ಬೆಳಗಾವಿ: ನಗರದ ಶಹಾಪೂರದಲ್ಲಿರುವ ರವೀಂದ್ರ ಕೌಶಿಕ ಇ-ಗ್ರಂಥಾಲಯದ ಮೇಲ್ಮಹಡಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾದ ದೇಶದ ಮೊದಲ ಮಕ್ಕಳ ವಲಯ(ಕಿಡ್ಸ್ ಜೋನ್)ದ ಉದ್ಘಾಟನೆ ಶನಿವಾರ ನೆರವೇರಿದೆ.
ಸಂಸದೆ ಮಂಗಲಾ ಅಂಗಡಿ ಉದ್ಘಾಟಿಸಿ, ಶಾಸಕ ಅಭಯ ಪಾಟೀಲ್ ಅವರು ಮಕ್ಕಳ ಭವಿಷ್ಯದ ಶೈಕ್ಷಣಿಕ ಏಳ್ಗೆ ಮತ್ತು ಅವರ ಬಹುಮುಖ ಪ್ರತಿಭೆಯನ್ನು ಉತ್ತೇಜಿಸಲು ಈ ಕಿಡ್ಸ್ ಝೋನ್ ಅಭಿವೃದ್ಧಿಪಡಿಸಿದ್ದಾರೆ.
ಸುಧಾರಿತ ತಂತ್ರಜ್ಞಾನದ ಮೂಲಕ ಮಕ್ಕಳ ಮನೋಸ್ಥೈರ್ಯ ಹೆಚ್ಚಿಸು ವುದಲ್ಲದೆ, ಅವರ ಜ್ಞಾನದ ಸಾಮರ್ಥ್ಯ ಅಳೆಯಬಲ್ಲ ಮತ್ತು ವಿಶ್ಲೇಷಿಸಬಹುದಾದ ವಿಶೇಷ ತಂತ್ರಜ್ಞಾನ ಹೊಂದಿದ ಕಿಡ್ಸ್ ಝೋನ್ ಇದಾಗಿದೆ ಎಂದರು.
ಶಾಸಕ ಅಭಯ ಪಾಟೀಲ ಮಾತನಾಡಿ, ಇದೊಂದು ಮಾದರಿ ಯೋಜನೆಯಾಗಿದೆ. 3ರಿಂದ 8 ವರ್ಷದೊಳಗಿನ ಮಕ್ಕಳು ಇಲ್ಲಿಗೆ ಬಂದು ಓದಲು-ಕಲಿಯಲು ಮಾತ್ರವಲ್ಲದೆ ಅವರ ಅರಿವಿನ ಕೌಶಲಗಳಾದ ಶಬ್ದಕೋಶ ಗ್ರಹಿಕೆ, ತಾರ್ಕಿಕತೆ, ಸ್ಮರಣೆ, ಸಂವೇದನಾ ಕೌಶಲ, ಸಂಖ್ಯಾತ್ಮಕ ಕೌಶಲ ಇತ್ಯಾದಿಗಳನ್ನು ಅಳೆಯಬಹುದು. ಮಕ್ಕಳ ಮನೋಸ್ಥೈರ್ಯ ಹೆಚ್ಚಿಸಲು ಪೂರಕವಾಗಿದ್ದು, ಶಿಕ್ಷಣ ಸಂಸ್ಥೆಗಳು, ಮಕ್ಕಳ ಮನಶಾಸ್ತ್ರಜ್ಞರು ಈ ಸಾರ್ವಜನಿಕ ಸೌಲಭ್ಯ ಉಚಿತವಾಗಿ ಬಳಸಿಕೊಳ್ಳಬಹುದು ಎಂದು ಹೇಳಿದರು.
ದೇಶದಲ್ಲೇ ಮೊದಲು
ದೇಶದಲ್ಲಿ ಇಂಥದ್ದೊಂದು ಕಿಡ್ಸ್ ಝೋನ್ ಇದೇ ಮೊದಲು ಎಂಬ ಹೆಗ್ಗಳಿಕೆ ಹೊಂದಿದೆ. ಇದೊಂದು ದೇಶಕ್ಕೆ ಮಾದರಿಯಾಗುವ ತಾಂತ್ರಿಕ ವೈಶಿಷ್ಟ್ಯ ಹೊಂದಿದೆ ಎಂದು ಅಭಯ ಪಾಟೀಲ್ ಹೇಳಿದರು.