Advertisement

ಬಜೆಯಲ್ಲಿದೆ ಲಕ್ಷ ಲೋಡು ಹೂಳು: ತೆಗೆದರೆ ನೀರು,ತೆಗೆಯದಿರೆ ಕಣ್ಣೀರು!

03:56 PM May 07, 2017 | Team Udayavani |

ಉಡುಪಿ: ನಗರದಲ್ಲಿ ಮಾತ್ರವಲ್ಲದೆ ಎಲ್ಲೆಡೆಯೂ ನೀರಿಗೆ  ಹಾಹಾಕಾರ ಎದ್ದಿದೆ. ಕಳೆದ ವರ್ಷ ಮಳೆ ಪ್ರಮಾಣ ಕಡಿಮೆಯಾದ್ದು, ಮಳೆಗಾಲ ಬೇಗನೆ ಕೊನೆಗೊಂಡದ್ದು ಕಾರಣವಾದರೂ ಬಜೆಯಲ್ಲಿ ಹೂಳು ತೆಗೆಯದೆ ಇದ್ದುದೂ ಇನ್ನೊಂದು ಪ್ರಮುಖ ಕಾರಣಗಳಲ್ಲಿ ಒಂದು ಎಂಬ ವಾದವಿದೆ. ಒಂದು ಅಂದಾಜಿನ ಪ್ರಕಾರ ಸ್ಥಳೀಯರು ಹೇಳುವಂತೆ ಒಂದು ಲಕ್ಷ ಲೋಡು ಹೂಳು ಅಲ್ಲಿ ತುಂಬಿಕೊಂಡಿದೆ. ಇಷ್ಟೊಂದು ಹೂಳು ತುಂಬಿದರೆ ನೀರು ನಿಲ್ಲುವುದಾದರೂ ಎಲ್ಲಿ?

Advertisement

ಸುಮಾರು ಹತ್ತು ವರ್ಷಗಳ ಹಿಂದೆ ಮರಳುಗಾರಿಕೆ ನಿಷೇಧವಾದಾಗ ಬಜೆ ಅಣೆಕಟ್ಟು ಪ್ರದೇಶದಲ್ಲಿ ಹೂಳು ತೆಗೆಯಲೂ ಇದನ್ನು ಥಳುಕು ಹಾಕಲಾಯಿತು. ಹೂಳು ತೆಗೆಯುವುದೆಂದರೆ ಅದು ಮರಳು ತೆಗೆಯುವುದು ಎಂಬ ವ್ಯಾಖ್ಯಾನ ನೀಡಿದರು. ಆದರೆ ಆಯಾ ವರ್ಷ ಜಿಲ್ಲಾಧಿಕಾರಿಯವರು ವಿಶೇಷ ಮುತುವರ್ಜಿಯಿಂದ ಹೂಳು ತೆಗೆಸುತ್ತಿದ್ದರು. ಇದು ನಡೆಯದೆ ನಾಲ್ಕೈದು ವರ್ಷಗಳೇ ಆಗಿವೆ.

ಮಳೆಗಾಲ ಆರಂಭವಾದಾಗ ಘಟ್ಟದ ಮೇಲಿನ ಮಣ್ಣು ನೀರಿನ ಜತೆ ಹರಿದುಬರುತ್ತದೆ. ನದಿ ಯಲ್ಲಿ ನೀರಿನ ಹರಿಯುವಿಕೆ ಸುಮಾರು ಜನವರಿವರೆಗೆ ಇರುತ್ತದೆ. ಈ ಅವಧಿಯಲ್ಲಿ ಸಂಗ್ರಹವಾದ ಹೂಳನ್ನು ತೆಗೆದರೆ ನೀರಿನ ಶೇಖರಣೆ ಸಾಧ್ಯವಾಗುತ್ತದೆ. ಇಲ್ಲವಾದರೆ ಶೇಖರಣೆಯಾದ ಹೂಳಿನ ಮೇಲಿನಿಂದ ನೀರು ಹರಿದು ಸಮುದ್ರ ಸೇರುತ್ತದೆ. ಈಗ ಆದದ್ದೂ ಅಷ್ಟೆ ಎನ್ನಲಾಗುತ್ತಿದೆ.

