Advertisement

37th National Games ಉದ್ಘಾಟನೆ; ಒಲಿಂಪಿಕ್ಸ್‌  ಆತಿಥ್ಯಕ್ಕೆ ಸಜ್ಜು: ಮೋದಿ

11:17 PM Oct 26, 2023 | Team Udayavani |

ಪಣಜಿ: ವಿಶ್ವ ಕ್ರೀಡಾರಂಗದಲ್ಲಿ ಭರ್ಜರಿ ಯಶಸ್ಸು ಗಳಿಸುತ್ತಿರುವ ಭಾರತ, 2036ರ ಒಲಿಂಪಿಕ್ಸ್‌ ಕ್ರೀಡಾಕೂಟದ ಆತಿಥ್ಯಕ್ಕೆ ಸಿದ್ಧಗೊಂಡಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತೂಮ್ಮೆ ಘೋಷಿಸಿದರು. ಅವರು ಗುರುವಾರ ಪಣಜಿಯಲ್ಲಿ 37ನೇ ನ್ಯಾಶನಲ್‌ ಗೇಮ್ಸ್‌ ಉದ್ಘಾಟಿಸಿ ಒಲಿಂಪಿಕ್ಸ್‌ ಭರವಸೆ ಮೂಡಿಸಿದರು. ಇದೇ ವೇಳೆ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ ಅತ್ಯಧಿಕ ಪದಕ ಗೆದ್ದು ದಾಖಲೆ ನಿರ್ಮಿಸಿದ ಭಾರತದ ಸಾಧಕರನ್ನು ಅಭಿನಂದಿಸಿದರು.

Advertisement

“ಕಳೆದ 30-35 ದಿನಗಳಲ್ಲಿ ನಮ್ಮ ಸರಕಾರ ಕೆಲವು ಮಹತ್ವದ ತೀರ್ಮಾನ ಗಳನ್ನು ಕೈಗೊಂಡಿದೆ. ಇದರಲ್ಲಿ 2036ರ ಒಲಿಂಪಿಕ್ಸ್‌ ಆತಿಥ್ಯದ ರೂಪುರೇಷೆಯೂ ಒಂದು. ನಾವು ಈ ವರ್ಷ ಕ್ರೀಡಾ ಬಜೆಟನ್ನು 3 ಪಟ್ಟು ಹೆಚ್ಚಿಸಿದ್ದೇವೆ. ಕಳೆದ ಏಷ್ಯಾಡ್‌ನ‌ಲ್ಲಿ ಭಾರತ ಅತ್ಯಧಿಕ ಪದಕ ಗೆದ್ದು ದಾಖಲೆ ನಿರ್ಮಿಸಿತು. ಇದೆಲ್ಲ ಭಾರತೀಯ ಕ್ರೀಡೆಯ ಶುಭ ಸೂಚನೆ’ ಎಂದು ಮೋದಿ ಹೇಳಿದರು.

