Advertisement

22 ಕೆರೆ ತುಂಬಿಸುವ ಏತ ನೀರಾವರಿ ಯೋಜನೆಗೆ ಚಾಲನೆ

09:17 PM Feb 28, 2020 | Lakshmi GovindaRaj |

ಮೈಸೂರು: ಕೆಆರ್‌ಎಸ್‌ ಹಿನ್ನೀರಿನಿಂದ ಮೈಸೂರು ತಾಲೂಕಿನ ಇಲವಾಲ ಹೋಬಳಿಯ 23 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ಆನಂದೂರು ಗ್ರಾಮದ ಬಳಿ ಏತ ನೀರಾವರಿ ಯೋಜನೆ ನಿರ್ಮಾಣಕ್ಕೆ ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

Advertisement

ಮೈಸೂರು ತಾಲೂಕಿನ ಈರಪ್ಪನಕೊಪ್ಪಲು, ನಾಗವಾಲ, ಬೊಮ್ಮನಹಳ್ಳಿ, ಹುಯಿಲಾಳು, ಮರಟಿಕ್ಯಾತನಹಳ್ಳಿ, ದಾಸನಕೊಪ್ಪಲು ಮತ್ತು ಲಿಂಗಾಂಬುದಿ ಗ್ರಾಮಗಳ 16 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು 50 ಕೋಟಿ ರೂ. ವೆಚ್ಚದಲ್ಲಿ ಹಾಗೂ ಮೈದನಹಳ್ಳಿ, ಮೇಗಳಾಪುರ, ಇಲವಾಲ, ಗುಂಗ್ರಾಲ್‌ ಛತ್ರ, ಯಲಚನಹಳ್ಳಿ ಮತ್ತು ಚಿಕ್ಕನಹಳ್ಳಿ ಗ್ರಾಮಗಳ 7 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು 15 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ.

ಸಚಿವ ವಿ.ಸೋಮಣ್ಣ ಮಾತನಾಡಿ, ಬಿಜೆಪಿ ಸರ್ಕಾರ ನಿಂತ ನೀರಲ್ಲ, ಇದು ಹರಿಯುವ ನೀರು. ಹರಿವ ನೀರನ್ನು ಸಮರ್ಪಕವಾಗಿ ಎಲ್ಲರಿಗೂ ಹಂಚುವ ಕೆಲಸವನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಏತ ನೀರಾವರಿ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿದೆ ಎಂದು ಹೇಳಿದರು.

ಸುಮಾರು 78 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಕೆಆರ್‌ಎಸ್‌ ಪಕ್ಕದಲ್ಲೇ ಇದ್ದರೂ ಈ ಗ್ರಾಮಗಳಿಗೆ ನೀರಿನ ವ್ಯವಸ್ಥೆ ಇಲ್ಲಿವರೆಗೂ ಲಭ್ಯವಾಗದಿರುವುದು ದುರದೃಷ್ಟಕರ ಎಂದು ಅವರು ಹೇಳಿದರು. ಯಾವುದೇ ಅಭಿವೃದ್ಧಿ ಕಾರ್ಯಕ್ರಮದಲ್ಲಿ ರಾಜಕೀಯ ಬೇಡ ಎನ್ನುವುದು ನಮ್ಮ ಮುಖ್ಯಮಂತ್ರಿಗಳ ಮಾತಾಗಿದೆ. ಹೀಗಾಗಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಕೈ ಹಾಕಿರುವ ಜಿ.ಟಿ.ದೇವೇಗೌಡ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಪ್ರಧಾನಮಂತ್ರಿ ಅವಾಸ್‌ ಯೋಜನೆಯಲ್ಲಿ ಗ್ರಾಮೀಣ ಭಾಗದ ಬಡ ಜನರಿಗೆ ಸೇರಬೇಕಾದ ಹಣ ಸೇರುತ್ತಿಲ್ಲ. ಬದಲಿಗೆ ಶ್ರೀಮಂತರೆ ಈ ಯೋಜನೆಗಳನ್ನು ಉಪಯೋಗಿಸಿಕೊಳ್ಳುತ್ತಿದ್ದರು. ಈ ಬಗ್ಗೆ ನನ್ನ ಗಮನಕ್ಕೆ ಬಂದಾಗ ಇದರ ಸಮಸ್ಯೆ ಬಗೆಹರಿಸಿದ್ದೇನೆ. ಬಡವರಿಗೆ ಸೇರಬೇಕಾದ ಎಲ್ಲಾ ಫ‌ಲಗಳನ್ನು ತಲುಪಿಸುತ್ತೇದ್ದೇನೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಅನುಭವ ನಮ್ಮ ಮೇಲೆ ಸಾಕಷ್ಟು ಪ್ರಭಾವ ಬೀರಿದೆ ಎಂದು ತಿಳಿಸಿದರು.

Advertisement

ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ, ಸಂಸದ ಪ್ರತಾಪ ಸಿಂಹ, ಜಿಪಂ ಸದಸ್ಯರಾದ ಚಂದ್ರಕಲಾ, ಅರುಣ್‌ಕುಮಾರ್‌, ಎಂಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಜಿ.ಡಿ.ಹರೀಶ್‌ ಗೌಡ, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌, ಎಸ್‌.ಪಿ ರಿಷ್ಯಂತ್‌ ಮತ್ತಿತರರು ಉಪಸ್ಥಿತರಿದ್ದರು.

ನಗರ-ಪಟ್ಟಣ ಸೇರಿರುವ ಜನರು ಹಳ್ಳಿಗೆ ಬನ್ನಿ: ಕೆಟ್ಟು ಪಟ್ಟಣ ಸೇರು ಎಂಬ ಗಾದೆಯಂತೆ ಗ್ರಾಮೀಣ ಭಾಗದ ಜನರು ನಗರಗಳತ್ತ ಮುಖ ಮಾಡುತ್ತಿದ್ದಾರೆ. ಎಲ್ಲಿಯವರೆಗೆ ಹಳ್ಳಿ ಜನ ಪಟ್ಟಣಕ್ಕೆ ಬರುವುದನ್ನು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ನಾವು ಮಾಡುವ ಕಾರ್ಯಕ್ರಮಗಳೆಲ್ಲವು ಟೊಳ್ಳು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಅಂತರ್ಜಲ ಅಭಿವೃದ್ಧಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಹೀಗಾಗಿ ಈ ಏತ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ರವಾಹದಿಂದ ಬಂದ ನೀರನ್ನು ಆಚೆಗೆ ಹೋಗಲು ಬಿಡದೆ ವೈಜ್ಞಾನಿಕವಾಗಿ ಶೇಖರಣೆ ಮಾಡಿದರೆ ನಮ್ಮ ರೈತರಿಗೆ ಸಹಕಾರವಾಗುತ್ತದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next