Advertisement

ಉಡುಪಿ ಜಿಲ್ಲೆಯಲ್ಲಿ ಶೇ. 60ರಷ್ಟು ಸಿಸೇರಿಯನ್‌ ಹೆರಿಗೆ

10:29 PM Oct 21, 2019 | Sriram |

ಉಡುಪಿ: ಜಿಲ್ಲೆಯಲ್ಲಿ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆಗುತ್ತಿದ್ದ ನೈಸರ್ಗಿಕ ಸಹಜ ಹೆರಿಗೆಗಳ ಸಂಖ್ಯೆ ಇಳಿಮುಖ ವಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಸಿಸೇರಿಯನ್‌ ಹೆರಿಗೆಗಳ ಸಂಖ್ಯೆ ಹೆಚ್ಚಾಗುತ್ತಿದೆ.

Advertisement

ಸರಕಾರಿ ಆಸ್ಪತ್ರೆ
ಸರಕಾರಿ ಆಸ್ಪತ್ರೆಯಲ್ಲಿ 2016-17ರಲ್ಲಿ ಸುಮಾರು 1,746 ನೈಸರ್ಗಿಕ, 2,047 ಸಿಸೇರಿಯನ್‌, 2017-18ರಲ್ಲಿ 1,917 ಸಹಜ, 1,939 ಸಿಸೇರಿಯನ್‌, 2018-19ರಲ್ಲಿ 2,264 ಸಹಜ ಹಾಗೂ 2,248 ಸಿಸೇರಿಯನ್‌ ಹೆರಿಗೆಯಾಗಿದ್ದು, ಸುಮಾರು 11,094 ಹೆರಿಗೆ ಯಲ್ಲಿ ಶೇ. 60ರಷ್ಟು ಹೆರಿಗೆ ಸಿಸೇರಿಯನ್‌ ಆಗಿವೆ.

ಖಾಸಗಿ ಆಸ್ಪತ್ರೆ
ಉಡುಪಿ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ 2016-17ರಲ್ಲಿ 5,100 ಸಿಸೇರಿಯನ್‌ ಹಾಗೂ 4,744 ನೈಸರ್ಗಿಕ ಹೆರಿಗೆಯಾಗಿದೆ. 2017-18ರಲ್ಲಿ 4,947 ಸಿಸೇರಿಯನ್‌ ಹಾಗೂ 4962 ಸಹಜ ಹೆರಿಗೆ, 2018-19ರಲ್ಲಿ ಸಿಸೇರಿಯನ್‌ 5,789 ಹಾಗೂ ಸಹಜ 4,435 ಹೆರಿಗೆಯಾಗಿದೆ. 2019-20 (ಪ್ರಸ್ತುತ) 2,929 ಸಿಸೇರಿಯನ್‌ ಹಾಗೂ 2,685 ಸಹಜ ಹೆರಿಗೆಯಾಗಿದೆ. ಕಳೆದ 4 ವರ್ಷದಿಂದ ಒಟ್ಟು 35, 623 ಹೆರಿಗೆಯಲ್ಲಿ ಶೇ. 60ರಷ್ಟು ಹೆರಿಗೆ (18,765) ಸಿಸೇರಿಯನ್ನಾಗಿದ್ದು, ಶೇ. 40ರಷ್ಟು ಸಹಜ ಹೆರಿಗೆಯಾಗಿದೆ.

