ಬೈಂದೂರು: ಬೈಂದೂರು ಕ್ಷೇತ್ರದಲ್ಲಿ ಸಂಸದರು ಹಾಗೂ ಶಾಸಕರ ಪ್ರಯತ್ನದಿಂದ ಅತ್ಯಂತ ಶೀಘ್ರವಾಗಿ ಅಗ್ನಿಶಾಮಕ ಠಾಣೆಯ ಮಂಜೂರಾತಿ ದೊರೆತಿದೆ. ಒಟ್ಟು 1,500ಕ್ಕೂ ಅಧಿಕ ಖಾಲಿ ಹುದ್ದೆಗಳನ್ನು ಒಂದೆರಡು ತಿಂಗಳಲ್ಲಿ ಭರ್ತಿ ಮಾಡಲಾಗುತ್ತದೆ. 20 ರಿಂದ 25 ವಾಹನಗಳನ್ನು ಪ್ರಸಕ್ತ ಸಾಲಿನಲ್ಲಿ ಸೇರ್ಪಡೆ ಮಾಡಿಕೊಡಲಾಗುವುದು.ಬೈಂದೂರು ಸೇರಿದಂತೆ 3 ಅಗ್ನಿಶಾಮಕ ಠಾಣೆಗಳಿಗೆ ಶಾಶ್ವತ ಮತ್ತು ಸ್ವಂತ ಕಟ್ಟಡ ನಿರ್ಮಾಣಕ್ಕೆ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯದಲ್ಲಿ 10 ಹೊಸ ಅಗ್ನಿಶಾಮಕ ಠಾಣೆಗಳಿಗೆ ಮಂಜೂರಾತಿ ದೊರೆತಿದೆ ಎಂದು ರಾಜ್ಯ ಗೃಹಸಚಿವ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಬೈಂದೂರು ತಾಲೂಕಿನಲ್ಲಿ ನೂತನ ಅಗ್ನಿಶಾಮಕ ಠಾಣೆಯ ವರ್ಚುವಲ್ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ನಾಮಫಲಕ ಅನಾವರಣಗೊಳಿಸಿ ಮಾತನಾಡಿದ ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ. ರಾಘವೇಂದ್ರ ಬೈಂದೂರು ಅಭಿವೃದ್ಧಿಗೆ ಈಗಾಗಲೇ ರಾಜ್ಯ ಸರಕಾರ ಒಂದು ಸಾವಿರಕ್ಕೂ ಅಧಿಕ ಕೋಟಿ ರೂ. ಅನುದಾನ ಮಂಜೂರಾತಿ ಮಾಡಿದೆ.ಬಹುನಿರೀಕ್ಷಿತ ಯೋಜನೆಗಳು ಸಾಕಾರ ಗೊಂಡು ಅಂತಿಮ ಹಂತದಲ್ಲಿದೆ. ಕೇಂದ್ರದಿಂದ ಕುಡಿಯುವ ನೀರಿಗಾಗಿ 200 ಕೋ.ರೂ. ಹೆಚ್ಚುವರಿ ಅನುದಾನ ದೊರೆತಿದೆ. ಪ್ರವಾಸೋದ್ಯಮ ಸೇರಿದಂತೆ ಬೈಂದೂರಿನ ಭೌಗೋಳಿಕ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಬೈಂದೂರು ಪಟ್ಟಣ ಪಂಚಾಯತ್ ತನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ಶೆಟ್ಟಿ ಬೈಂದೂರಿನ ಅಭಿವೃದ್ಧಿಯ ಕನಸು ನನಸಾಗುತ್ತಿದೆ. ಬಹುನಿರೀಕ್ಷಿತ ಯೋಜನೆಗಳು ಸಾಕಾರಗೊಂಡು ಮಾದರಿ ತಾಲೂಕಾಗಿ ಮಾರ್ಪಡಲಿದೆ ಎಂದರು.
ಈ ಸಂದರ್ಭದಲ್ಲಿ ವಿದ್ಯುತ್ ಉಪಕೇಂದ್ರದಲ್ಲಿ 1×5 ಎಂ.ವಿ.ಎ. ಶಕ್ತಿ ಪರಿವರ್ತಕ ಕಾಮಗಾರಿಯನ್ನು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಿ ದರು. ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ, ಕುಂದಾಪುರ ಸಹಾಯಕ ಕಮಿಷನರ್ ರಾಜು, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹೋಲೊಟ್, ಮಂಗಳೂರು ಪ್ರಾಂತ್ಯ ಅಗ್ನಿಶಾಮಕ ಇಲಾಖೆಯ ಮುಖ್ಯ ಅಧಿಕಾರಿ ಜಿ. ತಿಪ್ಪೇಸ್ವಾಮಿ, ಬೈಂದೂರು ತಹಶೀಲ್ದಾರ್ ಬಿ.ಪಿ. ಪೂಜಾರ್, ಬೈಂದೂರು ತಾ.ಪಂ. ಅಧ್ಯಕ್ಷ ಮಹೇಂದ್ರ ಪೂಜಾರಿ, ಉಪಾಧ್ಯಕ್ಷೆ ಮಾಲಿನಿ ಕೆ., ಕುಂದಾಪುರ ತಾ.ಪಂ. ಅಧ್ಯಕ್ಷೆ ಇಂದಿರಾ ಶೆಟ್ಟಿ, ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ಶೋಭಾ ಪುತ್ರನ್, ನಗರಾಭಿವೃದ್ಧಿ ಅಧಿಕಾರಿ ಅರುಣ್ ಪ್ರಭಾ, ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ರಾಜಪ್ಪ, ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ರವಿ, ಮೆಸ್ಕಾಂ ಎಂಜಿನಿಯರಿಂಗ್ ಕಾರ್ಯನಿರ್ವಾಹಕ ರಾಜೇಶ್, ಜಿ.ಪಂ. ಸದಸ್ಯರಾದ ಶಂಕರ ಪೂಜಾರಿ, ಬಾಬು ಶೆಟ್ಟಿ, ಸುರೇಶ್ ಬಟ್ವಾಡಿ, ಬೈಂದೂರು ಪಟ್ಟಣ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೇಬಲ್ ಡಿ’ಸೋಜಾ ಉಪಸ್ಥಿತರಿದ್ದರು.
ಬೈಂದೂರು ಪ.ಪಂ. ಉದ್ಘಾಟನೆ
ಪಟ್ಟಣ ಪಂಚಾಯತ್‌ಗಳಿಗೆ ಅನುಕೂಲವಿರುವ ಎಲ್ಲ ಸೌಲಭ್ಯಗಳನ್ನು ಹಾಗೂ ಅನುದಾನಗಳನ್ನು ಸರಕಾರದ ಮಟ್ಟದಲ್ಲಿ ಶೀಘ್ರ ಮಂಜೂರು ಮಾಡಲಾಗುತ್ತದೆ.
– ಬಿ.ಎಂ. ಸುಕುಮಾರ್ ಶೆಟ್ಟಿ, ಶಾಸಕರು