ಗೋವಾದ ಹವಾ ಬೇರೆಯೇ ಆಗಿದೆ, ಹೆಚ್ಚು ಕ್ರೀಡಾ ಪಟುಗಳನ್ನು ನೀಡಿರುವ ಗೋವಾದಲ್ಲಿ ರಾಷ್ಟ್ರೀಯ ಟೂರ್ನಿ ನಡೆಯುತ್ತಿರುವುದು ಚೈತನ್ಯದಾಯಕವಾಗಿದೆ. ಗೋವಾ ದೇಶಕ್ಕೆ ಹಲವು ಆಟಗಾರರನ್ನು ನೀಡಿದೆ. ಭಾರತದ ಕ್ರೀಡಾ ಕ್ಷೇತ್ರವು ಯಶಸ್ಸಿನ ಉತ್ತುಂಗಕ್ಕೇರುತ್ತಿರುವ ಕಾರಣ ಇಂದು ಗೋವಾದಲ್ಲಿ ರಾಷ್ಟ್ರೀಯ ಪಂದ್ಯಾವಳಿ ನಡೆಯುತ್ತಿದೆ. ಕ್ರೀಡಾ ಪಟುಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಗಳಲ್ಲಿ ಬದಲಾವಣೆ ಮಾಡಲಾಗಿದೆ. ತರಬೇತಿ ಯೋಜನೆಗಳಲ್ಲಿ, ನಾವು ಹಳೆಯ ಆಲೋಚನೆ, ಹಳೆಯ ಮನಸ್ಥಿತಿಯನ್ನು ಬದಲಾಯಿಸಿದ್ದೇವೆ. ನಾವು ಅಡೆತಡೆಗಳನ್ನು ಒಂದೊಂದಾಗಿ ತೆಗೆದುಹಾಕಿದ್ದೇವೆ. ಟ್ಯಾಲೆಂಟ್ ಸರ್ಚ್‍ನಿಂದ ಹಿಡಿದು ಅಥ್ಲೀಟ್‍ಗಳ ಶ್ರೇಣಿಯನ್ನು ಹಿಡಿದು ಅವರನ್ನು ಒಲಿಂಪಿಕ್ ವೇದಿಕೆಯನ್ನು ತಲುಪುವಂತೆ ಮಾಡಲು ಸರ್ಕಾರ ಮಾರ್ಗಸೂಚಿಯನ್ನು ಮಾಡಿದೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ನುಡಿದರು.

ಹಿಂದಿನ ಸರಕಾರ ಕ್ರೀಡಾ ಬಜೆಟ್ ಬಗ್ಗೆ ನಿರಾಸಕ್ತಿ ತೋರಿತ್ತು. ನಾವು ಕ್ರೀಡಾ ಬಜೆಟ್ ಹೆಚ್ಚಿಸಿದ್ದೇವೆ. ಒಂಬತ್ತು ವರ್ಷಗಳ ಹಿಂದಿನ ಕ್ರೀಡಾ ಬಜೆಟ್‍ಗಿಂತ ಈ ವರ್ಷದ ಕೇಂದ್ರ ಕ್ರೀಡಾ ಬಜೆಟ್ 9 ಪಟ್ಟು ಹೆಚ್ಚಾಗಿದೆ. ನಾವು ಖೇಲೋ ಇಂಡಿಯಾದಂತಹ ಯೋಜನೆಗಳನ್ನು ತಂದಿದ್ದೇವೆ. ಕ್ರೀಡಾಪಟುಗಳು ಬೆಳೆಯಲು ನಾವು ಹೊಸ ಪರಿಸರ ವ್ಯವಸ್ಥೆಯನ್ನು ರಚಿಸಿದ್ದೇವೆ. ಶಾಲೆಯಿಂದಲೇ ಕ್ರೀಡಾ ಪಟುಗಳಲ್ಲಿ ಪ್ರತಿಭೆ ಅನಾವರಣಗೊಳ್ಳುತ್ತಿದೆ. ಕ್ರೀಡಾ ಪ್ರತಿಭೆಗಳಿಗೆ ಸರ್ಕಾರ ಹಣ ಹೆಚ್ಚು ಖರ್ಚು ಮಾಡುತ್ತಿದೆ. ಪ್ರತಿಭಾವಂತ ಒಲಿಂಪಿಕ್ ಪೋಡಿಯಂ (ಟಾಪ್ಸ್) ಯೋಜನೆಯು ಕ್ರೀಡಾಪಟುಗಳನ್ನು ಗುರಿಯಾಗಿಸಿಕೊಂಡಿದೆ. ಮೂರು ಸಾವಿರಕ್ಕೂ ಹೆಚ್ಚು ಆಟಗಾರರು ಖೇಲೋ ಇಂಡಿಯಾದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದರು.