ಸಾಕಷ್ಟು ಕಷ್ಟಕರ ಹೆರಿಗೆಗಳನ್ನು ಸುಲಲಿತಗೊಳಿಸಿ ತಾಯಂದಿರು ಹಾಗೂ ಶಿಶುಗಳ ಮರಣ ಪ್ರಮಾಣವನ್ನು ತಗ್ಗಿಸಿದ ಹೆಗ್ಗಳಿಕೆ ಸಿಸೇರಿಯನ್‌ಗೆ ಇದೆ. ಅತಿಯಾದರೆ ಅಮೃತ ಸಹ ವಿಷವಾಗುತ್ತದೆ ಎನ್ನುವ ಮಾತಿನಂತೆ ಇಂದು ಸಿಸೇರಿಯನ್‌ ಹೆರಿಗೆ ಸಾಮಾಜಿಕ ಪಿಡುಗಾಗಿ ಗುರುತಿಸಿಕೊಂಡಿದೆ. ಭಾವೀ ತಾಯಂದಿರು ಸಿಸೇರಿಯನ್‌ಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ.

ಇಂದು ಭಾವೀ ತಾಯಂದಿರ ಬದಲಾದ ನಾಜೂಕು ಜೀವನ ಶೈಲಿ, ಅರಿವಿನ ಕೊರತೆ, ಕಡಿಮೆಯಾಗಿರುವ ಕಷ್ಟ ಸಹಿಷ್ಣುತೆ ಮತ್ತು ತಾಳ್ಮೆ, ನೋವಿಲ್ಲದೆ ಹೆರಿಗೆ ಬಯಸುವ ಗರ್ಭಿಣಿಯರು ಹಾಗೂ ಜೀವ ವಿಮಾ ಕಂಪೆನಿಗಳು ಸಿಸೇರಿಯನ್‌ ಹೆರಿಗೆಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲು ಕಾರಣವಾಗಿದೆ. ಸಹಜ ಹೆರಿಗೆಗಿಂತ ಸಿಸೇರಿಯನ್‌ ದುಬಾರಿ. ಶಿಕ್ಷಣ, ಉದ್ಯೋಗ ಪ್ರಮಾಣ ಹೆಚ್ಚಿದಂತೆ ವಿಮಾ ಸೌಲಭ್ಯದ ಪ್ರಮಾಣವೂ ಹೆಚ್ಚುತ್ತದೆ. ಇದು ಪರೋಕ್ಷವಾಗಿ ವೆಚ್ಚ ಹೆಚ್ಚಳಕ್ಕೂ ಕಾರಣವಾಗುತ್ತದೆ. ವೆಚ್ಚ ಹೆಚ್ಚಿದರೂ ವೆಚ್ಚ ಭರಿಸುವುದು ವಿಮಾ ಕಂಪೆನಿಯಾದ ಕಾರಣ ಸಿಸೇರಿಯನ್‌ ಹೆರಿಗೆ ಬಯಸುವವರೂ ಇದ್ದಾರೆ.

Advertisement

ಸಿಸೇರಿಯನ್‌ ಸಮಯದಲ್ಲಿ ಅಧಿಕ ರಕ್ತಸ್ರಾವ ಇರುತ್ತದೆ. ಸಹಜ ಹೆರಿಗೆಯಲ್ಲಿ ಅರ್ಧ ಲೀ. ರಕ್ತಸ್ರಾವವಾದರೆ ಸಿಸೇರಿಯನ್‌ನಲ್ಲಿ 1 ಲೀ. ರಕ್ತಸ್ರಾವ ಆಗುತ್ತದೆ. ಇದರಿಂದಾಗಿ ತಾಯಿ ರಕ್ತ ಹೀನತೆಯಿಂದ ಬಳಲುವ ಸಾಧ್ಯತೆ ಇದೆ. ಸಿಸೇರಿಯನ್‌ ಸಂದರ್ಭ ಗರ್ಭಿಣಿಯ ಬೆನ್ನು ಹುರಿಗೆ ಅನಸ್ತೇಶಿಯಾ ನೀಡಲಾಗುತ್ತದೆ. ಇದು ಕೆಲವೊಮ್ಮೆ ಬೆನ್ನು ನೋವು ತರುವ ಸಾಧ್ಯತೆ ಇದೆ. ಮೊದಲ ಹೆರಿಗೆ ಸಿಸೇರಿಯನ್‌ ಆದರೆ ಎರಡನೇ ಹೆರಿಗೆ ಸಹ ಸಿಸೇರಿಯನ್‌ ಆಗಲಿದೆ ಎಂಬುದನ್ನು ಅರಿಯಬೇಕು. ಕೆಲವೊಮ್ಮೆ ಇದು ಕಡ್ಡಾಯವಲ್ಲದಿದ್ದರೂ ವೈದ್ಯರು ಸಿಸೇರಿಯನ್‌ಗೆ ಆದ್ಯತೆ ಕೊಡುತ್ತಾರೆ. ಇದಕ್ಕೆ ಕೊಡುವ ಕಾರಣ ಮುಂಜಾಗ್ರತೆ.

