ಬೆಂಗಳೂರು: ಬೂತ್ ಮಟ್ಟದಲ್ಲಿ ಮನೆ-ಮನೆ ಪ್ರಚಾರಕ್ಕಾಗಿ “ನಮೋ ಬೂತ್ ವಾರಿಯರ್ಸ್’ ಅಭಿಯಾನಕ್ಕೆ ಭಾನುವಾರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಚಾಲನೆ ನೀಡಿದರು. ಈ ಅಭಿಯಾನದಡಿ ಬೂತ್ ಮಟ್ಟದಲ್ಲಿ ಸ್ವಯಂಪ್ರೇರಿತವಾಗಿ ಸೋಮವಾರದಿಂದ ತಲಾ ಒಬ್ಬ ಸ್ವಯಂಸೇವಕ ಕನಿಷ್ಠ ಐವತ್ತು ಮನೆಗಳಿಗೆ ಭೇಟಿ ನೀಡಿ, ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ.
ನಂತರ “ನಮೋ ಭಾರತ್ ವಾಲೆಂಟರೀಸ್ ಮೀಟ್’ ಶೀರ್ಷಿಕೆಯಡಿ ಗಿರಿನಗರದಲ್ಲಿ ಸೇರಿದ್ದ ನೂರಾರು ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿದ ತೇಜಸ್ವಿ ಸೂರ್ಯ, ಸಾರ್ವತ್ರಿಕ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿಯಾಗಿ ಮರು ಆಯ್ಕೆ ಮಾಡುವ ಉದ್ದೇಶದಿಂದ ಸ್ವಯಂಪ್ರೇರಿತವಾಗಿ ಪ್ರಚಾರ ಕಾರ್ಯಕ್ಕೆ ತೊಡಗಿರುವ ಸ್ವಯಂಸೇವಕರ ಜತೆ
ಚರ್ಚೆ ನಡೆಸಿದರು.
ಮೋದಿಯವರು ಅಧಿಕಾರವಹಿಸಿಕೊಂಡ ದಿನದಂದು ನೀಡಿದ ಭರವಸೆಗಳನ್ನು ಈಡೇರಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ನಾವು ಭಾರತೀಯರು ಎಂದು ಸ್ವಾಭಿಮಾನ ಮತ್ತು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಮಾಡಿದ್ದಾರೆ ಎಂದರು. ಸಮಯ ತುಂಬಾ ಕಡಿಮೆ ಇರುವುದರಿಂದ ಕೊನೆಯ ಮತದಾರರನ್ನು ತಲುಪಲು ಅವಿರತವಾಗಿ ಶ್ರಮಿಸಬೇಕು ಎಂದು ಹೇಳಿದರು.