ಬೆಂಗಳೂರು: ನಗರದಲ್ಲಿ ಬಿಬಿಎಂಪಿ ಕೋವಿಡ್ ಕೇರ್ ಕೇಂದ್ರಗಳನ್ನು ಅಸಮರ್ಪಕವಾಗಿ ನಿರ್ವಹಿಸುತ್ತಿದ್ದು, ತಂತ್ರಜ್ಞಾನದ ಸಮರ್ಪಕ ಬಳಕೆ ಮಾಡದಿರುವುದಕ್ಕೆ ವಿಧಾನ ಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.
ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ, ಕೋವಿಡ್ ಸಂಕಷ್ಟ ಎದುರಿಸುವ ವೇಳೆ 6 ತಿಂಗಳು ಕಳೆದರೂ ಆಧುನಿಕ ತಂತ್ರಜ್ಞಾನ ಸಮರ್ಪಕ ಬಳಕೆ ಮಾಡದಿರುವುದರಿಂದ ಸಮಸ್ಯೆಗಳು ದಿನೇ ದಿನೆ ಹೆಚ್ಚಾಗುತ್ತಿದೆ ಎಂದರು. ಓಲಾ, ಉಬರ್‌ನಂತಹ ಸಂಸ್ಥೆಗಳು ಆ್ಯಪ್ ಆಧಾರಿತ ಸೇವೆಯನ್ನು ಅತ್ಯಂತ ದಕ್ಷತೆಯಿಂದ ಮತ್ತು ಪರಿಣಾಮಕಾರಿಯಾಗಿ ಒದಗಿಸುತ್ತಿರುವುದರಿಂದ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗುತ್ತಿದೆ. ಕೋವಿಡ್‌ನಂತಹ ಪರಿಸ್ಥಿತಿಯನ್ನು ನಿರ್ವಹಿಸಲು ಸರ್ಕಾರವೇಕೆ ತಂತ್ರಜ್ಞಾನ ಬಳಕೆಯಲ್ಲಿ ವಿಫಲವಾಗಿದೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾಗಿ ಹೇಳಿದರು.
ಪ್ರತಿಯೊಬ್ಬ ಕೋವಿಡ್ ರೋಗಿಗೂ ಸಿ.ಸಿ ಕ್ಯಾಮರಾ ಮೂಲಕ ಆನ್‌ಲೈನ್‌ನಲ್ಲಿ ಬಂಧು, ಬಳಗ, ಸಂಬಂಧಿಕರು ಎಲ್ಲರೂ ಯಾವಾಗ ಬೇಕಾದರೂ ವೀಕ್ಷಿಸಲು ಅತ್ಯಂತ ಕಡಿಮೆ ಖರ್ಚಿನಲ್ಲಿ ಕಲ್ಪಿಸಲು ಸಾಧ್ಯವಿದೆ. ಅದೇ ರಿತಿ ಹಿರಿಯ ಅಧಿಕಾರಿಗಳೂ ಪ್ರತಿಯೊಂದು ಆಸ್ಪತ್ರೆಯ ಪ್ರತಿಯೊಬ್ಬ ರೋಗಿಯ ಯೋಗಕ್ಷೇಮವನ್ನು ಯಾವ ರೀತಿ ನೋಡಿಕೊಳ್ಳಲಾಗುತ್ತಿದೆ ಎಂಬುದನ್ನು ತಮ್ಮ ಛೇಂಬರ್‌ನಲ್ಲಿಯೇ ಕುಳಿತು ನೋಡಲು ಸಾಧ್ಯವಿರುವಾಗ ಕೋವಿಡ್ ನಿರ್ವಹಣಾ ವ್ಯವವಸ್ಥೆಯನ್ನು ಇನ್ನಷ್ಟು ದಕ್ಷತೆ ಮತ್ತು ಪರಿಣಾಮ ಕಾರಿಯಾಗಿ ನಿರ್ವಹಿಸಲು ತಕ್ಷಣ ಕ್ರಮ ಕೈಗೊಳ್ಳ ಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕೋವಿಡ್ ನಿಯಂತ್ರಣ ಕೇಂದ್ರಗಳ ಸ್ಥಾಪನೆಗೆ ಬಾಡಿಗೆ ಆಧಾರದ ಮೇಲೆ ಸಲಕರಣೆಗಳನ್ನು ಪಡೆಯುವ ವ್ಯವಸ್ಥೆ ಪ್ರಾರಂಭಿಸಿದಾಗ ಇದ್ದ ಹುರುಪು ಈಗ ಯಾವ ಅಧಿಕಾರಿಯಲ್ಲೂ ಕಾಣುತ್ತಿಲ್ಲ. ಸಿಎಂ ಯಾವಾಗ ಬಾಡಿಗೆ ವ್ಯವಸ್ಥೆಯನ್ನು ತಳ್ಳಿಹಾಕಿ ಖರೀದಿ ವ್ಯವಸ್ಥೆಯನ್ನು ಜಾರಿಗೆ ತಂದರೋ ಆಗ ಕೋವಿಡ್ ಕೇರ್ ಕೇಂದ್ರಗಳಿಗೆ ಕೋವಿಡ್ ರೋಗಿಗಳು ಬರುತ್ತಿಲ್ಲ ಎಂದು ಅಧಿಕಾರಿಗಳು ರಾಗ ತೆಗೆದರು. ಇದು ಏನನ್ನು ಸೂಚಿಸುತ್ತದೆ ಎಂದು ಅಧಿಕಾರಿಗಳಿಗ ಪ್ರಶ್ನಿಸಿದರು.
