ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನೊಬ್ಬ ಕಿಟಿಕಿಯ ಹೊರಗಡೆ ನೋಡುತ್ತ “ಅಪ್ಪಾ, ಅಲ್ಲಿ ನೋಡು ಮರಗಳೆಲ್ಲ ಹಿಂದಕ್ಕೆ ಹಿಂದಕ್ಕೆ ಚಲಿಸುತ್ತಿವೆ’ ಅಂತ ಅಚ್ಚರಿಯಿಂದ ಮಕ್ಕಳಂತೆ ಕಿರುಚಿದ. ಅಪ್ಪ ನಕ್ಕು ಸುಮ್ಮನಾದ. ಪಕ್ಕದಲ್ಲೇ ಕುಳಿತಿದ್ದ ನವ ದಂಪತಿ ಯುವಕನ ಬಾಲಿಶ ವರ್ತ ನೆಯನ್ನು ನೋಡಿ ತಮ್ಮ ತಮ್ಮಲ್ಲಿಯೇ ನಗತೊಡಗಿದರು. ಅಷ್ಟರಲ್ಲೇ ಆ ಯುವಕ ಮತ್ತೂಮ್ಮೆ ಉದ್ಗರಿಸಿದ. ಅಪ್ಪಾ ಅಲ್ಲಿ ನೋಡು, ಆಗಸದಲ್ಲಿರುವ ಮೋಡಗಳೆಲ್ಲ ನಮ್ಮ ಜತೆ ಜತೆಯಲ್ಲಿ ಓಡುತ್ತಿವೆ.
ಈಗ ಸುಮ್ಮನಿರಲಾರದ ಆ ದಂಪತಿ ಕನಿಕರ ವ್ಯಕ್ತಪಡಿಸುತ್ತ ಯುವಕನ ತಂದೆಯನ್ನು ಉದ್ದೇಶಿಸಿ “ನಿಮ್ಮ ಮಗನನ್ನೇಕೆ ಉತ್ತಮ ಮಾನಸಿಕ ವೈದ್ಯರಿಗೆ ತೋರಿಸಬಾರದು?’ ಅಂತ ಉಚಿತ ಸಲಹೆ ಕೊಟ್ಟರು.
ದಂಪತಿಯ ಪ್ರಶ್ನೆಗೆ ಕಿಂಚಿತ್ತೂ ವಿಚಲಿತನಾಗದ ಆ ವ್ಯಕ್ತಿ ಸಮಾಧಾನದಿಂದ “ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದೇ ನಾವು ಮರಳುತ್ತಿದ್ದೇವೆ..ಬಾಲ್ಯದಿಂದಲೇ ಅಂಧನಾಗಿದ್ದ ನನ್ನ ಮಗನಿಗೆ ಈಗಷ್ಟೇ ದೃಷ್ಟಿ ಬಂದಿದೆ. 24 ವರ್ಷಗಳ ಅನಂತರ ಇದೀಗ ಅವನು ಹೊರಜಗತ್ತನ್ನು ನೋಡುತ್ತಿದ್ದಾನೆ’ ಎಂದು ಶಾಂತವಾಗಿ ಉತ್ತರಿಸಿದ.
ಅದೆಷ್ಟೋ ಸಲ ಹೀಗಾಗುತ್ತೆ. ಬೇರೆಯವರ ಸ್ಥಿತಿಯನ್ನು, ಸಮಸ್ಯೆಗಳನ್ನು ತಿಳಿದುಕೊಳ್ಳದೇ ಮಾತನಾಡುತ್ತೇವೆ. ಗೇಲಿ ಮಾಡಿ ನಗುತ್ತೇವೆ. ಪುಕ್ಕಟೆ ಸಲಹೆಗಳನ್ನು ನೀಡಿ ಬುದ್ಧಿವಂತರಂತೆ ವರ್ತಿಸುತ್ತೇವೆ. ಇತರರ ಸ್ಥಿತಿಯ ಬಗ್ಗೆ ಅರಿತುಕೊಳ್ಳದೆ ನಮ್ಮದೇ ಆದ ತೀರ್ಮಾನಕ್ಕೆ ಬಂದುಬಿಡುತ್ತೇವೆ. ಆದರೆ ನಮ್ಮ ತೀರ್ಮಾನಗಳು ಅವೆಷ್ಟೋ ಬಾರಿ ತಪ್ಪಾಗಿರುತ್ತವೆ. ಇತರರನ್ನು ನೋವಿಗೆ ತಳ್ಳುತ್ತವೆ. ಅನಂತರ ನಾವೂ ಪಶ್ಚಾತ್ತಾಪಪಡುವಂತಾಗುತ್ತದೆ.
