Advertisement

ಸ್ವ-ಉದ್ಯೋಗಕ್ಕೆ ಯುವಕರು ಮುಂದಾಗಬೇಕು: ಮಠಂದೂರು

12:50 PM Jul 20, 2018 | |

ಪುತ್ತೂರು : ನಮ್ಮ ನಮ್ಮ ಊರುಗಳಲ್ಲೇ ಸ್ವಂತ ನೆಲೆಯಿಂದಲೂ ಉದ್ಯೋಗವನ್ನು ಸೃಜಿಸುವ ತನ್ಮೂಲಕ ಒಳ್ಳೆಯ ಬದುಕನ್ನು ಕಟ್ಟಿಕೊಳ್ಳುವ ಅವಕಾಶ ಈಗಿನ ಯುವ ಸಮುದಾಯಕ್ಕಿದೆ. ಆದರೆ ಪ್ರತಿಯೊಬ್ಬನೂ ತನ್ನೊಳಗಿನ ಶಕ್ತಿಯನ್ನು ಅರಿಯುವುದು ಅತೀ ಅಗತ್ಯ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾರ್ಗದರ್ಶನದಲ್ಲಿ ವಿವೇಕಾನಂದ ಉದ್ಯೋಗ ಮಾಹಿತಿ ಮತ್ತು ತರಬೇತಿ ಕೇಂದ್ರವು ವಿವೇಕಾನಂದ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ ವಿವೇಕ ಉದ್ಯೋಗ ಮೇಳವನ್ನು ಅವರು ಉದ್ಘಾಟಿಸಿದರು.

Advertisement

ವ್ಯಕ್ತಿಯೊಳಗೆ ಛಲ ಹಾಗೂ ಉತ್ಕಟ ಬಯಕೆ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಮುಂಬೈಯ ಸ್ಟಾರ್‌ ಹೋಟೇಲೊಂದರ ಮಾಲಿಕ ಕೇವಲ ಹತ್ತನೆಯ ತರಗತಿ ಓದಿದ್ದಾರೆ. ಆದರೆ, ಅಲ್ಲಿ ಕೆಲಸಕ್ಕಿರುವವರು ಹೊಟೇಲ್‌ ಮ್ಯಾನೇಜ್‌ ಮೆಂಟ್‌ ಸ್ನಾತಕೋತ್ತರ ಪದವೀಧರರು. ನಾವೇನು ಓದಿದ್ದೇವೆ ಅನ್ನುವುದಕ್ಕಿಂತ ನಮ್ಮೊಳಗಿನ ಕನಸುಗಳೇನು ಅನ್ನುವುದು ಬಹಳ ಮುಖ್ಯ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಬಸವ ರಾಜ್‌ಎಸ್‌. ಜವಳಿ ಮಾತನಾಡಿ, ನಿಜವಾಗಿ ಉದ್ಯೋಗಿಗಳ ಕೈಹಿಡಿಯುವವರು ಸಣ್ಣ ಕೈಗಾರಿಕೋದ್ಯಮಿಗಳೇ ಹೊರತು ದೊಡ್ಡವರಲ್ಲ. ಉದ್ಯೋಗ ಆರಂಭಿ ಸುವಾಗ ಹೊಸಬರಿಗೆ ಅವಕಾಶ ಕಲ್ಪಿಸಿಕೊಡುತ್ತಿರುವವರು ಸಣ್ಣ ಉದ್ಯೋಗದಾತರು. ಆದರೆ ಒಮ್ಮೆ ಕೆಲಸ ಕಲಿತ ಅನಂತರ ಉದ್ಯೋಗಿಗಳು ದೊಡ್ಡ ದೊಡ್ಡ
ಕೈಗಾರಿಕೆಗಳೆಡೆಗೆ ಮನ ಮಾಡುವುದು ಸಮಸ್ಯೆಯಾಗಿ ಪರಿಣಮಿಸುತ್ತಿದೆ ಎಂದರು. 

