Advertisement

ಬಹುಮಹಡಿ ವಸತಿ ಯೋಜನೆಗೆ ಚಾಲನೆ

06:27 AM Mar 09, 2019 | |

ಬೆಂಗಳೂರು: ನಗರದ ವಸತಿರಹಿತರಿಗೆ ಸೂರು ಕಲ್ಪಿಸುವ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ರೂಪಿಸಿರುವ “ಒಂದು ಲಕ್ಷ ಬಹುಮಹಡಿ ಬೆಂಗಳೂರು ನಗರ ವಸತಿ ಯೋಜನೆ’ಗೆ ಶುಕ್ರವಾರ ಬೆಟ್ಟಹಲಸೂರು ಗ್ರಾ.ಪಂ.ನ ಕುದುರೆಗೆರೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭೂಮಿ ಪೂಜೆ ನೆರವೇರಿಸಿದರು.

Advertisement

ಬಳಿಕ ಮಾತನಾಡಿದ ಅವರು, ಬೆಂಗಳೂರು ನಗರದ ಅಭಿವೃದ್ಧಿಗೆ ಸರ್ಕಾರ 1 ಲಕ್ಷ ಕೋಟಿ ರೂ. ಮೀಸಲಿಟ್ಟಿದೆ. ವಸತಿರಹಿತರಿಗೆ ಸೂರು ಕಲ್ಪಿಸಬೇಕು ಎಂಬ ಉದ್ದೇಶದೊಂದಿಗೆ ಈ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಸರ್ಕಾರಿ ಕಟ್ಟಡಗಳ ಬಗ್ಗೆ ಕೆಲವರಿಗೆ ಅನುಮಾನಗಳಿವೆ. ಗುಣಮಟ್ಟದ ಕಾಮಗಾರಿ ಕೈಗೊಳ್ಳುವುದಿಲ್ಲ, ಕಟ್ಟಡಗಳು ಹೆಚ್ಚು ವರ್ಷ ಬಾಳಿಕೆ ಬರುವುದಿಲ್ಲ ಎಂಬ ಆರೋಪಗಳಿವೆ. ಹೀಗಾಗಿ ಪ್ರಸ್ತುತ ಯೋಜನೆಯನ್ನು ಖಾಸಗಿ ನಿರ್ಮಾಣ ಕಂಪನಿಗಳಿಗಿಂತಲೂ ಹೆಚ್ಚು ಗುಣಮಟ್ಟದೊಂದಿಗೆ ನಿರ್ಮಿಸುವ ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.

ಸಾವಿರ ಎಕರೆ ಭೂಮಿ: ನಗರ ಪ್ರದೇಶದ ನಿವೇಶನ ಕೊರತೆ ನೀಗಿಸುವ ಸಂಬಂಧ ಸರ್ಕಾರ ಬೆಂಗಳೂರಿನ ವಿವಿಧ ಕಡೆ ಸುಮಾರು 1 ಸಾವಿರ ಎಕರೆ ಪ್ರದೇಶವನ್ನು ಕಾಯ್ದಿರಿಸಿದೆ. ಇಲ್ಲಿ 2 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದ್ದು, ಮೊದಲ ಹಂತದಲ್ಲಿ 50 ಸಾವಿರ ಮನೆಗಳನ್ನು ಕಾಲ ಮಿತಿಯೊಳಗೆ ನಿರ್ಮಿಸಲಾಗುವುದು ಎಂದರು. 

ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಮೂರು ವರ್ಷಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದ್ದು, ಮನೆಗಳನ್ನು ಬಡವರಿಗೆ ಕೈಗೆಟುಕುವ ಬೆಲೆಯಲ್ಲಿ ನೀಡಲಾಗುವುದು. ಹಲವು ಮಂದಿ ಆನ್‌ಲೈನ್‌ನಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ ಎಂದರು. ಜಿಲ್ಲಾಧಿಕಾರಿ ವಿಜಯಶಂಕರ್‌, ಬೆಂಗಳೂರು ನಗರ ಜಿ.ಪಂ ಸಿಇಒ ಅರ್ಚನಾ ಮತ್ತಿತರರು ಇದ್ದರು.

Advertisement

ನಿವೇಶನ ವೆಚ್ಚ 8 ಲಕ್ಷ ರೂ.: ವಸತಿ ಯೋಜನೆಗೆ 8 ಲಕ್ಷ ರೂ. ವೆಚ್ಚ ಬಿಳಲಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಫ‌ಲಾನುಭವಿಗಳಿಗೆ ಕೇಂದ್ರ ಸರ್ಕಾರ 1.5 ಲಕ್ಷ ರೂ. ಮತ್ತು ರಾಜ್ಯ ಸರ್ಕಾರ 2 ಲಕ್ಷ ರೂ. ನೀಡಲಿದೆ. ಹಾಗೆಯೇ ಸಾಮಾನ್ಯ ವರ್ಗದವರಿಗೆ ಕೇಂದ್ರ ಸರ್ಕಾರ 1.5 ಲಕ್ಷ ರೂ. ಮತ್ತು ರಾಜ್ಯ ಸರ್ಕಾರ 1.2 ಲಕ್ಷ ರೂ. ನೀಡಲಿದ್ದು ಉಳಿದ ಹಣವನ್ನು ಫ‌ಲಾನುಭವಿಗಳೇ ಭರಿಸಬೇಕು. ಇದಕ್ಕಾಗಿ ಸರ್ಕಾರ ಫ‌ಲಾನುಭವಿಗಳಿಗೆ ಬ್ಯಾಂಕ್‌ನಿಂದ ಸಾಲ ಕೊಡಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next