ಉಡುಪಿ: ಯುವ ಸಮುದಾಯ ಬ್ಯಾಡ್ಮಿಂಟನ್ ಕಡೆ ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದೆೆ ಎಂದು ಬ್ಯಾಂಕ್ ಆಫ್ ಬರೋಡ ಪ್ರಾದೇಶಿಕ ಕಚೇರಿ ಪ್ರಬಂಧಕ ರವೀಂದ್ರ ರೈ ತಿಳಿಸಿದ್ದಾರೆ.
ಜಿಲ್ಲಾ ಬ್ಯಾಡ್ಮಿಂಟನ್ ಅಸೋ.ವತಿಯಿಂದ ಬ್ಯಾಂಕ್ ಆಫ್ ಬರೋಡ ಸಹ ಪ್ರಾಯೋಜಕತ್ವದಲ್ಲಿ 13ವರ್ಷ ವಯೋಮಿತಿಯೊಳಗಿನ ಬಾಲಕ, ಬಾಲಕಿಯರಿಗೆ ಏರ್ಪಡಿಸಲಾದ 6 ದಿನಗಳ ಅ.ಭಾ.ಸಬ್ ಜೂ.ರ್‍ಯಾಂಕಿಂಗ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಮಂಗಳವಾರ ಮಣಿಪಾಲದ ಮರಿನಾ ಕ್ರೀಡಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾದ ವೀಕ್ಷಕ ಸುಖಾಂತ ದಾಸ್ ಮಾತನಾಡಿ, ಇಂದು ಯುವಕರು ಕ್ರೀಡೆಯ ಕಡೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಕ್ರಿಕೆಟ್ ಮೊದಲ ಸ್ಥಾನದಲ್ಲಿದ್ದರೆ ಬ್ಯಾಡ್ಮಿಂಟನ್ ದ್ವಿತೀಯ ಸ್ಥಾನದಲ್ಲಿದೆ. ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಮಕ್ಕಳಿಗೆ ಉತ್ತಮ ಭವಿಷ್ಯ ಇದೆ ಎಂದು ಹೇಳಿದರು.
ಮಾಹೆಯ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಮಾತನಾಡಿ, ಮಾನಸಿಕ ಆರೋಗ್ಯದ ಜತೆಗೆ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ವರ್ಷದ 12 ತಿಂಗಳು ಏರ್ಪಡಿಸಬಹುದಾದ ಏಕೈಕ ಕ್ರೀಡೆಯಾಗಿ ಬ್ಯಾಡ್ಮಿಂಟನ್ ಗುರುತಿಸಿ ಕೊಂಡಿದೆ. ಮಣಿಪಾಲದಲ್ಲಿ ವ್ಯವಸ್ಥಿತ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ಬ್ಯಾಡ್ಮಿಂಟನ್ ಆಡುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಪಂದ್ಯಾಟಕ್ಕೆ ಬ್ಯಾಂಕ್ ಆಫ್ ಬರೋಡದಿಂದ ನೀಡಲಾದ ಐದು ಲಕ್ಷ ರೂ. ಮೊತ್ತದ ಚೆಕನ್ನು ರವೀಂದ್ರ ರೈ ಅವರು ಅಸೋಸಿಯೇಶನ್ ಅಧ್ಯಕ್ಷ ರಘುಪತಿ ಭಟ್ಅವರಿಗೆ ಹಸ್ತಾಂತರಿಸಿದರು.
ಜಿ.ಪಂ. ಅಧ್ಯಕ್ಷ ದಿನಕರ್ ಬಾಬು, ಉದ್ಯಮಿ ಪುರುಷೋತ್ತಮ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ, ಬಡಗಬೆಟ್ಟು ಸೊಸೈಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಮಾಹೆ ಕ್ರೀಡಾ ನಿರ್ದೇಶಕ ಡಾ| ವಿನೋದ್ ನಾಯಕ್ ಉಪಸ್ಥಿತರಿದ್ದರು.
ಅಸೋ. ಅಧ್ಯಕ್ಷ ಕೆ.ರಘುಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ವೈ.ಸುಧೀರ್ ಕುಮಾರ್ ವಂದಿಸಿದರು. ಜು. 6ರ ವರೆಗೆ ನಡೆಯುವ ಈ ಪಂದ್ಯಾಟದಲ್ಲಿ ಒಂದು ಸಾವಿರ ಆಟಗಾರರು ಭಾಗವಹಿಸಿದ್ದಾರೆ.