ಪಡುಬಿದ್ರಿ: ಹೆಜಮಾಡಿಯ ಒಳ ರಸ್ತೆಯಲ್ಲಿ ತಿಂಗಳೊಂದರ ಹಿಂದೆ ಕುಸಿದಿದ್ದ ಬ್ರಿಟಿಷ್ ಕಾಲದ ಕಿರು ಸೇತುವೆಯನ್ನು ಪ್ರಕೃತಿ ವಿಕೋಪ ನಿಧಿಯಿಂದ ನಿರ್ಮಿಸಲಾಗಿದ್ದು ರವಿವಾರ ಶಾಸಕ ವಿನಯಕುಮಾರ್ ಸೊರಕೆ ಉದ್ಘಾಟಿಸಿ, ಸಂಚಾರಕ್ಕೆ ಮುಕ್ತಗೊಳಿಸಿದರು.
ಹೆಜಮಾಡಿ ಟೋಲ್ ತಪ್ಪಿಸಿ ನೂರಾರು ಘನ ವಾಹನಗಳು ಹೆಜಮಾಡಿಯ ಹಳೆ ಎಂಬಿಸಿ ಒಳ ರಸ್ತೆಯಲ್ಲಿ ನಿರಂತರ ಚಲಿಸಿದ ಪರಿಣಾಮ ಬ್ರಿಟಿಷ್ ಕಾಲದಲ್ಲಿ ಕಟ್ಟಲಾಗಿದ್ದ ಕಿರು ಸೇತುವೆ ಕುಸಿದು ಸಾರ್ವಜನಿಕ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಈ ಕುರಿತು ತ್ವರಿತವಾಗಿ ಸ್ಪಂದಿಸಿದ ಶಾಸಕ ವಿನಯ ಕುಮಾರ್ ಸೊರಕೆ ಅವರು ಘಟನೆ ನಡೆದ ದಿನದಂದೇ ಎಂಜಿನಿಯರ್ ಗಳನ್ನು ಕರೆಸಿ ತ್ವರಿತ ಸೇತುವೆ ನಿರ್ಮಾಣಕ್ಕೆ ಸೂಚಿಸಿದ್ದರು. ಅದರಂತೆ ಸುಮಾರು 10 ಲಕ್ಷ ರೂ. ವೆಚ್ಚದ ಸೇತುವೆಯನ್ನು ನಿರ್ಮಿಸಲಾಗಿದೆ.
ಈ ಸಂದರ್ಭ ಮಾತನಾಡಿದ ಶಾಸಕ ಸೊರಕೆ ಅವರು, ಹೆಜಮಾಡಿಯ ಒಳರಸ್ತೆಯಲ್ಲಿ ಟೋಲ್ ತಪ್ಪಿಸಿ ಬರುವ ಘನ ವಾಹನಗಳನ್ನು ಇಂದಿನಿಂದಲೇ ನಿಷೇಧಿಸಲು ಸೂಕ್ತ ಕ್ರಮಕೈಗೊಳ್ಳಲಾಗುವುದು. ಈ ಬಗ್ಗೆ ಸಂಬಂಧಿತ ಇಲಾಖೆಗೆ ಸೂಚನೆ ನೀಡಲಾಗಿದೆ. ಲಘು ವಾಹನ ಸಹಿತ ಸರ್ವಿಸ್ ಬಸ್ಸುಗಳಿಗೆ ಮಾತ್ರ ಒಳ ಪ್ರವೇಶಕ್ಕೆ ಅನುಮತಿ ನೀಡಲಾಗುವುದು.
ಘನ ವಾಹನಗಳ ಸಂಚಾರದಿಂದ ಹದಗೆಟ್ಟಿರುವ ಹೆಜಮಾಡಿಯ ಒಳ ರಸ್ತೆಗಳ ಅಭಿವೃದ್ಧಿಗೆ ಜಿಪಂ ನಿಧಿ ಬಳಸಲಾಗುವುದು. ಅದೇ ರೀತಿ ಹೆಜಮಾಡಿ,ಕಾಪು,ಪಡುಬಿದ್ರಿ ಮತ್ತು ಕಟಪಾಡಿಯ ಹಳೇ ಎಂಬಿಸಿ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭ ತಾ. ಪಂ. ಸದಸ್ಯೆ ರೇಣುಕಾ ಪುತ್ರನ್, ಮುಖಂಡರುಗಳಾದ ಸುಧೀರ್ ಕರ್ಕೇರ, ದೊಂಬ ಪೂಜಾರಿ, ಶಿವರಾಮ ಶೆಟ್ಟಿ, ಜಯಶ್ರೀ, ಅಬ್ದುಲ್ ರಹಿಮಾನ್ ಪುತ್ತು ವಿಕ್ರಮ್‌ರಾಜ್, ತೇಜ್‌ಪಾಲ್ ಸುವರ್ಣ, ಕೇಶವ ಸಾಲ್ಯಾನ್, ವಸಂತ ಹೆಜ್ಮಾಡಿ, ಸುಭಾಸ್ ಜಿ. ಸಾಲ್ಯಾನ್, ಗುತ್ತಿಗೆದಾರ ಎಚ್. ಎಸ್. ಮೊಹಮ್ಮದ್ ಆಲಿ ಮತ್ತಿತರರು ಉಪಸ್ಥಿತರಿದ್ದರು.