ಭೇರ್ಯ: ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಕೆ.ಆರ್.ನಗರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಾಲು ಉತ್ಪಾದಕರ ಸಂಘ ನೂತನ ಕಟ್ಟಡಗಳು ಹಾಗೂ ಹಾಲು ಶಿಥೀಲೀಕರಣ ಘಟಕಗಳ ಉದ್ಘಾಟನೆ ಶುಕ್ರವಾರ ಹಮ್ಮಿಕೊಳ್ಳಲಾಗಿದೆ ಎಂದು ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್ ತಿಳಿಸಿದರು. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಶುಕ್ರವಾರ ಬೆಳಗ್ಗೆ 11ಕ್ಕೆ ಸಾಲಿಗ್ರಾಮ ಹೋಬಳಿ ಬೆಟ್ಟಹಳ್ಳಿ ಗ್ರಾಮದಲ್ಲಿ ಸುಮಾರು 10 ಲಕ್ಷ ವೆಚ್ಚದ ಹಾಲು ಉತ್ಪಾದಕರ ಸಂಘ ನೂತನ ಕಟ್ಟಡ, 15 ವೆಚ್ಚದ ಹಾಲು ಶಿಥಲೀಕರಣ ಘಟಕ ಉದ್ಘಾಟನೆ, ನಂತರ ಮಧ್ಯಾಹ್ನ 12ಕ್ಕೆ ಹರದನಹಳ್ಳಿ ಗ್ರಾಮದಲ್ಲಿ 10 ಲಕ್ಷ ವೆಚ್ಚದ ಹಾಲು ಉತ್ಪಾದಕರ ಸಂಘ ನೂತನ ಕಟ್ಟಡ ಉದ್ಘಾಟನೆ,
ನಂತರ ಮಧ್ಯಾಹ್ನ 2ಕ್ಕೆ ಚುಂಚನಕಟ್ಟೆ ಹೋಬಳಿ ಹನಸೋಗೆ ಗ್ರಾಮದಲ್ಲಿ ಸುಮಾರು 15 ಲಕ್ಷ ವೆಚ್ಚದ ಹಾಲು ಉತ್ಪಾದಕರ ಸಂಘ ನೂತನ ಕಟ್ಟಡ, 15 ಲಕ್ಷ ವೆಚ್ಚದ ಹಾಲು ಶಿಥಲೀಕರಣ ಘಟಕ ಹಾಗೂ 5 ಲಕ್ಷದ ಶುದ್ಧ ಕುಡಿಯುವ ನೀರು ಘಟಕ ಉದ್ಘಾಟನೆ ನಡೆಯಲಿದೆ ಎಂದರು.
ಹಾಲು ಶಿಥಲೀಕರಣ ಘಟಕ ಮತ್ತು ಹಾಲು ಉತ್ಪಾದಕರ ಸಂಘ ನೂತನ ಕಟ್ಟಡಗಳ ಉದ್ಘಾಟನೆಯನ್ನು ಮಾಜಿ ಸಚಿವ ಎಚ್.ಡಿ.ರೇವಣ್ಣ ನೆರವೇರಿಸಲಿದ್ದು, ಶಾಸಕ ಸಾ.ರಾ.ಮಹೇಶ್ ಅಧ್ಯಕ್ಷತೆ ವಹಿಸಲಿದ್ದಾರೆಂದರು.
ಮುಖ್ಯ ಅತಿಥಿಗಳಾಗಿ ಸಂಸದ ಸಿ.ಎಸ್.ಪುಟ್ಟರಾಜು, ಮಾಜಿ ಸಂಸದ ಅಡಗೂರು ವಿಶ್ವನಾಥ್, ಮೈಮುಲ್ ಅಧ್ಯಕ್ಷ ಕೆ.ಜೆ.ಮಹೇಶ್, ಮೈಮುಲ್ ನಿರ್ದೇಶಕರಾದ ಕೆ.ಎಸ್.ಕುಮಾರ್, ಈರೇಗೌಡ, ಪ್ರಸನ್ನ, ಜಿಪಂ ಸದಸ್ಯರಾದ ಸಾ.ರಾ.ನಂದೀಶ್, ವೀಣಾಕೀರ್ತಿ, ತಾಪಂ ಅಧ್ಯಕ್ಷ ಎಚ್.ಟಿ.ಮಂಜುನಾಥ್ ಮತ್ತಿತರರು ಭಾಗವಹಿಸಲಿದ್ದಾರೆಂದರು.