Advertisement

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

10:55 PM Nov 07, 2024 | Team Udayavani |

ಟೊರೊಂಟೊ: ಬ್ರಾಂಪ್ಟನ್‌ ಮತ್ತು ಸರ್ರೆನಲ್ಲಿ ನಡೆಯುತ್ತಿದ್ದ ಭಾರತದ ಕಾನ್ಸುಲರ್‌ ಕ್ಯಾಂಪ್‌ಗ್ಳ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿದರೂ ಕೈಕಟ್ಟಿ ಕುಳಿತಿದ್ದ ಕೆನಡಾ ಸರ್ಕಾರಕ್ಕೆ ಭಾರತ ಈಗ ರಾಜತಾಂತ್ರಿಕವಾಗಿ ತಿರುಗೇಟು ನೀಡಿದೆ.

Advertisement

ಕೆನಡಾದಲ್ಲಿ ನಡೆಯಬೇಕಿದ್ದ ಎಲ್ಲಾ ಕಾನ್ಸುಲರ್‌ ಕ್ಯಾಂಪ್‌ ಗಳನ್ನೂ ರದ್ದು ಮಾಡಿ, ಸಾಮಾನ್ಯ ಭದ್ರತೆಯನ್ನೂ ಒದಗಿಸದ ಕೆನಡಾದ ಪೊಲೀಸ್‌ ವ್ಯವಸ್ಥೆಯೇ ಇದಕ್ಕೆ ಕಾರಣ ಎಂದು ಬೊಟ್ಟು ಮಾಡಿದೆ. ಈ ಮೂಲಕ ಕೆನಡಾವು ವಿದೇಶಗಳ ರಾಯಭಾರಿಗಳಿಗೆ, ವಿದೇಶಿ ಸಮುದಾಯಗಳಿಗೆ ಭದ್ರತೆ ಒದಗಿಸುವಲ್ಲಿ ವಿಫ‌ಲವಾಗಿದೆ ಎಂಬುದನ್ನು ಜಗತ್ತಿನ ಮುಂದೆ ತೆರೆದಿಟ್ಟಂತಾಗಿದೆ.

ಕೆನಡಾದಲ್ಲಿರುವ ಭಾರತೀಯ ಪ್ರಜೆಗಳಿಗೆ ಭಾರತದಲ್ಲಿನ ಪಿಂಚಣಿ, ಜೀವ ವಿಮೆ ಸೇರಿದಂತೆ ಕೆಲ ಸೇವಾ ಸೌಲಭ್ಯಗಳಿಗೆ ಪೂರಕವಾದ ದಾಖಲೆಗಳನ್ನು ಒದಗಿಸುವ, ಅದರ ಬಗ್ಗೆ ಮಾಹಿತಿ ನೀಡುವ ಕೆಲಸಗಳನ್ನು ರಾಯಭಾರ ಕಚೇರಿಗಳು ಕಾನ್ಸುಲರ್‌ ಕ್ಯಾಂಪ್‌ಗ್ಳ ಮೂಲಕ ನಡೆಸುತ್ತಿದ್ದವು. ನ.2 ಮತ್ತು 3ರಂದು ಈ ಕ್ಯಾಂಪ್‌ಗ್ಳ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿದ್ದರು. ಈ ಬಗ್ಗೆ ಭಾರತ ಆಕ್ಷೇಪ ವ್ಯಕ್ತ ಪಡಿಸಿದಾಗಲೂ ಕೆನಡಾ ಸರ್ಕಾರ ಕೈ ಕಟ್ಟಿ ಕುಳಿತಿತ್ತು. ಈ ಹಿನ್ನೆಲೆಯಲ್ಲಿ ಭಾರತ ಕ್ಯಾಂಪ್‌ಗ್ಳ ನ್ನೇ ರದ್ದುಗೊಳಿಸಿ, ರಾಜತಾಂತ್ರಿಕ ತಿರುಗೇಟು ನೀಡಿದೆ. ವಿದೇಶಾಂಗ ಕಾರ್ಯದರ್ಶಿ ರಣದೀರ್‌ ಜೈಸ್ವಾಲ್‌ ಅವರು ಕ್ಯಾಂಪ್‌ ರದ್ದತಿಯನ್ನು ದೃಢಪಡಿಸಿದ್ದಾರೆ.