ಐಸಿಯುನಲ್ಲಿ ರೋಗಿಗಳಿಗೆ ಒತ್ತಡ: ಐಸಿಯುನಲ್ಲಿರುವ ರೋಗಿಗಳನ್ನು ಎದ್ದು ಓಡಾಡದಂತೆ ಕಟ್ಟಿ ಹಾಕಲಾಗುತ್ತಿದೆ ಎಂದು ಸಭೆಯಲ್ಲಿ ಹಾಜರಿದ್ದ ಶಾಸಕ ನಂದೀಶ ರೆಡ್ಡಿ, ವೈ.ಎ. ನಾರಾಯಣಸ್ವಾಮಿ, ಮಾಜಿ ಸ್ಪೀಕರ್ ರಮೇಶ್ ಕುಮಾರ ಮತ್ತಿತರ ಸದಸ್ಯರು ಗಂಭೀರವಾದ ಆರೋಪಗಳನ್ನು ಮಾಡಿದರು. ಈ ಬಗ್ಗೆ ಪರಿಶೀಲಿಸಿ ವಿವರವಾದ ಮಾಹಿತಿಯನ್ನು ನೀಡುವುದಾಗಿ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ ತಿಳಿಸಿದರು. ಇನ್ನು 15 ದಿನಗಳಲ್ಲಿ ಕೋವಿಡ್ ಕೇರ್ ನಿಯಂತ್ರಣ ಕೇಂದ್ರಗಳು ಮತ್ತು ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸಾ ವ್ಯವಸ್ಥೆ, ದೈನಂದಿನ ಸೌಲಭ್ಯ, ಪರಿಕಗರಳ ಕುರಿತುವ ಸ್ತುಸ್ಥಿತಿ ವರದಿಯನ್ನು ನೀಡಬೇಕೆಂದು ಸಭೆಯಲ್ಲಿ ಸೂಚಿಸಿರುವುದಾಗಿ ಪಾಟೀಲ ಹೇಳಿದರು.
ಬೆಂಗಳೂರಿನಲ್ಲಿ ರೋಗಿಗಳ ಕೈ ಕಾಲು ಕಟ್ಟಿರುವುದನ್ನು ನಾನು ನೋಡಿದ್ದೇನೆ. ಡಾಕ್ಟರ್ ಕಡಿಮೆ ಇದ್ದಾರೆ ಎಂದು ಈ ರೀತಿ ಮಾಡುತ್ತಿದ್ದಾರೆ. ರೋಗಿಗಳು ಎದ್ದು ಓಡಾಡುತ್ತಾರೆ ಎಂದು ಕೈಕಾಲು ಕಟ್ಟಿಹಾಕುತ್ತಿದ್ದಾರೆ. ನಮ್ಮ ತಂದೆಯನ್ನು ಸೇರಿಸಿದ್ದಾಗ ನಾನೇ ನೋಡಿದ್ದೇನೆ
– ಸತೀಶ್ ರೆಡ್ಡಿ, ಬೊಮ್ಮನಹಳ್ಳಿ ಶಾಸಕ