Advertisement

ಅಕ್ಷಯ ನೆರವು ಕೇಂದ್ರಕ್ಕೆ ಚಾಲನೆ

10:33 PM Aug 14, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲಾಸ್ಪತ್ರೆಗೆ ಬರುವ ಬಡ ಹಾಗೂ ನಿರ್ಗತಿಕ ರೋಗಿಗಳಿಗೆ ಸಹಾಯದ ಹಸ್ತ ಚಾಚುವ ನಿಟ್ಟಿನಲ್ಲಿ ಸ್ಥಾಪಿಸಲಾಗಿರುವ ಅಕ್ಷಯ ನೆರವು ಕೇಂದ್ರವನ್ನು ಬುಧವಾರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌, ಬಡ ರೋಗಿಗಳಿಗೆ ಸಮವಸ್ತ್ರ, ಪೌಷ್ಟಿಕ ಮಕ್ಕಳಿಗೆ ಹಣ್ಣು, ಹಂಪಲು ಹಾಗೂ ದವಸ ಧಾನ್ಯಗಳನ್ನು ವಿತರಿಸುವ ಮೂಲಕ ಉದ್ಘಾಟಿಸಿ ಜಿಲ್ಲೆಗೆ ಸಮರ್ಪಿಸಿದರು.

Advertisement

ಮೊದಲ ದಾನಿ: ನಗರದ ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ನಿಗಾ ಘಟಕದ ಸಮೀಪ ತೆರೆಯಲಾಗಿರುವ ಅಕ್ಷಯ ನೆರವು ಕೇಂದ್ರವನ್ನು ಉದ್ಘಾಟಿಸಿ ಖುದ್ದು ಕೇಂದ್ರಕ್ಕೆ ಬಡ ಮಕ್ಕಳಿಗೆ ಅನುಕೂಲವಾಗುವಂತೆ ಮನೆಯಿಂದ ತಂದಿದ್ದ ಹಣ್ಣು ಹಂಪಲುಗಳ ಜೊತೆಗೆ ಮಕ್ಕಳಿಗೆ ನೀಡಬಹುದಾದ ಸಮವಸ್ತ್ರಗಳನ್ನು ದಾನ ಮಾಡುವ ಮೂಲಕ ಕೇಂದ್ರಕ್ಕೆ ಮೊದಲ ದಾನಿಯಾಗಿ ಇತರರಿಗೆ ಸ್ಫೂರ್ತಿ ತುಂಬಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌, ಜಿಲ್ಲಾಸ್ಪತ್ರೆಗೆ ಬರುವ ಬಹಳಷ್ಟು ಬಡ ರೋಗಿಗಳಿಗೆ ಸಮರ್ಪಕವಾಗಿ ಸಮವಸ್ತ್ರ ಇರುವುದಿಲ್ಲ. ಜೊತೆಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ತಿಂಗಳು 250 ರಿಂದ 300 ಹೆರಿಗೆ ಪ್ರಕರಣಗಳು ದಾಖಲಾಗುತ್ತವೆ. ಆದ್ದರಿಂದ ಅವಶ್ಯಕತೆ ಇರುವ ಮಹಿಳೆಯರಿಗೆ, ಮಕ್ಕಳಿಗೆ ಅಗತ್ಯವಾದ ಬಟ್ಟೆಗಳನ್ನು ವಿತರಿಸಲು ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ವಿಶೇಷವಾಗಿ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಅಕ್ಷಯ ನೆರವು ಕೇಂದ್ರದಿಂದ ಹಣ್ಣು ಹಂಪಲು ಹಾಗೂ ದವಸ ಧಾನ್ಯಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದರು.