ಕಳೆದ 30 ರಿಂದ 35 ದಿನಗಳಲ್ಲಿ ಏನಾಯಿತು ಎಂಬುದನ್ನು ನಾನು ನಿಮಗೆ ಹೇಳುತ್ತೇನೆ. ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ, ನಮೋ ಭಾರತ್ ಮೆಟ್ರೋ, ಜಮ್ಮು ಮತ್ತು ಕಾಶ್ಮೀರ ವಿಸ್ಟಾ ಡೋಮ್, ದೆಹಲಿ ಬರೋಡಾ ಎಕ್ಸ್‍ಪ್ರೆಸ್‍ವೇ ಉದ್ಘಾಟನೆ, ಜಿ 20 ಶೃಂಗಸಭೆ, ಗ್ಲೋಬಲ್ ಮ್ಯಾರಿಟೈಮ್ ಶೃಂಗಸಭೆ, ಆಪರೇಷನ್ ಅಜಯ್ ಇಸ್ರೇಲ್‍ನಿಂದ ಜನರನ್ನು ಮರಳಿ ಕರೆತಂದಿತು, ಅದೇ 30 ದಿನಗಳಲ್ಲಿ ಏಷ್ಯನ್ ಗೇಮ್ಸ್‍ನಲ್ಲಿ ನಮ್ಮ ಕ್ರೀಡಾ ಪಟುಗಳು 100 ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ. ಮುಂಬೈನಲ್ಲಿ ಒಲಿಂಪಿಕ್ ಸಮಿತಿ ಸಭೆ ನಡೆಯಿತು. ಉತ್ತರಾಖಂಡದ ಆಸ್ಟ್ರೋ ಟರ್ಫ್. ಮತ್ತು ಗೋವಾ ರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸುತ್ತಿದೆ. ಸ್ವಲ್ಪ ಯೋಚಿಸಿ, ಕೇವಲ 30 ದಿನಗಳಲ್ಲಿ ಮಾಡಬೇಕಾದ ಕೆಲಸಗಳ ಪಟ್ಟಿ ತುಂಬಾ ದೊಡ್ಡದಾಗಿದೆ. ಇದೊಂದು ಸಣ್ಣ ಝಲಕ್ ಅಷ್ಟೇ ಎಂದರು.

