Advertisement

ಆ ದಿನಗಳಲ್ಲಿ, ಹೇಗಿತ್ತೆಂದರೆ…

10:55 PM Nov 18, 2019 | Lakshmi GovindaRaj |

ಒಳ್ಳೆ ಜರಿ ಪೀತಾಂಬರದ ಲಂಗ, ಇದ್ದ ಬದ್ದ ಒಡವೆಗಳನ್ನೆಲ್ಲ ಹಾಕಿ, ದಸರಾ ಬೊಂಬೆಗಳಂತೆ ಸಾಲಾಗಿ ಕೂರಿಸುತ್ತಿದ್ದರು, ಕೈಯಲ್ಲೊಂದು ಕರ್ಚೀಫ್ ಇಟ್ಟು… 

Advertisement

ಆಗೆಲ್ಲಾ ಮದುವೆ ಅಂದರೆ ಅದೆಷ್ಟು ಸಂಭ್ರಮದ ವಿಚಾರ. “ಕುಟುಂಬ ಸಮೇತರಾಗಿ ಬರಬೇಕು’ ಎಂದು ಲಗ್ನಪತ್ರಿಕೆಯಲ್ಲಿ ಬರೆದಿದ್ದನ್ನು ಅಕ್ಷರಶಃ ಪಾಲಿಸುತ್ತಿದ್ದರು, ಹಿರಿಯರು. ಜೊತೆಗೆ ಹೊರಡುತ್ತಿತ್ತು ಮಕ್ಕಳ ಸೈನ್ಯ. ಏನಾದರೂ ಸರಿಯೇ, ಹುಡುಗಿಯರನ್ನಂತೂ ಬಿಟ್ಟುಹೋಗುತ್ತಿರಲಿಲ್ಲ. ನಾಳೆ ಮದುವೆ ಆಗುವವರಲ್ಲವೇ ಅವರು. ಹಾಗಾಗಿ, ಅವರ ಅಲಂಕಾರಕ್ಕೂ ಹೆಚ್ಚು ಪ್ರಾಶಸ್ತ್ಯ.

ನನಗೆ ಇನ್ನೂ ಜ್ಞಾಪಕ ಇದೆ, ಒಳ್ಳೆ ಜರಿ ಪೀತಾಂಬರದ ಲಂಗ, ಇದ್ದಬದ್ದ ಒಡವೆಗಳನ್ನೆಲ್ಲ ಹಾಕಿ, ದಸರಾ ಬೊಂಬೆಗಳಂತೆ ಸಾಲಾಗಿ ಕೂರಿಸುತ್ತಿದ್ದರು ನಮ್ಮನ್ನೆಲ್ಲ, ಕೈಯಲ್ಲೊೊಂದು ಕರ್ಚೀಫ್ ಇಟ್ಟು. ( ಮೂಗು ಬಾಯನ್ನು ಹಾಯಾಗಿ ಲಂಗದಲ್ಲಿ ಒರೆಸಿಕೊಳ್ಳಬಾರದಲ್ಲ) ಗಂಡುಮಕ್ಕಳ ತಾಯಂದಿರ ಕಣ್ಣಿಗೆ ಮಗಳು ಬೀಳುವ ಹಾಗೆಯೇ ಊಟದ ಪಂಕ್ತಿಯಲ್ಲಿ ಜಾಗ ಹಿಡಿಯುತ್ತಿದ್ದರು. ಪದಕ, ಸರಗಳು ಎದ್ದು ಕಾಣಲಿ ಎಂದು, ಆಗಾಗ್ಗೆ ಅದನ್ನು ಸರಿ ಮಾಡುವುದು ಬೇರೆ.

ಅದೆಲ್ಲಾ ಎದುರಲ್ಲಿ ಬಿಗುಮಾನದಿಂದ ಕುಳಿತಿರುವ ಪಾರ್ಟಿಗೆ ಗೊತ್ತಾಗದೇ ಇರುವುದೇ? ಮೆಲುನಗೆ ತಂದುಕೊಂಡು ಆ ಹುಡುಗಿಯರನ್ನು ಗಮನಿಸುವುದು, ಅಕ್ಕಪಕ್ಕದಲ್ಲಿದ್ದ ತಮ್ಮವರೊಡನೆ ಕಣ್ಸನ್ನೆಯಲ್ಲಿ ಮಾತಾಡಿಕೊಳ್ಳುವುದು, ಅವರೂ ಬಗ್ಗಿ ಬಗ್ಗಿ ನೋಡುವುದು, ಮತ್ತೆ ಕಣ್ಸನ್ನೆ, ತಲೆಗಳ ಚಲನೆ-ಪಿಸುಮಾತು…ಇವೆಲ್ಲಾ ನಡೆದ ನಂತರ, ಆ ಮುಖಗಳಲ್ಲಿ ಪ್ರಸನ್ನತೆ ಮೂಡಿದರೆ ಹೆಣ್ಣಿನ ಕಡೆಯವರಿಗೆ ಸಂತಸ! ಪಾಪ, ಆ ಮಕ್ಕಳಿಗೆ ಇದಾವುದರ ಪರಿವೆಯೂ ಇಲ್ಲ! ತಮ್ಮ ಪಾಡಿಗೆ ತಾವು ಊಟ ಮಾಡುತ್ತಿದ್ದವು.