ಬದುಕಲ್ಲಿ ಎಲ್ಲರಿಗೂ ಸಮಸ್ಯೆ ಸಂಕಟ ಗಳಿರುತ್ತವೆ. ಆದರೆ ಅದು ಇತರರಿಗೆ ತಿಳಿಯದಂತೆ ಕೆಲವರು ಬದುಕುತ್ತಾರೆ. ಇನ್ನು ಕೆಲವರು ತಮಗೆ ಬಂದಿರುವ ಕಷ್ಟ ಬೇರೆ ಯಾರಿಗೂ ಬಂದಿಲ್ಲ, ತಮ್ಮ ಸಮಸ್ಯೆಯೇ ಪ್ರಪಂಚದಲ್ಲಿ ದೊಡ್ಡದು ಅಂತ ಗೋಳಾಡುತ್ತಿರುತ್ತಾರೆ. ಸಿಕ್ಕ ಸಿಕ್ಕವರಲ್ಲೆಲ್ಲ ಹೇಳಿ ಹೇಳಿ ಅಳುತ್ತಾರೆ. ಆದರೆ ವಾಸ್ತವದಲ್ಲಿ ಸಮಸ್ಯೆಗಳಿಂದ ಯಾರೂ ಹೊ ರತಲ್ಲ. ದಾರಿಯಲ್ಲಿ ಬಿದ್ದಿರುವ ಕಲ್ಲಿಗೂ ತನ್ನನ್ನು ಎಲ್ಲರೂ ತುಳಿದು ನಡೆಯುತ್ತಾರೆ ಎಂಬ ಕೊರಗಿದೆ. ಗುಡಿಯೊಳಗೆ ಆರಾಧಿ ಸಲ್ಪಡುವ ಮೂರ್ತಿಯೂ ಉಳಿಯಿಂದ ಹೊಡೆಸಿಕೊಳ್ಳುವ ಕಷ್ಟ ಅನುಭವಿಸಿದೆ.
ಇನ್ನೊಬ್ಬರ ಸ್ಥಿತಿಯನ್ನು ಅರಿಯದೆ ಮಾತನಾಡುತ್ತೇವೆ. ಶ್ರೀಮಂತರೆಲ್ಲ ಸುಖೀಗಳು ಅಂದುಕೊಳ್ಳುತ್ತೇವೆ. ಮಿತವಾಗಿ ಮಾತನಾಡುವವರನ್ನು ಗರ್ವಿಗಳು ಅಂದುಕೊಳ್ಳುತ್ತೇವೆ. ಹೀಗೆ ನಮ್ಮ ದಿನ ನಿತ್ಯದ ಆಗುಹೋಗುಗಳಲ್ಲಿ, ಅನೇಕ ವಿಚಾರಗಳಲ್ಲಿ ನಾವು ವಾಸ್ತವವನ್ನು ತಿಳಿ ಯದೆ ಮೂರ್ಖರಂತೆ ವರ್ತಿಸುತ್ತೇವೆ. ವಿವೇಚಿಸದೆ ಮಾತನಾಡುತ್ತೇವೆ. ಜಗಳ ವಾಡುತ್ತೇವೆ. ಸಂಬಂಧಗಳಿಗೊಂದು ಗೋಡೆ ಕಟ್ಟಿ ಬಿಡುತ್ತೇವೆ.
ನಮ್ಮ ಮಾತು, ವರ್ತನೆಗಳು ಬೇರೆಯವರಿಗೆ ದುಃಖ ಕೊಡುವಂತಿರಬಾರದು. ಹಾಗೆಂದು ಕೆಲವೊಂದು ಸಂದರ್ಭ ಅಚಾತುರ್ಯದಿಂದ ನಾವು ಏನೋ ಒಂದೆ ರಡು ಕೆಟ್ಟ ಪದಗಳನ್ನು ಬಳಕೆ ಮಾಡಿರ ಬಹುದು. ನಾವಾಡಿದ ಮಾತುಗಳಿಂದ ಪರರಿಗೆ ನೋವಾಗಿದೆ ಎಂದು ನಮ್ಮ ಅರಿವಿಗೆ ಬಂದಾಕ್ಷಣ ಆ ವ್ಯಕ್ತಿ ಬಳಿ ಕ್ಷಮೆಯಾಚಿಸಿದಲ್ಲಿ ನಮ್ಮ ವ್ಯಕ್ತಿತ್ವಕ್ಕೊಂದು ಶೋಭೆ ಬರುತ್ತದೆ.
ಸಂದರ್ಭಕ್ಕೆ ಅನುಗುಣವಾಗಿ ಯೋಚಿಸಿ ವರ್ತಿಸುವುದೇ ಜಾಣತನ. ಅನ್ಯರ ಸ್ಥಿತಿಯ ಬಗ್ಗೆ ಸರಿಯಾಗಿ ತಿಳಿಯದೆ ಮೇಲ್ನೋಟದಿಂದ ನಮ್ಮದೇ ತೀರ್ಮಾನಕ್ಕೆ ಬರುವುದರಿಂದ ತೊಂದರೆಗಳೇ ಹೆಚ್ಚು.
ಹೊರಗಿನಿಂದ ಕಾಣುವುದೆಲ್ಲ ಸತ್ಯವಲ್ಲ. ಬಿಳಿಯಾಗಿರುವುದೆಲ್ಲ ಹಾಲಲ್ಲ. ಯೋಚಿಸದೆ ಮಾತನಾಡಿ ಪಶ್ಚಾತ್ತಾಪ ಪಡುವ ಬದಲು ಪರಿಸ್ಥಿತಿಯನ್ನರಿತು ಪ್ರತಿಕ್ರಿಯೆ ನೀಡುವುದೇ ವಿವೇಕತನ.
- ವಿದ್ಯಾ ಅಮ್ಮಣ್ಣಾಯ, ಕಾಪು