Advertisement

ಗೋವಾ ರೆಡಿ…. ಗೋವಾ ರೆಡಿ…
ನಾನು ಈ ಮೂಲಕ 37 ನೇ ರಾಷ್ಟ್ರೀಯ ಕ್ರೀಡಾಕೂಟದ ಉದ್ಘಾಟನೆಯಲ್ಲಿ ಘೋಷಿಸುತ್ತೇನೆ. ಗೋವಾ ಹೈ ತಯ್ಯಾರ್… ಗೋವಾ ರೆಡಿ… ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಒಲಿಂಪಿಕ್ಸ್ ಆತಿಥ್ಯಕ್ಕೆ ಸಂಪರ್ಕ ಮತ್ತು ಮೂಲಸೌಕರ್ಯಗಳ ಅಗತ್ಯವಿದೆ. ಅದಕ್ಕೆ ಭಾರಿ ಸದ್ದು ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಈ ಬಾರಿ ಈ ಕ್ರೀಡಾಕೂಟಗಳನ್ನು ಆಯೋಜಿಸಲು ಗೋವಾಕ್ಕೆ ಅವಕಾಶ ಸಿಕ್ಕಿದೆ. ಗೋವಾ ಮಾಡಿರುವ ಸಿದ್ಧತೆ ಶ್ಲಾಘನೀಯ. ಇಲ್ಲಿನ ಮೂಲಸೌಕರ್ಯ ಹಲವು ದಶಕಗಳವರೆಗೆ ಗೋವಾಕ್ಕೆ ಉಪಯುಕ್ತವಾಗಲಿದೆ. ಗೋವಾ ಹಲವು ಹೊಸ ಆಟಗಾರರನ್ನು ಪಡೆಯಲಿದೆ. ಹಲವು ಕ್ರೀಡಾಕೂಟಗಳನ್ನು ಆಯೋಜಿಸಲು ಗೋವಾಕ್ಕೆ ಅನುಕೂಲವಾಗಲಿದೆ. ರಾಷ್ಟ್ರೀಯ ಕ್ರೀಡಾಕೂಟವು ಗೋವಾದ ಪ್ರವಾಸೋದ್ಯಮ ಮತ್ತು ಆರ್ಥಿಕತೆಗೆ ಪ್ರಯೋಜನವನ್ನು ನೀಡುತ್ತದೆ. ಗೋವಾ ತನ್ನ ಆಚರಣೆಗಳಿಗೆ ಹೆಸರುವಾಸಿಯಾಗಿದೆ. ಅಂತರಾಷ್ಟ್ರೀಯ ಸಮ್ಮೇಳನಗಳು, ಸಭೆಗಳಿಗೆ ಗೋವಾವನ್ನು ಪ್ರಚಾರ ಮಾಡುತ್ತಿದ್ದೇವೆ. ನಾವು ಗೋವಾದಲ್ಲಿ ಜಿ-20, ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಕಾರ್ಯಕ್ರಮಗಳನ್ನುನಡೆಸುತ್ತಿದ್ದೇವೆ. ಇದು ಗೋವಾಕ್ಕೆ ಹೆಮ್ಮೆಯ ಮೂಲ ಮಾತ್ರವಲ್ಲ, ಪ್ರವಾಸೋದ್ಯಮಕ್ಕೂ ಮುಖ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಕ್ರೀಡಾ ಕ್ಷೇತ್ರದ ಬಜೆಟ್ ಹೆಚ್ಚಿಸಿದ್ದಾರೆ. ಅವರು ಈ ಬಜೆಟ್ ಅನ್ನು ಮೂರು ಪಟ್ಟು ಅಂದರೆ 2254 ಕೋಟಿ ರೂ.ಗೆ ಹೆಚ್ಚಿಸಿದ್ದಾರೆ, ಅದರ ಫಲಿತಾಂಶಗಳು ಗೋಚರಿಸುತ್ತವೆ. ಟೋಕಿಯೊ ಒಲಿಂಪಿಕ್ಸ್, ವಿವಿಧ ವಿಶ್ವ ಚಾಂಪಿಯನ್‍ಶಿಪ್, ಏಷ್ಯನ್ ಚಾಂಪಿಯನ್‍ಶಿಪ್‍ಗಳಲ್ಲಿ ಭಾರತೀಯ ಕ್ರೀಡಾಪಟುಗಳು ಅನೇಕ ಪದಕಗಳನ್ನು ಗೆದ್ದಿದ್ದಾರೆ. ಗೋವಾದಲ್ಲಿ ನಡೆಯುತ್ತಿರುವ 37 ನೇಯ ರಾಷ್ಟ್ರೀಯ ಕ್ರೀಡಾ ಸ್ಫರ್ಧೆ ಇತಿಹಾಸ ರಚಿಸಲಿದೆ. ಇಲ್ಲಿ 43 ಬಗೆಯ ಕ್ರೀಡೆಗಳು ಹಾಗೂ 10,000 ಜನ ಕ್ರೀಡಾ ಪಟುಗಳು ಭಾಗವಹಿಸಲಿದ್ದಾರೆ. ಇದುವರೆಗಿನ ಅತ್ಯಂತ ದೊಡ್ಡ ಕ್ರೀಡಾ ಸ್ಫರ್ಧೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ ಎಂದರು.

ಸಮಾರಂಭಕ್ಕೆ ಸ್ವಾಗತ ಕೋರಿ ಪ್ರಸ್ತಾವಿಕ ಮಾತನಾಡಿದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್, ರಾಷ್ಟ್ರೀಯ ಕ್ರೀಡಾ ಸ್ಪರ್ಧೆಯನ್ನು ಆಯೋಜಿಸುವ ಅವಕಾಶವನ್ನು ಗೋವಾಗೆ ನೀಡಿದ್ದಕ್ಕಾಗಿ ಪ್ರಮೋದ್ ಸಾವಂತ್ ಪ್ರಧಾನಿಗಳಿಗೆ ಧನ್ಯವಾದ ಸಲ್ಲಿಸಿದರು. ಗೋವಾದ ಕನಸು ನನಸಾಗಿದೆ. ಗೋವಾದಲ್ಲಿ ಕ್ರೀಡಾ ಸಂಪ್ರದಾಯವಿದೆ. ಕ್ರೀಡಾ ಕೇಂದ್ರವಾಗಿ ಗೋವಾದ ಹೊಸ ಗುರುತನ್ನು ನಾವು ಬಯಸುತ್ತೇವೆ. ಕ್ರೀಡೆಗೆ ಸಂಬಂಧಿಸಿದ ಎಲ್ಲಾ ಮೂಲಸೌಕರ್ಯಗಳನ್ನು ನಿರ್ಮಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದರು.