ದಾನಿಗಳು ಮುಂದೆ ಬರುವಂತೆ ಮನವಿ: ಜಿಲ್ಲೆಯ ಗಣ್ಯವ್ಯಕ್ತಿಗಳು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಅಥವಾ ಯಾವುದೇ ಸಂಭ್ರಮಾಚರಣೆಯ ಸಂದರ್ಭದಲ್ಲಿ, ತಮ್ಮ ತಂದೆ, ತಾಯಿ ಹಿರಿಯರ ಸ್ಮರಣೆಯ ಹೆಸರಿನಲ್ಲಿ ಬಡ ರೋಗಿಗಳಿಗೆ ಹಣ್ಣು, ಹಂಪಲು, ಹಾಲು, ಬ್ರೆಡ್‌ ವಿತರಿಸುವ ವೇಳೆ ಅಕ್ಷಯ ನೆರವು ಕೇಂದ್ರದ ಮೂಲಕ ವಿತರಿಸಲು ಕೋರಿದರು.

ಬಡ ರೋಗಿಗಳ ನಡುವೆ ಸೇತುವೆ: ಜಿಲ್ಲೆಯ ದಾನಿಗಳು ಬಡ ರೋಗಿಗಳಿಗೆ ಅನುಕೂಲವಾಗುವಂತೆ ಬಳಸಲು ಯೋಗ್ಯವಾದ ಸಮವಸ್ತ್ರ ಹಾಗೂ ಹಣ್ಣು ಹಂಪಲುಗಳನ್ನು ಕೇಂದ್ರಕ್ಕೆ ಒದಗಿಸಬೇಕೆಂದು ಮನವಿ ಮಾಡಿದರು. ಅಕ್ಷಯ ನೆರವು ಕೇಂದ್ರ ಬಡ ರೋಗಿಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಆಶಾಭಾವನೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಮುಂದಿನ ದಿನಗಳಲ್ಲಿ ಔಷಧಿಗಳನ್ನು ಸಹ ಕೇಂದ್ರದಿಂದ ವಿತರಿಸುವ ಚಿಂತನೆ ನಡೆಸಲಾಗಿದೆ ಎಂದರು.

Advertisement

ಅಪರ ಜಿಲ್ಲಾಧಿಕಾರಿ ಆರತಿ, ಜಿಲ್ಲಾಸ್ಪತ್ರೆಯ ಶಸ್ತ್ರ ಚಿಕಿತ್ಸಕರಾದ ಡಾ.ಅನಿಲ್‌ ಕುಮಾರ್‌, ನಿವಾಸಿ ವೈದ್ಯಾಧಿಕಾರಿ ಡಾ.ರಮೇಶ್‌, ಮಕ್ಕಳ ತಜ್ಞರಾದ ಡಾ.ಪ್ರಕಾಶ್‌, ಡಾ.ಚೆನ್ನಕೇಶವ, ರೆಡ್‌ಕ್ರಾಸ್‌ ಸಂಸ್ಥೆ ಜಿಲ್ಲಾ ಕಾರ್ಯದರ್ಶಿ ಗುರುರಾಜರಾವ್‌, ಡಾ.ಕೆ.ಪಿ.ಶ್ರೀನಿವಾಸಮೂರ್ತಿ, ಖಜಾಂಚಿ ಎಂ.ಜಯರಾಮ್‌ ಸೇರಿದಂತೆ ಜಿಲ್ಲಾಸ್ಪತ್ರೆಯ ವೈದ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.

