Advertisement
ಇದು ಉತ್ತರ ಪ್ರದೇಶದ ಕೇಸರಿ ಕಥೆ. ಈ ರಾಜ್ಯದ ಯಾವುದೇ ಸರ್ಕಾರಿ ವಾಹನ, ಕಚೇರಿ, ಸಭೆ-ಸಮಾರಂಭ, ಶಾಸಕ, ಸಚಿವರ ಕಾರು, ಮನೆ ,ಕಚೇರಿಗಳಲ್ಲಿ ಕಂಡುಬರುವುದು ಕೇಸರಿ ಮತ್ತು ಕೇಸರಿ ಮಾತ್ರ. ಕಾವಿಧಾರಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಉತ್ತರ ಪ್ರದೇಶ ಕೇಸರಿ ಬಣ್ಣವನ್ನೇ ಹೊದ್ದು ಕೂತಿದೆ. ಸರ್ಕಾರದ ಸಚಿವರಾದಿಯಾಗಿ ಬಹುತೇಕ ಎಲ್ಲ ಬಿಜೆಪಿ ಶಾಸಕರು ಕೇಸರಿ ಬಣ್ಣದ ನೆಹರು ಕೋಟು, ಜಾಕೆಟ್, ಕುರ್ತಾ, ಶಲ್ಯ ಧರಿಸಿದರೆ, ಸಚಿವೆಯರು ಮತ್ತು ಶಾಸಕಿಯರು ತಮ್ಮ ಬೀರುವಿನಲ್ಲಿದ್ದ ಎಲ್ಲ ಕಲರ್ ಕಲರ್ ಸೀರೆಗಳನ್ನ ಪೆಟ್ಟಿಗೆಗೆ ತುಂಬಿ, ಆ ಜಾಗದಲ್ಲಿ ಕೇಸರಿ ಸೀರೆ ಜೋಡಿಸಿದ್ದಾರೆ.
ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಕಡು ಕಿತ್ತಳೆ ಬಣ್ಣದ ಕಾರ್ ಬಳಸುತ್ತಿದ್ದು, ಆ ಕಾರ್‌ನ ಸೀಟುಗಳಿಗೆ ಕೇಸರಿ ಕವರ್ ಹಾಕಿಸಿದ್ದಾರೆ. ಇನ್ನು ಸಚಿವರು ಈಗೀಗ ಕೇಸರಿ ತಿಲಕವಿಲ್ಲದೆ ಹೊರಬರುವುದೇ ಇಲ್ಲ. ಕುಳಿತುಕೊಳ್ಳುವ ಕುರ್ಚಿ ಕೂಡ ಕೇಸರಿ ಇರಬೇಕೆಂದು ಬಯಸುವ ಸಿಎಂ ಯೋಗಿಗೆ, ಕೇಸರಿ ಅಚ್ಚುಮೆಚ್ಚು. ಹಾಗಂತ “ಎಲ್ಲರೂ ಕೇಸರಿ ಧರಿಸಿ’ ಅಂತಾ ಅವರೇನಾದರೂ ಹೇಳಿದ್ದಾರಾ ಎಂದು ಕೇಳಿದರೆ, “ಅವ್ರೇನೂ ಹೇಳಿಲ್ಲ. ಯೋಗಿ ಮಹಾರಾಜರ ಮೂಡ್ ಮೆಂಟೇನ್ ಮಾಡೋಕೆ, ಕಣ್ಣು ಹಾಯಿಸಿದಲ್ಲೆಲ್ಲಾ ಕೇಸರಿ ಇರುವಂತೆ ನೋಡಿಕೊಳ್ತಿದ್ದೇವೆ,’ ಅಂತಾರೆ ಹಿರಿಯ ಅಧಿಕಾರಿಯೊಬ್ಬರು.
Related Articles
ಉತ್ತರ ಪ್ರದೇಶದಲ್ಲಿ ಬಣ್ಣದ ವ್ಯಾಮೋಹ ಹೊಸತೇನಲ್ಲ. ಬಿಎಸ್‌ಪಿ ನಾಯಕಿ ಮಾಯಾವತಿ ಸಿಎಂ ಆದಾಗ ನೀಲಿ ಮತ್ತು ಗಾಢ ನೀಲಿ ರಾಜ್ಯವನ್ನು ಆವರಿಸಿದರೆ, ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ ಹಸಿರು ರಾರಾಜಿಸುತ್ತಿತ್ತು. ಇದೀಗ “ಯೋಗಿ ರಾಜ್’ನಲ್ಲಿ ಕೇಸರಿ ಕ್ರಾಂತಿ ನಡೆಯುತ್ತಿದೆಯಷ್ಟೇ!
Advertisement
ಕೇಸರಿ ಎಲ್ಲಿಲ್ಲ ಹೇಳಿ?ತಿಂಗಳಿಂದೀಚೆ ನಡೆಯುತ್ತಿರುವ ಸಂಪುಟ ಸಭೆಗಳಲ್ಲಿ ಬಿಳಿ ಟವಲ್ ಜಾಗದಲ್ಲಿ ಕೇಸರಿ ಟವಲ್‌ಗಳು ಕಾಣಿಸಿಕೊಂಡಿವೆ. ಸಿಎಂ ಯೋಗಿ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಮೈಕ್ ಹಾಗೂ ಅದರ ವೈರ್‌ಗೆ ಕೇಸರಿ ಬಟ್ಟೆ ಸುತ್ತಲಾಗುತ್ತಿದೆ. ಶಾಸಕರು, ಜನಪ್ರತಿನಿಧಿಗಳು ಕೇಸರಿ ಸಾಕ್ಸ್ ಮತ್ತು ತಲೆಗೆ ಕೇಸರಿ ಸ್ಕಾಫ್ì ಧರಿಸುತ್ತಿದ್ದಾರೆ. ವಿಚಿತ್ರವೆಂದರೆ ಇತ್ತೀಚೆಗೆ ಬುಂದೇಲ್‌ಖಂಡದಲ್ಲಿ ನಡೆದ ಸಭೆಯೊಂದರಲ್ಲಿ ಬಹುತೇಕ ಎಲ್ಲ ಸರ್ಕಾರಿ ಅಧಿಕಾರಿಗಳು “ಆರೇಂಜ್’ ಜ್ಯೂಸ್ ಮಾತ್ರ ಕುಡಿದಿದ್ದಾರೆ. ಸದ್ಯಕ್ಕೆ ಕಣ್ಣಿಗೆ ಕಾಣುತ್ತಿರುವುದು ಇಷ್ಟೇ “ಒಳಗೊಳಗೇ’ ಇನ್ನೇನೆಲ್ಲಾ ಕೇಸರಿಯಾಗಿದೆಯೋ..!!