ವಿಶ್ವ ಸಂಸ್ಥೆ ಅಭಿಮತ!
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ದೇಶದಲ್ಲಿ ಒಟ್ಟು ಸಿಸೇರಿಯನ್‌ ಹೆರಿಗೆಗಳ ಪ್ರಮಾಣ ಶೇ. 10ರಿಂದ 15 ಮೀರಬಾರದು. ಮಗುವಿನ ಜನನ ಸಂದರ್ಭದಲ್ಲಿ ಯಾವುದೇ ರೀತಿಯಾದ ಸಮಸ್ಯೆ ಎದುರಾದಲ್ಲಿ ಹಾಗೂ ತಾಯಿಯ ಆರೋಗ್ಯವನ್ನು ಗಮನದಲ್ಲಿರಿಸಿಕೊಂಡು ಮಾತ್ರವೇ ಸಿಸೇರಿಯನ್‌ ಹೆರಿಗೆ ಮಾಡಬೇಕು ಎಂದು ವಿಶ್ವ ಸಂಸ್ಥೆ ಅಭಿಪ್ರಾಯಪಟ್ಟಿದೆ.

ಅನಕ್ಷರಸ್ಥ ಬುದ್ಧಿವಂತೆಯರು!
ಸುಮಾರು ನಾಲ್ಕೈದು ದಶಕಗಳ ಹಿಂದೆ ಮನೆಗಳಲ್ಲಿ ಸಹಜ ಹೆರಿಗೆಯಾಗುತ್ತಿತ್ತು. ಆಯಾ ಊರುಗಳಲ್ಲಿ ಸಹಜ ಹೆರಿಗೆ ಮಾಡಿಸುವ ಮಹಿಳೆಯರು ಇರುತ್ತಿದ್ದರು. ಇವರನ್ನು ಬಿಜ್ಜಲ್ತಿ ಎಂದು ಕರೆಯುತ್ತಿದ್ದರು. ಇವರು ಯಾವುದೇ ವ್ಯವಸ್ಥಿತ ಶಿಕ್ಷಣ ಪಡೆಯದಿದ್ದರೂ ಸಾವಿರಾರು ಹೆರಿಗೆಗಳನ್ನು ಮಾಡಿಸುತ್ತಿದ್ದರು. ಇವರಿಗೆ ಕೊಡುತ್ತಿದ್ದ ಸಂಭಾವನೆಯೂ ಅಷ್ಟಕ್ಕಷ್ಟೆ. ಆಗ ಹೆರಿಗೆಗಳ ಸಂಖ್ಯೆ ಹೆಚ್ಚಿದ್ದರೂ ಹೆರಿಗೆ ಮಾಡಿಸುವ ಖರ್ಚು ಮಾತ್ರ ನಗಣ್ಯ ಎಂಬಷ್ಟು ಕಡಿಮೆ. ಏಕೆಂದರೆ ಬಿಜ್ಜಲ್ತಿಗೆ ಕೊಡುತ್ತಿದ್ದುದು ಅತ್ಯಲ್ಪ ಮೊತ್ತ. ಈಗ …?

