Advertisement

‘ಪ್ರೋಗ್ರೆಸ್‌’ಯೋಜನೆಗೆ ಚಾಲನೆ

06:14 PM Jun 21, 2022 | Team Udayavani |

ಚಾಮರಾಜನಗರ: ಜಿಲ್ಲೆಯ ಮಾರ್ಟಳ್ಳಿ ಹಾಗೂ ರಾಮಾಪುರ ಗ್ರಾಮದ 400 ಮಂದಿ ಫ‌ಲಾನುಭವಿಗಳಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಇಂದುಶ್ರೀ ಫೌಂಡೇಶನ್‌ ಹಾಗೂ ಬಿಎನ್‌ಪಿ ಪರಿಬಾಸ್‌ ಸಹಭಾಗಿತ್ವದಲ್ಲಿ ಗ್ರಾಮೀಣ ಬುಡಕಟ್ಟು ಜನರಿಗೆ ಉದ್ಯಮಶೀಲತೆ ಕಲ್ಪಿಸುವ ಪ್ರೋಗ್ರೆಸ್‌ ಯೋಜನೆಗೆ ಮಾರ್ಟಳ್ಳಿಯಲ್ಲಿ ಚಾಲನೆ ನೀಡಲಾಯಿತು.

Advertisement

ಬಿದಿರು ಉತ್ಪನ್ನಗಳನ್ನು ತಯಾರಿಸುವ ಜಿಲ್ಲೆಯ ಮಾರ್ಟಳ್ಳಿ ಮತ್ತು ರಾಮಾಪುರ ಗ್ರಾಮದ 400 ಫ‌ಲಾನುಭವಿಗಳಿಗೆ ಪ್ರಯೋಜನವಾಗಲಿದ್ದು, ಒಟ್ಟಾರೆ 3200 ಜನರಿಗೆ ಪರೋಕ್ಷವಾಗಿ ಅನುಕೂಲವಾಗಲಿದೆ.

ಈ ಯೋಜನೆಯು ರಾಜ್ಯದ ಗ್ರಾಮೀಣ ಮಹಿಳೆಯರಿಗೆ ಹಸಿರು ಮತ್ತು ಸುಸ್ಥಿರವಾದ ಜೀವನೋಪಾಯವನ್ನು ಸೃಷ್ಟಿಸುವ ಮೂಲಕ ಮೈಲಿಗಲ್ಲು ಸಾಧಿಸಲು ಮತ್ತು ಗ್ರಾಮೀಣ ಬುಡಕಟ್ಟು ಸಮುದಾಯಗಳಲ್ಲಿ ಸಾಮಾಜಿಕ ವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರು, ಯುವಜನರಿಗೆ ಆರ್ಥಿಕ ಸ್ವಾವಲಂಬಿಯಾಗುವ ಅವಕಾಶವನ್ನು ಒದಗಿಸಿಕೊಡುತ್ತದೆ.

ಕಳೆದ ಹಲವಾರು ವರ್ಷಗಳಿಂದ ಜಿಲ್ಲೆಯಲ್ಲಿ ದೊರೆಯುವ ಬಿದಿರು ಮೌಲ್ಯ ಜಾಲದಲ್ಲಿ ಲಭ್ಯವಾಗುವ ನೈಸರ್ಗಿಕ ಸಂಪನ್ಮೂಲಗಳನ್ನು ಸುಸ್ಥಿರವಾಗಿ ಬಳಸಿಕೊಂಡು ಮಹಿಳೆಯರ ಆರ್ಥಿಕ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಂದುಶ್ರೀ ಸಂಸ್ಥೆ ಕಾರ್ಯನಿರತವಾಗಿದೆ. ಸುಸ್ಥಿರತೆಯನ್ನು ಸಾಧಿಸುವ ನಿಟ್ಟಿನಲ್ಲಿ ಬಿಎನ್‌ಪಿ ಪರಿಬಾಸ್‌ ತನ್ನದೇ ಆದ ತಣ್ತೀಗಳನ್ನು ಅನುಷ್ಠಾನಕ್ಕೆ ತರುತ್ತಿದೆ.ಬಿಎನ್‌ಪಿ ಪರಿಬಾಸ್‌ನ ಸಿಎಸ್‌ಆರ್‌ ಮಿಷನ್‌ನ ಎರಡು ಪ್ರಮುಖ ಕ್ಷೇತ್ರಗಳಲ್ಲಿ ಇಂದುಶ್ರೀ ಕಾರ್ಯನಿರತವಾಗಿದೆ.

ಮೊದಲನೆಯದು ಸಾಮಾಜಿಕ ಮತ್ತು ವೃತ್ತಿಪರ ಒಳಗೊಳ್ಳುವಿಕೆಯನ್ನು ಉತ್ತೇಜಿಸುವುದು ಮತ್ತು ಎರಡನೆಯದು ಮಹಿಳೆಯರಿಗೆ ಆರ್ಥಿಕ ಸಾಕ್ಷರತೆ ಮತ್ತು ಕೌಶಲ್ಯ ಕಾರ್ಯಕ್ರಮಗಳನ್ನು ನೀಡುವುದು. ಎರಡನೇ ಕಾರ್ಯಕ್ರಮವು ಹವಾಮಾನ ಬದಲಾವಣೆಯ ಸವಾಲು ಮತ್ತು ಅದಕ್ಕೆ ಸಂಬಂಧಿತ ಪರಿಸರ ಸಮಸ್ಯೆಗಳತ್ತ ಗಮನಹರಿಸುತ್ತದೆ.