ಅಕ್ಷಯ ನೆರವು ಕೇಂದ್ರದಲ್ಲಿ ಏನು ಸಿಗುತ್ತೆ?: ಜಿಲ್ಲಾಸ್ಪತ್ರೆಗೆ ಬರುವ ಬಡ ರೋಗಿಗಳು ತಮಗೆ ಅವಶ್ಯಕವಾದ ಮಹಿಳೆಯರು, ಪುರುಷರಿಗೆ ಅಗತ್ಯವಾದ ಬಟ್ಟೆಗಳನ್ನು ಅಕ್ಷಯ ನೆರವು ಕೇಂದ್ರದ ಮೂಲಕ ಪಡೆದುಕೊಳ್ಳಬಹುದು. ಇನ್ನೂ ಅಪೌಷ್ಟಿಕ ಮಕ್ಕಳಿಗೆ ಹಣ್ಣು ಹಂಪಲು ಕೂಡ ಸಿಗುತ್ತದೆ. ಜೊತೆಗೆ ಉಚಿತವಾಗಿ ಬೇಳೆ, ಹೆಸರುಕಾಳು ಮತ್ತಿತರ ಪೌಷ್ಟಿಕವಾದ ಬೇಳೆಕಾಳುಗಳನ್ನು ಸಹ ಬಡ ರೋಗಿಗಳು ಪಡೆಯಬಹುದಾಗಿದೆ.

ಇನ್ನೂ ಅಕ್ಷಯ ನೆರವು ಕೇಂದ್ರಕ್ಕೆ ದಾನಿಗಳು ಬಟ್ಟೆ, ಸಮವಸ್ತ್ರ, ದವಸ ಧಾನ್ಯಗಳನ್ನು ಹಾಗೂ ಹಣ್ಣು ಹಂಪಲುಗಳನ್ನು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಅಥವಾ ತಮ್ಮ ಹಿರಿಯರ ಸ್ಮರಣೆ ಪ್ರಯುಕ್ತ ಕೇಂದ್ರಕ್ಕೆ ತಲುಪಿಸಿದರೆ ಅಲ್ಲಿನ ಸಿಬ್ಬಂದಿಯೇ ಬರುವ ಬಡ ರೋಗಿಗಳಿಗೆ ವಿತರಣೆ ಮಾಡಲಿದ್ದಾರೆ. ದಾನ ಮಾಡಲು ಇಚ್ಛಿಸುವ ದಾನಿಗಳು ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯವ ಮೊಬೈಲ್‌ ಸಂಖ್ಯೆ 99020248309 ಕರೆ ಮಾಡಿ ತಿಳಿಸಬಹುದು.

ಆರಂಭದ ದಿನವೇ ನೆರವು ಕೇಂದ್ರಕ್ಕೆ ಬೇಡಿಕೆ: ಬಡ ರೋಗಿಗಳಿಗೆ ಆರಂಭಿಸಲಾಗಿರುವ ಅಕ್ಷಯ ನೆರವು ಕೇಂದ್ರ ಮೊದಲ ದಿನವೇ ಫ‌ಲಾನುಭವಿಗಳಿಂದ ತುಂಬಿತ್ತು. ಜಿಲ್ಲಾಧಿಕಾರಿಗಳು ಉದ್ಘಾಟನೆ ನೆರವೇರಿಸಿ ಸಾಂಕೇತಿಕವಾಗಿ ಹಲವು ಮಂದಿ ಬಡ ಮಹಿಳೆಯರಿಗೆ, ಮಕ್ಕಳಿಗೆ ಸಮವಸ್ತ್ರ ಹಾಗೂ ಹಣ್ಣು ಹಂಪಲು ವಿತರಿಸಿದರು.

ಬಳಿಕ ಸಾಕಷ್ಟು ಮಂದಿ ನೆರವು ಕೇಂದ್ರಕ್ಕೆ ಆಗಮಿಸಿ ಹೆಚ್ಚಾಗಿ ಸಮವಸ್ತ್ರಗಳು ಪಡೆದುಕೊಂಡು ಹೋಗಿದ್ದು ಗಮನ ಸೆಳೆಯಿತು. ರೋಗಿಗಳು ಮಾತ್ರವಲ್ಲದೇ ಹೊರಗಿನ ವ್ಯಕ್ತಿಗಳು, ಕೂಲಿ ಕಾರ್ಮಿಕರು, ಅಡುಗೆ ಭಟ್ಟರು ನೆರವು ಕೇಂದ್ರದ ನೆರವು ಪಡೆದಿದ್ದು ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next