ಕೋಲಾರ: ಕೆ.ಸಿ.ವ್ಯಾಲಿ ನೀರನ್ನು ಜಿಲ್ಲೆಯ 126 ಕೆರೆಗಳಿಗೆ ಹರಿಸಿದ ನಂತರ ಇತರೆ ಕೆರೆಗಳಿಗೆ ಹರಿಸುವ ಬಗ್ಗೆ ಯೋಜನೆ ರೂಪಿಸ ಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದರು. ನಗರದ ಹೊರವಲಯದ ಕೋಡಿ ಕಣ್ಣೂರು ಕೆರೆ ಸ್ವಚ್ಛಗೊಳಿಸುವ ಕಾರ್ಯಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿ, ಕೋಲಾರ ಜಿಲ್ಲೆಗೆ ಕೆ.ಸಿ.ವ್ಯಾಲಿಯಿಂದ 400 ಎಂಎಲ್‌ಡಿ ನೀರು ದೊರೆತರೆ ಇನ್ನೂ ಬೇಗ ಕೆರೆಗಳು ತುಂಬಲಿದ್ದು, ಇದರ ಬಗ್ಗೆ ಮುಖ್ಯ ಮಂತ್ರಿಗಳೊಂದಿಗೆ ಚರ್ಚೆ ಮಾಡಿರುವುದಾಗಿ ಹೇಳಿದರು.
ಕೆರೆಗಳನ್ನು ಸ್ವಚ್ಛಗೊಳಿಸಿದ ನಂತರ ಪ್ರವಾ ಸೋದ್ಯಮದಕ್ಕೆ ಒತ್ತು ನೀಡುವುದರೊಂದಿಗೆ ಕೆರೆ ಅಭಿವೃದ್ಧಿ ಪಡಿಸಲಾಗುತ್ತದೆ. ವರ್ಷದ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿ ಹಾಗೂ ಕೊರೊನಾ ನಿಯಂತ್ರಣದ ವಿಚಾರದಲ್ಲಿ ಜಿಲ್ಲೆಯ ಜನತೆ ತಮಗೆ ಉತ್ತಮ ಬೆಂಬಲ ನೀಡಿದ್ದು, ಮುಂದೆಯೂ ಇದೇ ರೀತಿಯ ಬೆಂಬಲ ನಿರೀಕ್ಷಿಸುವುದಾಗಿ ತಿಳಿಸಿದರು.
ನಗರದ ಕೋಲಾರಮ್ಮ ಕೆರೆ ಸ್ವಚ್ಛಗೊಳಿಸಿದ ರೀತಿಯಲ್ಲೇ ಕೋಡಿ ಕಣ್ಣೂರಿನ ಕೆರೆ ಸ್ವಚ್ಛ ಗೊಳಿಸಿ ಅಭಿವೃದ್ಧಿ ಪಡಿಸಲಾಗುವುದೆಂದು ಸಂಸದ ಎಸ್. ಮುನಿಸ್ವಾಮಿ ತಿಳಿಸಿದರು. ಎಸಿ ಸೋಮಶೇಖರ್, ನಗರಸಭೆ ಆಯುಕ್ತ ಶ್ರೀಕಾಂತ್, ಕಂದಾಯ ಅಧಿಕಾರಿ ಚಂದ್ರು, ಸಣ್ಣ ನೀರಾವರಿ ಇಲಾಖೆಯ ಅಧಿ ಕಾರಿಗಳು, ಬಿಜೆಪಿ ಮುಖಂಡರು, ನಗರಸಭೆ ಸದಸ್ಯರು ಉಪಸ್ಥಿತರಿದ್ದರು.
ಬ್ಲಾಕ್ಮೇಲ್‌ಗೆ ದಾಖಲೆ ನೀಡಿದರೆ ರಾಜೀನಾಮೆ: ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡಿ ಅವರಿಂದ ಹಣ ಪಡೆಯುತ್ತಿರುವ ಬಗ್ಗೆ ದಾಖಲೆ ಸಾಬೀತು ಪಡಿಸಿದರೆ ತಕ್ಷಣವೇ ತಾವು ರಾಜೀನಾಮೆ ನೀಡುವುದಾಗಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು. ಕಳೆದ ಕೆಲವು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾಲೂರು ಶಾಸಕ ಕೆ.ವೈ.ನಂಜೇಗೌಡರು ಸಂಸದರ ಬಗ್ಗೆ ಮಾತನಾಡಿ, ಗಾಳಿಯಲ್ಲಿ ಬಂದವರು ಗಾಳಿಯಲ್ಲಿ ತೇಲಿ ಹೋಗ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಕೆಲವರ ಕಾಮಾಲೆ ಕಣ್ಣಿಗೆ ಎಲ್ಲವೂ ಹಳದಿಯಾಗಿ ಕಾಣುವಂತೆ ತಮ್ಮ ತಪ್ಪುಗಳನ್ನು ಮುಚ್ಚಿ ಕೊಳ್ಳಲು ಇತರರನ್ನು ಅದೇ ರೀತಿ ನೋಡುವುದು ಸರಿಯೇ ಎಂದು ಪ್ರಶ್ನಿಸಿದರು. ಬಾಯಿ ಚಪಲಕ್ಕೆ ಏನೋ ಮಾತಾಡಬಾರದು, ನಾನು ಕೇವಲ ಅಭಿವೃದ್ಧಿ ಪರ ಕೆಲಸ ಮಾಡುತ್ತೇನೆ, ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಸಂಸದ ಮುನಿಸ್ವಾಮಿ ಟಾಂಗ್ ನೀಡಿದರು. ಅಲ್ಲದೆ, ಶಾಸಕ ನಂಜೇಗೌಡ ರಾಜೀನಾಮೆ ನೀಡಲಿ, ನಾನು ರಾಜೀನಾಮೆ ನೀಡುತ್ತೇನೆ, ಇಬ್ಬರೂ ಚುನಾವಣೆ ಎದುರಿಸೋಣ, ಯಾರು ಗೆಲ್ಲುತ್ತಾರೆ ನೋಡೋಣ ಎಂದು ಸಂಸದರು ಚಾಲೆಂಜ್ ಮಾಡಿದರು.