ಊಟವಾದ ಮೇಲೆ ತಂಬೂಲ ಮೆಲ್ಲುವಾಗ ಗಂಡಿನ ಕಡೆಯವಳೊಬ್ಬಳು-“ಎಷ್ಟು ಚೆನ್ನಾಾಗಿದೆ ಸರ’-ಎನ್ನುತ್ತಾಾ ಹುಡುಗಿಯ ಕುತ್ತಿಗೆಯ ಸರವನ್ನು ಜಗ್ಗಿ ನೋಡುತ್ತಿದ್ದಳು; ಸುಮಾರು ಎಷ್ಟು ಚಿನ್ನ ಇರಬಹುದು ಎಂದು ಊಹಿಸಲು. ಅದಾದಮೇಲೆ, “ಬಳೆ ಚೆನ್ನಾಗಿದೆ, ಎಲ್ಲಿ ಮಾಡಿಸಿದ್ದು?’ ಎಂದು ಕೈ ಹಿಡಿದರೆ ತಕ್ಷಣ ಅರಿವಾಗಿಬಿಡುತ್ತಿತ್ತು, ಚಿನ್ನದ್ದೇ, ಅಲ್ಲವೇ? ಎಷ್ಟು ತೊಲ ಚಿನ್ನ ಹಿಡಿಸಿರಬಹುದು, ಎಂಬುದೆಲ್ಲಾ.

Advertisement

ಅದಾದ ಮೇಲೆ, ಹುಡುಗಿಯ ವಯಸ್ಸು-ಗೋತ್ರ-ನಕ್ಷತ್ರ, ಮನೆಕೆಲಸ ಬರುತ್ತಾ, ದೇವರಿಗೆ ಹೂ ಕಟ್ಟೋದು, ಹೂಬತ್ತಿ ಮಾಡೋದು, ಥರಥರಾವರಿ ರಂಗೋಲಿ ಇಡೋದು, ನಾಲ್ಕು ದೇವರ ಹಾಡು, ಮಡಿ ಮೈಲಿಗೆಯ ಪ್ರಜ್ಞೆ, ಹಿರಿಯರ ಬಗ್ಗೆ ಭಕ್ತಿ-ಗೌರವ… ಮೈ ನೆರೆದಿಲ್ಲ ತಾನೆ? ಇತ್ಯಾದಿ ಇತ್ಯಾದಿ. ಓದಿನ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಹಾಲಿನ ಲೆಕ್ಕ, ಪತ್ರ ಗೀಚಲಿಕ್ಕೆ ಬಂದರೆ ಸಾಕು ಹುಡುಗಿಗೆ; ಜಾಸ್ತಿ ಓದಿ ಅವಳೇನು ಕೆಲಸಕ್ಕೆ ಹೋಗಬೇಕೇ ಎಂದು ನೇರವಾಗಿಯೇ ಹೇಳಿಬಿಡುತ್ತಿದ್ದರು.

ಈಗಿನಂತಿರಲಿಲ್ಲ ಕಾಲ. ಪಾಪ, 80ರ ದಶಕದವರೆಗೂ, ಮನೆಯವರೆಲ್ಲ ಒಪ್ಪಿದ ಹುಡುಗ- ಹುಡುಗಿಯನ್ನು ಮರುಮಾತಿಲ್ಲದೆ ಮದುವೆಯಾಗುವ ಅನಿವಾರ್ಯವಿತ್ತು. “ಅವರ ಒಳ್ಳೆಯದಕ್ಕೆ ತಾನೇ ನಾವು ಯಾವಾಗ್ಲೂ ಯೋಚಿಸೋದು’ ಎನ್ನುವ ಮೂಲಕ, ಹಿರಿಯರು ಎಲ್ಲರ ಬಾಯಿ ಮುಚ್ಚಿಸುತ್ತಿದ್ದರು. ಹುಡುಗ-ಹುಡುಗಿಯರೂ ಅಷ್ಟೇ; ದೊಡ್ಡವರು ಒಪ್ಪಿದ ಮೇಲೆ ನಮ್ಮದೇನಿದೆ? ಎನ್ನುತ್ತಾ ಸಂಭ್ರಮದಿಂದಲೇ ಹೊಸ ಬದುಕಿನ ಬಂಡಿ ಎಳೆಯಲು ಒಂದಾಗಿ ಬರುತ್ತಿದ್ದರು. ಬದುಕಿನುದ್ದಕ್ಕೂ ಜೊತೆಯಾಗಿ ನಡೆಯುತ್ತಿದ್ದರು. ಅನ್ಯೋನ್ಯವಾಗಿ ಬದುಕುತ್ತಿದ್ದರು… ಅದಕ್ಕೇ ಹೇಳಿದ್ದು, ಆಗಿನ ಕಾಲ ಈಗಿನಂತಿರಲಿಲ್ಲ ಎಂದು…

* ನುಗ್ಗೆಹಳ್ಳಿ ಪಂಕಜ

Advertisement

Udayavani is now on Telegram. Click here to join our channel and stay updated with the latest news.

Next