ಉದ್ಘಾಟನಾ ಸಮಾರಂಭಕ್ಕೂ ಮುನ್ನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿನ್ನೆಲೆ ಗಾಯಕ ಸುಖ್ವಿಂದರ್ ಸಿಂಗ್ ಅವರು ತಮ್ಮ ಕೆಲವು ಹಾಡುಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಅವರು ಕರ್ ಹರ್ ಮೈದಾನ್ ಫತೇಹ್…, ಚಕ್ ದೇ ಇಂಡಿಯಾ…, ಮತ್ತು ಛೈಂಯಾ ಛೈಂಯಾ.. ಹಾಡುಗಳನ್ನು ಹಾಡಿದರು.

ಈ ಸಂದರ್ಭದಲ್ಲಿ ಗೋವಾದ ಮಲ್ಲಖಂಬದ ಆಟಗಾರರು ಹಾಗೂ ಕಲಾವಿದರು ಪ್ರದರ್ಶನ ನೀಡಿದರು, ಈ ಸಂದರ್ಭದ ಪ್ರದರ್ಶನದಲ್ಲಿ 37 ಡ್ರಮ್ಮರ್‍ಗಳು ಭಾಗವಹಿಸಿದ್ದರು. ಇದೇ ವೇಳೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷ, ಮಾಜಿ ಓಟಗಾರ್ತಿ ಹಾಗೂ ರಾಜ್ಯಸಭಾ ಸದಸ್ಯರಾದ ಪಿ. ಟಿ. ಉಷಾ ಪರಿಚಯಿಸಿದರು.ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೋವಾದ ಪ್ರಸಿದ್ಧ ಕುಣಬಿ ಶಾಲು ಮತ್ತು ಘುಮಟ ನೀಡಿ ವೇದಿಕೆಯ ಮೇಲೆ ಸ್ವಾಗತಿಸಿದರು. ಮಡಗಾಂವ ಫಾಟೋರ್ಡಾದ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಪ್ರಧಾನಿ ಮೋದಿ ಅವರು ಚಲಿಸುವ ರಥದಲ್ಲಿ ಇಡೀ ಸ್ಟೇಡಿಯಂ ಸುತ್ತುವ ಮೂಲಕ ಪ್ರೇಕ್ಷಕರಿಗೆ ಕೈಬಿಸಿ ಧನ್ಯವಾದ ಸಲ್ಲಿಸಿದರು. ಈ ಸಂದರ್ಭದಲ್ಲಿ ರಥದಲ್ಲಿ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ, ರಾಜ್ಯಸಭಾ ಸದಸ್ಯ ಸದಾನಂದ ಶೇಟ್ ತಾನಾವಡೆ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ, ಕೇಂದ್ರ ಸಚಿವ ಶ್ರೀಪಾದ ನಾಯ್ಕ, ಸೇರಿದಂತೆ ಸಂಸದರು, ಸಚಿವರು, ಶಾಸಕರು ಉಪಸ್ಥಿತರಿದ್ದರು.

43 ಸ್ಪರ್ಧೆ
ಗೋವಾದಲ್ಲಿ ನಡೆಯುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 43 ಸ್ಪರ್ಧೆಗಳಿದ್ದು, 10 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಡಿಡಿ ನ್ಪೋರ್ಟ್ಸ್ ಚಾನೆಲ್‌ನಲ್ಲಿ ನೇರ ಪ್ರಸಾರ ಮೂಡಿಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next