ಬ್ರಾಂಪ್ಟನ್‌ ದೇಗುಲದ ಅರ್ಚಕ ವಜಾ
ಖಲಿಸ್ತಾನಿಗಳು ದಾಳಿ ನಡೆಸಿದ ಬ್ರಾಂಪ್ಟನ್‌ನ ಹಿಂದೂ ಸಭಾ ದೇವಾಲಯದ ಅರ್ಚಕನನ್ನೇ ದೇಗುಲ ಆಡಳಿತ ವಜಾಗೊಳಿಸಿದೆ. ದಾಳಿ ಸಂದರ್ಭದಲ್ಲಿ ಹಿಂದೂಗಳನ್ನು ಉದ್ರೇಕಿಸುವಂಥ ದ್ವೇಷ ಭಾಷಣವನ್ನು ಅರ್ಚಕ ಮಾಡಿದ್ದರು. ಹೀಗಾಗಿ ಅವರನ್ನು ಹುದ್ದೆಯಿಂದ ವಜಾಗೊಳಿಸಿದ್ದೇವೆ ಎಂದಿದೆ.

ಜೈಶಂಕರ್‌ ಭಾಷಣ ಪ್ರಸಾರ
ಮಾಡಿದ ಮಾಧ್ಯಮಕ್ಕೆ ನಿಷೇಧ
ಭಾರತದ ಮೇಲೆ ನಿರಾಧಾರ ಆರೋಪ ಎಸಗಿ ನುಣುಚಿಕೊಳ್ಳಲು ಯತ್ನಿಸುತ್ತಿರುವ ಕೆನಡಾ ಈಗ ಜಾಗತಿಕ ಮಟ್ಟದಲ್ಲಿ ತನ್ನ ಗುಟ್ಟು ಬಯಲಾಗಿದ್ದಕ್ಕೆ ಸಿಟ್ಟಾಗಿದೆ. ವಿದೇಶಾಂಗ ಸಚಿವ ಜೈಶಂಕರ್‌ ಮಾಡಿದ ಭಾಷಣ ಪ್ರಸಾರ ಮಾಡಿದ “ಆಸ್ಟ್ರೇಲಿಯಾ ಟುಡೇ’ ಮಾಧ್ಯಮವನ್ನು ಕೆನಡಾದಲ್ಲಿ ನಿಷೇಧಿಸಲಾಗಿದೆ. ಆಸ್ಟ್ರೇಲಿಯಾದ ವಿದೇಶಾಂಗ ಸಚಿವೆ ಪೆನ್ನಿ ವೋಂಗ್‌ ಮತ್ತು ಜೈಶಂಕರ್‌ ನಡೆಸಿದ ಸುದ್ದಿಗೋಷ್ಠಿಯಲ್ಲಿ ಜೈ ಶಂಕರ್‌, ಭಾರತದ ವಿರುದ್ಧ ಕೆನಡಾದ ಆಧಾರರಹಿತ ಆರೋಪ, ಭಾರತೀಯ ರಾಯಭಾರಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿ ಹಾಗೂ ಭಾರತ ವಿರೋಧಿ ಕೃತ್ಯಗಳಿಗೆ ಅಲ್ಲಿನ ರಾಜಕೀಯ ಬೆಂಬಲವನ್ನು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಮಾಧ್ಯಮಕ್ಕೆ ಕೆನಡಾ ನಿರ್ಬಂಧ ವಿಧಿಸಿದೆ. ಇದು ವಾಕ್‌ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ಎಂದು ಭಾರತ ಕಿಡಿಕಾರಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next