ಧಾರವಾಡ: ಪೋಷಕರು ಹಾಗೂ ಆಡಳಿತ ಮಂಡಳಿಗಳನ್ನು ಮೆಚ್ಚಿಸಲು ಹೋಗಿ ಸರಕಾರವು ಖಾಸಗಿ ಶಿಕ್ಷಕರ ಹೊಟ್ಟೆಯ ಮೇಲೆ ಬರೆ ಎಳೆದಿದೆ ಎಂದು ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗದ ರಾಜ್ಯಾಧ್ಯಕ್ಷ ಸಿ.ಎನ್. ನಾಗೇಶ ಹೇಳಿದರು.
ಅಂಜುಮನ್ ನ್ಯೂ ಕಾಂಪ್ಲೆಕ್ಸ್ ನಲ್ಲಿರುವ ಫೇಸ್ ಕ್ಲಾಸ್ ಸಭಾಂಗಣದಲ್ಲಿ ಖಾಸಗಿ ಶಿಕ್ಷಕರು ಹಾಗೂ ಉಪನ್ಯಾಸಕರ ಒಕ್ಕೂಟದ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗದ ಜಿಲ್ಲಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಸುಮಾರು ಹತ್ತು ತಿಂಗಳಿಂದ ವೇತನವಿಲ್ಲದೇ ಕಷ್ಟಕರ ಜೀವನ ನಡೆಸುತ್ತಿರುವ ಖಾಸಗಿ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ಸರಕಾರವು ಶುಲ್ಕ ಕಡಿತಗೊಳಿಸುವುದರ ಮೂಲಕ ಅವರನ್ನು ಅಕ್ಷರಶಃ ಬೀದಿಗೆ ದೂಡಿದೆ. ಖಾಸಗಿ ಸಂಸ್ಥೆಯವರು ಶುಲ್ಕವನ್ನು ಕಡಿತಗೊಳಿಸಿದರೆ ಸಿಬ್ಬಂದಿಗೆ ವೇತನ ಕಡಿತಗೊಳಿಸುವುದಾಗಿ ಹೇಳಿವೆ.
ಈಗಾಗಲೇ ಅತಿ ಹೆಚ್ಚು ಸಂಕಷ್ಟದಲ್ಲಿರುವ ಖಾಸಗಿ ಸಂಸ್ಥೆಯ ಸಿಬ್ಬಂದಿಗೆ ಸರಕಾರವು ಗಾಯದ ಮೇಲೆ ಬರೆ ಎಳೆದಿದೆ ಎಂದರು. ಸರಕಾರವು ಈಗಲಾದರೂ ಎಚ್ಚೆತ್ತುಕೊಂಡು ಖಾಸಗಿ ಶಿಕ್ಷಕರ ನೆರವಿಗೆ ಬರಬೇಕು. ಶಿಕ್ಷಣ ಸಚಿವರು ಘೋಷಿಸಿದ ಹತ್ತು ಸಾವಿರ ಪರಿಹಾರವನ್ನು ಈಗಲಾದರೂ ನೀಡಿ ಖಾಸಗಿ ಶಿಕ್ಷಕರಿಗೆ ಸರಕಾರ ನೆರವಾಗಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ವ್ಯಕ್ತಿ ಸೆರೆ ; 10 ಲಕ್ಷ ಮೌಲ್ಯದ ಚಿನ್ನ -ಮೊಬೈಲ್ ವಶ
ರಾಜ್ಯ ಘಟಕದ ಗೌರವಾಧ್ಯಕ್ಷ ಆರ್.ರಂಜನ್ ಮಾತನಾಡಿ, 2020-21ರ ಸಾಲಿಗೆ ಸರಕಾರದ ಆದೇಶದಂತೆ ಶಾಲೆಗಳಿಗೆ ಮಾನ್ಯತಾ ನವೀಕರಣವನ್ನು ಒಂದು ವರ್ಷಕ್ಕೆ ಮಾತ್ರವೇ ಸೀಮಿತವಾಗಿ ನೀಡಬೇಕು. ಶಾಲೆಯಲ್ಲಿ ಸೇವಾ ನಿವೃತ್ತಿಯನ್ನು 60 ವರ್ಷಕ್ಕೆ ಗೊತ್ತುಪಡಿಸಬೇಕು. ನಿವೃತ್ತಿ ಗ್ರಾಜ್ಯುಟಿ ಮೊತ್ತವನ್ನು ಆಡಳಿತ ಮಂಡಳಿಯವರೇ ನೀಡಬೇಕು ಎಂದು ಆಗ್ರಹಿಸಿದರು.