Advertisement

ಈ ಬಗ್ಗೆ ಮಾತನಾಡಿದ ಬಿಎನ್‌ಪಿ ಪರಿಬಾಸ್‌ ಇಂಡಿಯಾದ ಪ್ರಾದೇಶಿಕ ಮುಖ್ಯಸ್ಥೆ ಅಯ್ಮಾರ್‌ ಡೆಯಿ ಲಿಯೆಡೆಕೆರ್ಕೆ ಬ್ಯೂಫೋರ್ಟ್‌, ನಮ್ಮ ಸಿಎಸ್‌ಆರ್‌ ನೀತಿಯು ಆರ್ಥಿಕ ಪ್ರಗತಿ ಆದ್ಯತೆಗಳು, ದುರ್ಬಲ ವರ್ಗದವರ ಸೇರ್ಪಡೆ ಮತ್ತು ಸಂಪನ್ಮೂಲಗಳನ್ನು ರಕ್ಷಿಸುವುದಕ್ಕೆ ಆದ್ಯತೆ ನೀಡುತ್ತದೆ. ನಾವು ಎನ್‌ಜಿಒ ಆಗಿರುವ ಇಂದುಶ್ರೀ ಸಂಸ್ಥೆ ಜೊತೆ ಸೇರಿ ಸಮುದಾಯದಲ್ಲಿ ಸುಸ್ಥಿರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತಿದ್ದೇವೆ ಎಂದರು.

ಪರಿಸರ ವ್ಯವಸ್ಥೆ ರಚಿಸುವುದು ಮುಖ್ಯ: ಬಿಎನ್‌ಪಿ ಪರಿಬಾಸ್‌ ಇಂಡಿಯಾದ ಸಿಎಸ್‌ ಆರ್‌ ಸಂವಹನ ಮುಖ್ಯಸ್ಥೆ ಮನಿಶಾ ಖೋಸ್ಲಾ ಸಿನ್ಹಾ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ಹಿಂದುಳಿದಿರುವ ಮಹಿಳೆಯರಿಗೆ ಸುಸ್ಥಿರ ಜೀವನೋಪಾಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಪರಿಸರ ವ್ಯವಸ್ಥೆಯನ್ನು ರಚಿಸುವುದು ಮುಖ್ಯವಾಗಿದೆ. ಇಂದುಶ್ರೀಯಂತಹ ಎನ್‌ ಜಿಒಗಳು ಹೆಚ್ಚಿನ ಜವಾಬ್ದಾರಿಯನ್ನು ವಹಿಸುವ ಮೂಲಕ ಇಂತಹ ಮಹಿಳೆಯರಿಗೆ ಸಮಗ್ರ ಬೆಂಬಲವನ್ನು ನೀಡುತ್ತವೆ. ಇದು ಮಹಿಳೆ ಯರಿಗೆ ವೈಯಕ್ತಿಕವಾಗಿ, ಕುಟುಂಬಗಳು ಮತ್ತು ಸಮುದಾಯಗಳಿಗೆ ಸಾಮೂಹಿಕವಾಗಿ ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು.

400 ಮಹಿಳಾ ಉತ್ಪಾದಕರಿಗೆ ಅನುಕೂಲ: ಇಂದುಶ್ರೀ ಫೌಂಡೇಶನ್‌ನ ಸಂವಹನ ನಿರ್ದೇಶಕಿ ಅಕಿಲಾ ಲಿಯಾನ್‌ ಮಾತನಾಡಿ, ಬಿಎನ್‌ಪಿ ಪರಿಬಾಸ್‌ ಜೊತೆಗಿನ ಇಂದುಶ್ರೀ ಫೌಂಡೇಶನ್‌ನ ಪಾಲುದಾರಿಕೆಯು ಹಸಿರು ಮತ್ತು ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಲು ಪ್ರಮುಖವಾಗಿದೆ. ಇದು ಮಾರ್ಟಳ್ಳಿ ಮತ್ತು ರಾಮಾಪುರ ಪ್ರದೇಶದ ಬಿದಿರು ಮೌಲ್ಯ ಸರಪಳಿಯಲ್ಲಿ ನೇರವಾಗಿ 400 ಮಹಿಳಾ ಉತ್ಪಾದಕರಿಗೆ ಅನುಕೂಲಗಳನ್ನು ಮಾಡಿಕೊಡುತ್ತದೆ. ಈ ಯೋಜನೆಯು ನಮ್ಮ ಮಹಿಳಾ ಉತ್ಪಾದಕರಿಗೆ ಅವರ ಉತ್ಪನ್ನ ತಯಾರಿಕೆ ಕೌಶಲ್ಯಗಳನ್ನು ಬೆಂಬಲಿಸುವ ಮೂಲಕ ಗಮನಾರ್ಹವಾದ ಬದಲಾವಣೆ ಮತ್ತು ಅವರನ್ನು ಸಬಲರನ್ನಾಗಿ ಮಾಡುವ ನಿಟ್ಟಿನಲ್ಲಿ ಸಹಾಯ ಮಾಡುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next