ದುಬಾರಿ ವೆಚ್ಚ!
ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಸಿಸೇರಿಯನ್‌ ವೆಚ್ಚ ಸುಮಾರು 30,000ರಿಂದ 70,000 ರೂ., ಸಹಜ ಹೆರಿಗೆಗೆ 15,000 ರಿಂದ 20,000 ಖರ್ಚಾಗುತ್ತಿದೆ. ಆದರೆ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಸೇವೆ ದೊರಕುತ್ತಿದೆ.

ಸಹಜ ಹೆರಿಗೆ ಉತ್ತಮ
ತಾಯಿ ಮಗುವಿನ ಆರೋಗ್ಯದ ದೃಷ್ಟಿಯಿಂದ ಸಹಜ ಡೆಲಿವರಿ ಉತ್ತಮ. ವೈದ್ಯರು ರಿಸ್ಕ್ ಅಂದಾಗ ಮಾತ್ರ ಸಿಸೇರಿಯನ್‌ಗೆ ಹೋಗುವುದು ಒಳ್ಳೆಯದು. ಸಿಸೇರಿಯನ್‌ ಹೆರಿಗೆ ಸಂದರ್ಭ ಆಗುವ ಗಾಯ ಗುಣವಾಗಲು ಸಮಯ ಬೇಕು. ತಾಯಿ ಅಧಿಕ ಸಮಯ ರೆಸ್ಟ್‌ ತೆಗೆದುಕೊಳ್ಳಬೇಕು. ಅದೇ ಸಹಜ ಹೆರಿಗೆಯಲ್ಲಿ ಗಾಯದ ಹಾಗೂ ಅಧಿಕ ಸಮಯ ರಸ್ಟ್‌ ತೆಗೆದುಕೊಳ್ಳಬೇಕಾಗಿಲ್ಲ.
-ಡಾ| ಮಮತಾ, ಪ್ರಸೂತಿ ತಜ್ಞೆ ಮತ್ತು ಎಸ್‌ಡಿಎಂ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ

ನೋವಿಲ್ಲದ ಹೆರಿಗೆ ಬಯಕೆ
ಉಡುಪಿ ಜಿಲ್ಲೆಯಲ್ಲಿ ಭಾವೀ ತಾಯಂದಿರು ನೋವಿಲ್ಲದ ಹೆರಿಗೆಗೆ ಹೆಚ್ಚಿನ ಒಲವು ನೀಡುತ್ತಿರುವುದು ಸಿಸೇರಿಯನ್‌ ಹೆರಿಗೆಗಳ ಸಂಖ್ಯೆ ಹೆಚ್ಚಾಗುತ್ತಿದೆ.
-ಡಾ| ಅಶೋಕ್‌, ಡಿಎಚ್‌ಒ ಉಡುಪಿ

ಯೋಗದ ಮೂಲಕ
ಸಹಜ ಹೆರಿಗೆ
ಯೋಗಜೀವನ ಸಹಜ ಹೆರಿಗೆಗೆ ಸಹಾಯಕವಾಗುತ್ತದೆ. ವಿವಿಧ ಯೋಗಾಸನಗಳು ಗರ್ಭದಲ್ಲಿರುವ ಮಗುವಿನ ಚಲನೆ ಹಾಗೂ ಸ್ಥಳ ಬದಲಾಯಿಸಲು ಸಹಕಾರಿ. ಯೋಗದಿಂದ ಗರ್ಭಿಣಿಯರಲ್ಲಿ ಧೈರ್ಯ ಹಾಗೂ ನೋವು ಸಹಿಸುವ ಶಕ್ತಿ ಹೆಚ್ಚಾಗುತ್ತದೆ.
– ಶೋಭಾ ಶೆಟ್ಟಿ,
ಬಿಕೆಎಸ್‌ ಅಯ್ಯಂಗಾರ್‌ ಶಿಷ್ಯೆ, ಯೋಗ ಶಿಕ್ಷಕಿ

-ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next