೇಶಗಳಲ್ಲಿ ಕಾರ್ಯಾರಂಭಿಸಲಿವೆ. ಮಹಿಳಾ ಮಹತ್ವಾಕಾಂಕ್ಷಿಯ ಈ ಯೋಜನೆ ರಾಜ್ಯಾದ್ಯಂತ ಒಂದೇ ಮಾದರಿ ಬ್ರ್ಯಾಂಡಿಂಗ್ ವಿನ್ಯಾಸದಡಿ ಅನುಷ್ಠಾನಗೊಳ್ಳಲಿದೆ. ಆದ್ದರಿಂದ ಕೌಶಲ ಅಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯಡಿ ವಿಕಾಸ ಸೌಧದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್ ಕೆಫೆಯ ಲಾಂಛನ ಮತ್ತು ವಿನ್ಯಾಸದ ಮಾದರಿಯನ್ನು ಬಿಡುಗಡೆ ಮಾಡಿದರು.
ಹೊಸ ಹೆಜ್ಜೆಗೆ ಮುಂದಾಗಿ
ಈ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಮಹಿಳೆಯರಿಗೆ ಉತ್ತೇಜನ ನೀಡಲು ಸರಕಾರ ಬದ್ಧವಾಗಿದೆ. ಕಾಫಿ ಡೇ, ಎಂಟಿಆರ್ ಸಹಿತ ಅನೇಕ ಬ್ರ್ಯಾಂಡ್ ಕಂಪೆನಿಗಳು ಸಣ್ಣದಾಗಿ ಆರಂಭವಾಗಿ ದೊಡ್ಡದಾಗಿ ಬೆಳೆದಿವೆ. “ಅಕ್ಕ ಕೆಫೆ’ ಮೂಲಕ ಹೊಸ ಹೆಜ್ಜೆಗೆ ಮುಂದಾಗಿದ್ದೀರಿ. ನಾಳೆ ಎಷ್ಟು ದೊಡ್ಡ ಮಟ್ಟಕ್ಕೆ ಬೇಕಾದರೂ ನೀವು ಬೆಳೆಯಬಹುದು ಎಂದರು.
ನಾನು ಸಹಕಾರಿ ಸಚಿವನಾಗಿದ್ದಾಗ ರಮಾದೇವಿ ರಾಜ್ಯಪಾಲರಾಗಿದ್ದರು. ಆಗ ಬೀದರ್‌ಗೆ ಹೋಗಿದ್ದಾಗ ಸ್ವಸಹಾಯ ಗುಂಪುಗಳು ಆರಂಭ ವಾಗಿದ್ದವು. ಈ ಬಗ್ಗೆ ನಾನು ಎಸ್.ಎಂ. ಕೃಷ್ಣ ಜತೆ ಚರ್ಚಿಸಿದೆ. ಆಗ ಅವರು ಸ್ತ್ರೀ ಶಕ್ತಿ ಸಂಘಗಳ ಆರಂಭಿಸಬೇಕೆಂದು ತೀರ್ಮಾನಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ವಹಿಸಿ ಮಹಿಳೆಯರಿಗೆ ಶಕ್ತಿ ನೀಡುವ ಕೆಲಸ ಮಾಡಿದರು ಎಂದು ಹೇಳಿದರು.