ನೀರೂ ಲಭ್ಯ; ಮರಳೂ ಲಭ್ಯ
ಒಂದು ಕಡೆ ಮರಳುಗಾರಿಕೆಗೆ ನಿಷೇಧ, ಇನ್ನೊಂದು ಕಡೆ ಮರಳಿಗೆ ಹಾಹಾಕಾರ ಇವೆರಡು ಮುಖಗಳು ಕಂಡುಬರುತ್ತಿದ್ದರೆ ಇಲ್ಲಿ ಕಾನೂನು ಪರಿಪಾಲಿಸಿ ಹೂಳು ತೆಗೆಯದೆ ಇದ್ದದ್ದು ನೀರಿನ ಹಾಹಾಕಾರಕ್ಕೆ ಕಾರಣವಾಗಿದೆ. ಕಾನೂನು ಪಾಲನೆ ಮುಖ್ಯವೋ? ಜನರಿಗೆ ಕುಡಿಯುವ ನೀರು ಮುಖ್ಯವೋ? ಬಜೆ ಅಣೆಕಟ್ಟು ಪ್ರದೇಶದಲ್ಲಿ ತುಂಬಿದ ಹೂಳನ್ನು ಬಡಜನರಿಗೆ ಕಡಿಮೆ ದರದಲ್ಲಿ ಮರಳು ಆಗಿ ನೀಡಬಹುದು. ಆಗ ಒಂದಿಷ್ಟು ಮರಳು ಹಾಹಾಕಾರ ನೀಗೀತು, ಜತೆಗೆ ಮುಖ್ಯವಾಗಿ ನೀರಿನ ಬವಣೆ ಬಗೆಹರಿದೀತು. ಈ ಸಮಸ್ಯೆಯನ್ನು ಬಗೆ ಹರಿಸದೆ ಎಷ್ಟು ಅಣೆಕಟ್ಟು ಕಟ್ಟಿದರೂ ಜನರಿ ಗೇನೂ ಲಾಭವಾಗದು, ಜತೆಗೆ ಜನರ ತೆರಿಗೆ ಹಣ ಪೋಲು ಆಗುತ್ತದೆಯಲ್ಲವೆ? ಹಾಗೆಂದ ಮಾತ್ರಕ್ಕೆ ಈಗಲೇ ಹೂಳೆತ್ತಿದರೆ ತತ್‌ಕ್ಷಣ ನೀರಿನ ಸಂಗ್ರಹವಾಗುವುದಿಲ್ಲ. ಆದರೆ ಮುಂದಿನ ಮಳೆಗಾಲದ ಕೊನೆಯಲ್ಲಿ ಹೂಳೆತ್ತಿದರೆ ಆ ಸ್ಥಳದಲ್ಲಿ ನೀರು ಸಂಗ್ರಹವಾಗಲು ಅನುಕೂಲವಾದೀತು. ಈಗ ತತ್‌ಕ್ಷಣಕ್ಕೆ ಮರಳು ಬೇಕಾದವರಿಗೆ ಸರಕಾರವೇ ಕಡಿಮೆ ದರದಲ್ಲಿ ನೀಡಬಹುದು.

