ನವದೆಹಲಿ: ಮತ ಎಣಿಕೆಯ ಸಂದರ್ಭದಲ್ಲಿ ಇವಿಎಂಗಳಲ್ಲಿನ ಮತ ಹಾಗೂ ವಿವಿಪ್ಯಾಟ್ ಗಳಲ್ಲಿನ ಮತಗಳನ್ನು ಶೇ.100ರಷ್ಟು ತಾಳೆ ಮಾಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂಕೋರ್ಟ್ ಶುಕ್ರವಾರ (ಏಪ್ರಿಲ್ 26) ವಜಾಗೊಳಿಸಿದೆ.
ಇದನ್ನೂ ಓದಿ:LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಎರಡು ನಿರ್ದೇಶನಗಳನ್ನು ನೀಡಿದೆ, ಮೊದಲನೆಯದು ಸಿಂಬಲ್(ಚಿಹ್ನೆ) ಲೋಡಿಂಗ್ ಯೂನಿಟ್ ಅನ್ನು ಸೀಲ್ ಮಾಡಬೇಕು ಮತ್ತು ಇವಿಎಂಗೆ ಚಿಹ್ನೆ ಲೋಡ್ ಮಾಡುವ ಪ್ರಕ್ರಿಯೆ ಪೂರ್ಣಗೊಂಡ ನಂತರ ಕನಿಷ್ಠ 45 ದಿನಗಳವರೆಗೆ ಸಂಗ್ರಹಿಸಿ ಇಟ್ಟಿರಬೇಕು ಎಂದು ಸೂಚಿಸಿದೆ.
ಸುಪ್ರೀಂಕೋರ್ಟ್ ನೀಡಿದ ಎರಡನೇ ನಿರ್ದೇಶನದ ಪ್ರಕಾರ, ಅಭ್ಯರ್ಥಿಗಳು ಫಲಿತಾಂಶವನ್ನು ಘೋಷಿಸಿದ ನಂತರ ಎಂಜಿನಿಯರ್ ಗಳ ತಂಡದಿಂದ ಇವಿಎಂಗಳ ಮೈಕ್ರೋಕಂಟ್ರೋಲರ್ ಪ್ರೋಗ್ರಾಂ ಅನ್ನು ಪರಿಶೀಲಿಸುವ ಆಯ್ಕೆ ಹೊಂದಿರುತ್ತಾರೆ. ಈ ಮನವಿಯನ್ನು ಅಭ್ಯರ್ಥಿಯು ಫಲಿತಾಂಶ ಘೋಷಿಸಿದ ಏಳು ದಿನದೊಳಗೆ ಮಾಡಬೇಕು ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಾಂಕರ್ ದತ್ತಾ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿದೆ.
ಏಪ್ರಿಲ್ 18ರಂದು ಇವಿಎಂ ಯಂತ್ರದಲ್ಲಿ ಬಿದ್ದ ಮತಗಳನ್ನು ಸಂಪೂರ್ಣವಾಗಿ ವಿವಿ ಪ್ಯಾಟ್ ಸ್ಲಿಪ್ ಗಳೊಂದಿಗೆ ಸಂಪೂರ್ಣವಾಗಿ ಪರಿಶೀಲನೆ ನಡೆಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿತ್ತು.
ಇವಿಎಂಗಳ ಪ್ರಯೋಜನಗಳನ್ನು ಪ್ರಶ್ನಿಸುವ ಮತ್ತು ಬ್ಯಾಲೆಟ್ ಪೇಪರ್ ಗೆ ಮರಳುವಂತೆ ಪ್ರತಿಪಾದಿಸುವವರ ಮನಸ್ಸನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ತಿಳಿಸಿರುವ ಸುಪ್ರೀಂಕೋರ್ಟ್, ಇವಿಎಂಗಳ ಕಾರ್ಯನಿರ್ವಹಣೆ ಮತ್ತು ಮೈಕ್ರೋ ಕಂಟ್ರೋಲರ್ ಕುರಿತು ಚುನಾವಣಾ ಆಯೋಗ ನೀಡಿದ ಉತ್ತರವನ್ನು ಪೀಠ ಪರಿಗಣಿಸಿರುವುದಾಗಿ ತಿಳಿಸಿದೆ.