ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸಿದ್ಧತಾ ಕಾರ್ಯ ಪ್ರಾರಂಭಿಸಿದ್ದು, ಸೆ. 1ರಿಂದ 10ರ ವರೆಗೆ “ಮತದಾರರ ಚೇತನ ಮಹಾಭಿಯಾನ’ ನಡೆಸಲು ತೀರ್ಮಾನಿಸಿದೆ. “ನನ್ನ ದೇಶ- ನನ್ನ ಮತ’ ಘೋಷವಾಕ್ಯದೊಂದಿಗೆ ಈ ಅಭಿಯಾನ ಪ್ರಾರಂಭವಾಗಲಿದೆ.
ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ತೇಜಸ್ವಿ ಸೂರ್ಯ, 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಐತಿಹಾಸಿಕ ಗೆಲುವು ಸಾಧಿಸಿ ದೇಶವನ್ನು ಮತ್ತೆ ಮುನ್ನಡೆಸುತ್ತಾರೆಂಬ ಸಂಪೂರ್ಣ ನಂಬಿಕೆ ಇದೆ. ಮೋದಿಗೆ ಶಕ್ತಿ ತುಂಬಬೇಕಿದ್ದರೆ ಪ್ರತಿಯೊಬ್ಬ ಪ್ರಜೆಯೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಅಭಿಯಾನ ಪ್ರಾರಂಭಿಸುತ್ತಿದ್ದೇವೆ ಎಂದು ಹೇಳಿದರು.
ಪ್ರತಿ ಲೋಕಸಭಾ ಚುನಾವಣೆಗೂ ಮುನ್ನ ಮತದಾರರ ಪಟ್ಟಿ ಪರಿಷ್ಕರಿಸಲಾಗುತ್ತದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ನಿರ್ದೇಶನದಂತೆ ಹೊಸ ಮತದಾರರ ನೋಂದಣಿ ಮತ್ತು ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯವನ್ನು ಆದ್ಯತೆ ಮೇರೆಗೆ ಮಾಡಬೇಕಾಗಿದೆ. 58 ಸಾವಿರಕ್ಕೂ ಹೆಚ್ಚು ಬೂತ್‌ಗಳಲ್ಲಿ ಈ ಕಾರ್ಯ ನಡೆಯಲಿದೆ. ಪ್ರತಿ ಜಿಲ್ಲೆಯಲ್ಲಿ ಈ ಕಾರ್ಯಕ್ಕಾಗಿ 3 ಸದಸ್ಯರ ಜಿಲ್ಲಾ ಸಮಿತಿ ಮತ್ತು ವಿಧಾನಸಭೆ ಕ್ಷೇತ್ರಕ್ಕೆ 3 ಜನರ ಸಮಿತಿ ಮತ್ತು ಶಕ್ತಿ ಕೇಂದ್ರ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗುತ್ತಿದೆ. ವಿಧಾನಸಭಾ ಮಟ್ಟದಲ್ಲಿ ಬಿಎಲ್ ಎ-1 ಮತ್ತು ಬೂತ್ ಮಟ್ಟದಲ್ಲಿ ಬಿಎಲ್ ಎ-2 ನೇಮಕ ಮಾಡುತ್ತಿದ್ದೇವೆ ಎಂದರು.
ಮತದಾರರ ಪಟ್ಟಿ ತಿದ್ದುಪಡಿ ಮತ್ತು ನೋಂದಣಿಗೆ ವ್ಯಾಪಕವಾದ ಯೋಜನೆ ರೂಪಿಸ ಬೇಕು ಮತ್ತು ಯೋಜನೆಯ ಪರಿಶೀಲನೆ ಯನ್ನು ಕಾಲಕಾಲಕ್ಕೆ ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಮಾಡಲಿದ್ದೇವೆ. ಪರಿಣಾಮಕಾರಿ ಅನು ಷ್ಠಾನಕ್ಕಾಗಿ ರಾಜ್ಯ ಮಟ್ಟದಲ್ಲಿ ತಂಡ ರಚಿಸಿದ್ದು, ಸಂಸದ ತೇಜಸ್ವಿ ಸೂರ್ಯ, ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕ ಪಿ.ರಾಜೀವ್, ರಾಜ್ಯ ಕಾರ್ಯಕಾರಿಣಿ ಸದಸ್ಯ ವಿವೇಕ್ ರೆಡ್ಡಿ, ಮುಖಂಡ ಲೋಕೇಶ್ ಬಿಜ್ಜಾವರ ಸದಸ್ಯರಾಗಿರುತ್ತಾರೆ ಎಂದರು.
ಮತದಾನ ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯ. ಸಶಕ್ತ ಹಾಗೂ ಸುಭದ್ರ ಸರಕಾರದ ಆಯ್ಕೆ ನಮ್ಮೆಲ್ಲರ ಕರ್ತವ್ಯ. ಪ್ರಧಾನಿ ಮೋದಿಯವರ ಕೈ ಬಲಪಡಿಸಲು ನಾವೆಲ್ಲರೂ ಈ ಪವಿತ್ರ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು.
-ತೇಜಸ್ವಿ ಸೂರ್ಯ, ಬೆಂಗಳೂರು ದಕ್ಷಿಣ ಸಂಸದ