ಸ್ವಾಭಿಮಾನದ ಬದುಕು
ಅಧ್ಯಕ್ಷತೆ ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್‌ ಕಲ್ಲಡ್ಕ ಮಾತನಾಡಿ, ಪ್ರತಿಯೊಬ್ಬನೂ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು. ಭಾರತದಲ್ಲಿ ನೂತನ ಉದ್ದಿಮೆ ಸ್ಥಾಪಿಸುವುದಕ್ಕೆ ಎಷ್ಟು ಅವಕಾಶವಿದೆಯೋ ಅಷ್ಟೇ ಅವಕಾಶ ಒಬ್ಬ ಉದ್ಯೋಗಿಯಾಗಿ ಬೆಳೆಯುವುದಕ್ಕೂ ಇದೆ. ತಾನು ಕೆಲಸ ಮಾಡುತ್ತಿರುವ ಸಂಸ್ಥೆಯಲ್ಲಿ ಇನ್ನಷ್ಟು ಹೊಸತನ ತರುವ ದೃಷ್ಟಿಯಿಂದ ಹೇಗೆ ಕಾರ್ಯ ನಿರ್ವಹಿಸಬಹುದೆಂಬುದನ್ನು ಉದ್ಯೋಗಿಗಳು ಯೋಚಿಸಬೇಕು ಎಂದು ಸಲಹೆ ನೀಡಿದರು.

ಒಡಂಬಡಿಕೆಗೆ ಸಹಿ
ವಿವೇಕಾನಂದ ಉದ್ಯೋಗ ಮಾಹಿತಿ ಮತ್ತು ತರಬೇತಿ ಕೇಂದ್ರದ ಕುರಿತ ಕಿರು ಪುಸ್ತಿಕೆಯನ್ನು ಲೋಕಾರ್ಪಣೆಗೊಳಿಸಲಾಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಸಂಘದ ನಡುವಿನ ಒಡಂಬಡಿಕೆಗೆ ಎರಡೂ ಸಂಸ್ಥೆಗಳ ಕಾರ್ಯದರ್ಶಿಗಳು ಸಹಿ ಹಾಕಿದರು. ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ. ಎಂ. ಕೃಷ್ಣ ಭಟ್‌, ಸಣ್ಣ ಕೈಗಾರಿಕೆ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್‌ ಕುಲಕರ್ಣಿ ಉಪಸ್ಥಿತರಿದ್ದರು.

ವಿವೇಕಾನಂದ ಉದ್ಯೋಗ ಮತ್ತು ಮಾಹಿತಿ ಕೇಂದ್ರದ ಕಾರ್ಯದರ್ಶಿ ರಾಜಗೋಪಾಲ್‌ ಸ್ವಾಗತಿಸಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ವಿಶೇಷ ಅಧಿಕಾರಿ ವೆಂಕಟೇಶ್‌ ಪ್ರಸ್ತಾವನೆಗೈದರು. ವಿವೇಕಾನಂದ ಎಂಜಿನಿಯರಿಂಗ್‌ ಕಾಲೇಜಿನ ಅಧ್ಯಕ್ಷ ಸತೀಶ್‌ರಾವ್‌ ವಂದಿಸಿದರು. ವಿವೇಕಾನಂದ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ| ರೋಹಿಣಾಕ್ಷ ಶಿರ್ಲಾಲು ಕಾರ್ಯಕ್ರಮ ನಿರ್ವಹಿಸಿದರು.

Advertisement

ಹೊಂದಾಣಿಕೆ ಕೊರತೆ
ಒಂದೆಡೆ ಓದಿದವರಿಗೆ ಉದ್ಯೋಗ ದೊರಕುತ್ತಿಲ್ಲ. ಇನ್ನೊಂದೆಡೆ ಉದ್ದಿಮೆದಾರರಿಗೆ ಉದ್ಯೋಗಿಗಳು ಸಿಗುತ್ತಿಲ್ಲ ಎನ್ನುವ ವಿಶಿಷ್ಟ ಸಂಗತಿಗೆ ನಾವು ಸಾಕ್ಷಿಯಾಗುತ್ತಿದ್ದೇವೆ. ಇದನ್ನು ಕಾಣುವಾಗ ಎಲ್ಲೋ ಸಣ್ಣ ಹೊಂದಾಣಿಕೆಯ ಕೊರತೆ ಕಾಣುತ್ತಿದೆ. ಇದನ್ನು ಸರಿಪಡಿಸಿದಾಗ ವ್ಯವಸ್ಥೆ ಸುಸೂತ್ರವಾಗಿ ಮುಂದುವರೆಯುವುದಕ್ಕೆ ಸಾಧ್ಯ ಎಂದು ಬಸವರಾಜ್‌ಎಸ್‌. ಜವಳಿ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next