ವಿ-ಭಿನ್ನಾಭಿಪ್ರಾಯಗಳು
ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ತಾಂತ್ರಿಕವಾಗಿ ಹೂಳೆತ್ತುವುದರಿಂದ ಬಹಳ ಉಪಕಾರವಾಗುತ್ತದೆಂದು ಕಂಡುಬರುವುದಿಲ್ಲ ಎನ್ನುತ್ತಾರೆ. ಹೂಳೆತ್ತಲು ಜಿಲ್ಲಾಧಿಕಾರಿಯವರಿಗೆ ಹೇಳುತ್ತಲೇ ಇದ್ದೇನೆ. ಇದರಿಂದ ಸ್ವಲ್ಪವಾದರೂ ಉಪಕಾರವಾದೀತು ಎಂದು ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಹೇಳುತ್ತಾರೆ. ಕಾನೂನಿನ ಅಡಚಣೆ ಇದ್ದರೂ ಜಿಲ್ಲಾಧಿಕಾರಿಯವರ ಮೇಲೆ ಒತ್ತಡ ತಂದು ಹೂಳು ಎತ್ತಿದ್ದೆವು ಎನ್ನುತ್ತಾರೆ ಮಾಜಿ ಶಾಸಕ ಕೆ. ರಘುಪತಿ ಭಟ್‌. ಪರವಿರೋಧವಾದ ವಿಚಾರಗಳಿರುವಾಗ ತಜ್ಞರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕಾಗುತ್ತದೆ. ಮಣಿಪಾಲದ ಎಂಐಟಿ, ಸುರತ್ಕಲ್‌ ಎನ್‌ಐಟಿಕೆ ಜಾಗತಿಕ ಮಟ್ಟದ ಸಂಸ್ಥೆಗಳು. ಇಲ್ಲಿ ತಜ್ಞ ತಂತ್ರಜ್ಞಾನಿಗಳಿದ್ದಾರೆ.

Advertisement

ತಂತ್ರಜ್ಞಾನಿಗಳ ತಂಡವನ್ನು ನೇಮಿಸಿ ಅವರ ಅಭಿಪ್ರಾಯ ಪಡೆದು ಸೂಕ್ತ ಕ್ರಮಕ್ಕೆ ಮುಂದಾದರೆ ನೀರಿನ ಬವಣೆ ಬಗೆಹರಿಯಲು ಅನುಕೂಲವಾದೀತು. ಹೂಳೆತ್ತುವುದರಿಂದ ಉಪಕಾರವಾಗುವುದಿಲ್ಲವೆಂದರೆ ಪರ್ಯಾಯ ಮಾರ್ಗಕ್ಕಾದರೂ ತಜ್ಞರ ಸಲಹೆ ಪಡೆಯಬೇಕು. ಈ ಸಲಹೆ ಕಾನೂನು ಸಂದಿಗ್ಧತೆ ಉಂಟಾದಾಗಲೂ ಉಪಕಾರವಾಗುತ್ತದೆ.

ಉಪಕಾರವಾಗದು
ಬಜೆ ಅಣೆಕಟ್ಟಿನಲ್ಲಿ ಪಂಪಿಂಗ್‌ ಮಾಡುವ ಜಾಕ್‌ವೆಲ್‌ ನೀರಿನ ಮಟ್ಟ 1.38 ಮೀ. ಇರುತ್ತದೆ. ಇದಕ್ಕಿಂತ ಕೆಳಗೆ ನೀರಿದ್ದರೆ ನೀರನ್ನು ಪಂಪು ಮಾಡಲು ಆಗುವುದಿಲ್ಲ. ಮಳೆಗಾಲದ ಅವಧಿಯಲ್ಲಿಯಾಗಲೀ ಮಳೆಗಾಲದ ಕೊನೆಯಲ್ಲಾಗಲೀ ಹೂಳೆತ್ತಿದರೆ ಕೆಸರು ಆಗುತ್ತದೆ. ವರ್ಷದ 365 ದಿನವೂ ನೀರನ್ನು ಪಂಪು ಮಾಡುವುದರಿಂದ ಹೀಗಾದರೆ ತೊಂದರೆ ಆಗುತ್ತದೆ. ಹೂಳೆತ್ತುವುದರಿಂದ ಉಪಕಾರವಾಗುತ್ತದೆ ಎಂದು ನನಗೆ ಯಾರೂ ಮನವರಿಕೆ ಮಾಡಿಲ್ಲ.
– ಪ್ರಮೋದ್‌ ಮಧ್ವರಾಜ್‌,
 ಉಸ್ತುವಾರಿ ಸಚಿವರು, ಉಡುಪಿ ಜಿಲ್ಲೆ

ಒತ್ತಾಯಿಸುತ್ತಿದ್ದೇನೆ
ನಾನು ಹೋದ ವರ್ಷದಿಂದ ಹೇಳುತ್ತಲೇ ಇದ್ದೇನೆ. ನಾನು ಇತ್ತೀಚೆಗೆ ಹೋಗಿ ನೋಡಿದಾಗ ನದಿ ಮಧ್ಯೆ, ಬದಿಗಳಲ್ಲಿ ಗುಡ್ಡ ಬೆಟ್ಟದಂತೆ ಹೂಳು ತುಂಬಿ ಗಿಡಗಳು ಬೆಳೆದಿರುವುದನ್ನು ಕಂಡಿದ್ದೇನೆ. ಮುಂದೆ ಇದು ಮರವಾಗಿ ಬೆಳೆದೀತು. ನಾನು ಜಿಲ್ಲಾಧಿಕಾರಿಯವರಲ್ಲಿ ಹೂಳೆತ್ತುವ ಕೆಲಸ ಮಾಡಿಸಿ ಎಂದಾಗ ಮರಳುಗಾರಿಕೆ ನಿಷೇಧದಿಂದ ಆಗುತ್ತಿಲ್ಲ ಎಂದು ಹೇಳುತ್ತಾರೆ. ಈಗಲಾದರೂ ತೆಗೆದರೆ ಮುಂದಿನ ವರ್ಷದ ನೀರಿನ ಸಮಸ್ಯೆ ಸ್ವಲ್ಪವಾದರೂ ಬಗೆಹರಿದೀತು. ಏನು ಮಾಡಬೇಕೆಂದು ಗೊತ್ತಾಗ್ತಿಲ್ಲ.
– ಮೀನಾಕ್ಷಿ ಮಾಧವ ಬನ್ನಂಜೆ,
 ನಗರಸಭಾಧ್ಯಕ್ಷೆ, ಉಡುಪಿ

ಹಿಂದೆ ಮಾಡಿದ್ದೆವು
ಬಜೆ ಅಣೆಕಟ್ಟು ಪ್ರದೇಶದಲ್ಲಿಯೇ ಮರಳುಗಾರಿಕೆ ನಿಷೇಧ ಎಂದಿಲ್ಲ. ಎಲ್ಲ ಕಡೆಯ ಮರಳುಗಾರಿಕೆ ನಿಷೇಧದಂತೆ ಬಜೆಗೂ ಅನ್ವಯವಾಗುತ್ತದೆ. 2012ರ ವರೆಗೂ ಪ್ರತಿವರ್ಷ ಜಿಲ್ಲಾಧಿಕಾರಿಯವರ ಮೇಲೆ ಒತ್ತಡ ಹೇರಿ ಹೂಳು ಎತ್ತಿದ್ದೆವು. ನಮಗೆ ಕುಡಿಯುವ ನೀರು ಮುಖ್ಯ.
– ಕೆ. ರಘುಪತಿ ಭಟ್‌, 
ಮಾಜಿ ಶಾಸಕರು, ಉಡುಪಿ

ಇದೇ ತಂತ್ರ ಅದಕ್ಕೂ…
ಈಗ ಡ್ರೆಜ್ಜಿಂಗ್‌ ಮಾಡಿ ನೀರನ್ನು ಬಜೆ ಕಡೆಗೆ ರಿದುಬಿಡುತ್ತಿದ್ದಾರೆ. ಹೂಳೆತ್ತಿ ನೀರು ಸಂಗ್ರಹವಾದಾಗಲೂ ಇದೇ ತಂತ್ರವನ್ನು ಅನ್ವಯಿಸಿ ನೀರು ಸಂಗ್ರಹಾಗಾರಕ್ಕೆ ಬಿಡಬಹುದು.
– ಆನಂದ್‌, ನಿವೃತ್ತ ಎಂಜಿನಿಯರ್‌, ಉಡುಪಿ ನಗರಸಭೆ. 

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next